ಹಿಂದೂ ಎನ್ನುವುದು ಜೀವನದ ದರ್ಶನ

KannadaprabhaNewsNetwork |  
Published : Feb 09, 2026, 01:30 AM IST
ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮವೇ ನಮ್ಮನ್ನು ರಕ್ಷಿಸುತ್ತದೆ | Kannada Prabha

ಸಾರಾಂಶ

ಹಿಂದೂ ಎನ್ನುವುದು ಕೇವಲ ಒಂದು ಧರ್ಮವಲ್ಲ, ಅದು ಜೀವನದ ಒಂದು ದರ್ಶನ, ಬದುಕುವ ಸಂಸ್ಕೃತಿಯಾಗಿದೆ ಎಂದು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಹಿಂದೂ ಎನ್ನುವುದು ಕೇವಲ ಒಂದು ಧರ್ಮವಲ್ಲ, ಅದು ಜೀವನದ ಒಂದು ದರ್ಶನ, ಬದುಕುವ ಸಂಸ್ಕೃತಿಯಾಗಿದೆ ಎಂದು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವದ ಭವ್ಯ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವೀಯತೆ, ಸಹಜತೆ, ಸಹಬಾಳ್ವೆ , ಧರ್ಮಪಾಲನೆ ಈ ಎಲ್ಲವೂ ಹಿಂದೂ ಜೀವನ ಪದ್ಧತಿಯ ಮೂಲ ಮೌಲ್ಯಗಳು. ನಾವು ಉತ್ತಮವಾಗಿ ಬದುಕುವುದೇ ಹಿಂದೂ ಧರ್ಮದ ಸಾರ್ಥಕತೆಯಾಗಿದೆ. ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮವೇ ನಮ್ಮನ್ನು ರಕ್ಷಿಸುತ್ತದೆ ಎಂಬ ಸನಾತನ ಸತ್ಯವನ್ನು ಹಿಂದೂ ಧರ್ಮ ಸಾರುತ್ತದೆ. ಇಂದಿನ ಕಾಲಘಟ್ಟದಲ್ಲಿ ಹಿಂದೂ ಸಮಾಜವು ಒಗ್ಗಟ್ಟಾಗಿ ನಿಲ್ಲುವ ಅಗತ್ಯ ಬಹಳವಾಗಿದೆ. ಜಾತಿ-ಪಂಥಗಳ ಭೇದ ಮರೆತು, ಹಿಂದೂಗಳೆಲ್ಲರೂ ಒಂದೇ ಕುಟುಂಬ ಎಂಬ ಭಾವನೆಯೊಂದಿಗೆ ಧರ್ಮರಕ್ಷಣೆಗಾಗಿ ಪಣತೊಟ್ಟು ನಿಲ್ಲಬೇಕು. ಧರ್ಮರಕ್ಷಣೆ ನಮ್ಮ ಉಸಿರಾಗಬೇಕು, ನಮ್ಮ ದೇಹದ ಭಾಗವಾಗಬೇಕು, ಎಂದು ಭಾವಪೂರ್ಣವಾಗಿ ಕರೆ ನೀಡಿದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ತುಮಕೂರು ಹಿರಿಯ ಪ್ರಾಧ್ಯಾಪಕ ಕೊಟ್ರೇಶ್ ಹಿಂದೂ ಧರ್ಮವು ಸಾವಿರಾರು ವರ್ಷಗಳಿಂದ ಮಾನವ ಬದುಕಿಗೆ ದಿಕ್ಕು ತೋರಿದ ಮಹಾಸಂಸ್ಕೃತಿ. ಸಹಿಷ್ಣತೆ, ಸಮನ್ವಯ, ಸರ್ವಧರ್ಮ ಸಮಭಾವನೆ, ಇವು ಹಿಂದೂ ಧರ್ಮದ ಆತ್ಮ. ಇಂದಿನ ಯುವ ಪೀಳಿಗೆ ನಮ್ಮ ಸಂಸ್ಕೃತಿ, ಪರಂಪರೆ, ಧರ್ಮದ ತತ್ತ್ವಗಳನ್ನು ಅರಿತು ಅವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜ ಸದೃಢವಾಗುತ್ತದೆ ಎಂದು ಹೇಳಿದರು.

ಕೊರಟಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರ ಧ್ವಜಗಳು, ಘೋಷಣೆಗಳು, ಭಕ್ತಿಗೀತೆಗಳೊಂದಿಗೆ ಸಾಗಿದ್ದು, ಹಿಂದೂ ಸಮಾಜದ ಒಗ್ಗಟ್ಟು, ಸಂಸ್ಕೃತಿ ಹಾಗೂ ಆತ್ಮಗೌರವವನ್ನು ಪ್ರತಿಬಿಂಬಿಸುವ ದೃಶ್ಯವಾಗಿ ಕಾಣಿಸಿತು. ಕಾರ್ಯಕ್ರಮವು ಸಮಾಜದಲ್ಲಿ ಧರ್ಮಬುದ್ಧಿ, ಸಾಂಸ್ಕೃತಿಕ ಅರಿವು ಹಾಗೂ ಏಕತೆಯ ಸಂದೇಶವನ್ನು ಸಾರುವ ಮಹತ್ವದ ವೇದಿಕೆಯಾಗಿ ಮೂಡಿಬಂದಿತು. ಕಾರ್ಯಕ್ರಮದಲ್ಲಿ ಹಿಂದೂ ಸಮಾಜೋತ್ಸವದ ಅಧ್ಯಕ್ಷ ಡಾ. ಆರ್ ಮಲ್ಲಿಕಾರ್ಜುನ್, ಆರ್‌ಎಸ್‌ಎಸ್ ಸಂಘದ ತಾಲೂಕು ಸಂಚಾಲಕ ಉಮೇಶ್, ಬಿಜೆಪಿ ತಾಲೂಕು ಅಧ್ಯಕ್ಷ ರುದ್ರೇಶ್, ಮಾಜಿ ಅಧ್ಯಕ್ಷರಾದ ಎಸ್. ಪವನ್ ಕುಮಾರ್, ದರ್ಶನ್, ಕನ್ನಿಕಾ ವಿದ್ಯಾಪೀಠದ ಅಧ್ಯಕ್ಷ ಎಸ್. ಸುಧೀರ್, ವಾಸವಿ ಮಾತೃ ಮಂಡಳಿಯ ಅಧ್ಯಕ್ಷೆ ಸುಧಾಮಣಿ, ಜಗಜ್ಯೋತಿ ಬಸವೇಶ್ವರ ದೇವಾಲಯ ಸಮಿತಿಯ ಕಾರ್ಯದರ್ಶಿ ಜಗದೀಶ್, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಜಿಲ್ಲಾ ಅಧ್ಯಕ್ಷ ಮಮತಾ ದಿವಾಕರ್, ಪಟ್ಟಣ ಪಂಚಾಯತ್ ಸದಸ್ಯ ಪ್ರದೀಪ್‌ಕುಮಾರ್, ಮುಖಂಡರಾದ ಎಂ.ಜಿ ಭದ್ರಿಪ್ರಸಾದ್, ಕೃಷ್ಣಮೂರ್ತಿ, ನಂಜುಂಡ ಶೆಟ್ಟಿ, ಸಿ.ಎಸ್. ಹನುಮಂತರಾಜು, ವಿಜಯಕುಮಾರ್, ರವಿಕುಮಾರ್, ಚೆನ್ನನಂಜಯ್ಯ, ವಿ. ಮಲ್ಲೇಶಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ, ಹಿಂದೂ ಸಮಾಜೋತ್ಸವಕ್ಕೆ ತಮ್ಮ ಬೆಂಬಲ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ : ತೇಜಸ್ವಿ ಸೂರ್ಯ
ಜಿಬಿಎ ಪಾಲಿಕೆಗಳ ಚುನಾವಣೆಯಲ್ಲಿ ಬ್ಯಾಲೆಟ್‌ ಮತದಾನಕ್ಕೆ ತೊಂದರೆ ಆಗದಂತೆ ಕ್ರಮ: ಸುನೀಲ್ ಕುಮಾರ್‌