ಹುಬ್ಬಳ್ಳಿ: ಶ್ರೇಣಿಕೃತ ಜಾತಿ ವ್ಯವಸ್ಥೆಯ ಹಿಂದೂ ಧರ್ಮದಲ್ಲಿ ಯಾರೂ ಮಾದಿಗರನ್ನು ತಮ್ಮವರೆಂದು ಮನಃಪೂರ್ವಕ ಪ್ರೀತಿಯಿಂದ ಅಪ್ಪಿಕೊಳ್ಳುತ್ತಿಲ್ಲ. ಅಂಬೇಡ್ಕರ್ ಬಳಿಕವೂ ನಮಗೆ ದಾರಿ ಸಿಗದೇ ನೊಂದು ಬೆಂದಿದ್ದೇವೆ. ಹೀಗಾಗಿ ಸಮಾಜ ಗೊಂದಲದಲ್ಲಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿಷಾಧಿಸಿದರು.
ನಾಯಿ ನರಿಗಳು ಎಲ್ಲಿ ಬೇಕಾದರೂ ಪ್ರವೇಶಿಸಬಹುದು. ಆದರೆ ಬಸವ, ಗಾಂಧಿ, ಅಂಬೇಡ್ಕರ ಗುರುತಿಸಿದ ಮಾದಿಗರ ಪ್ರವೇಶಕ್ಕೆ ಮಾತ್ರ ನಿಷೇಧವಿದೆ. ಇದೊಂದು ಮನುಷ್ಯ ಸಂಸ್ಕೃತಿಯ ವಿಪರ್ಯಾಸ. ತುಳಿತಕ್ಕೆ ಒಳಗಾಗಿದ್ದ ನಮ್ಮ ಸಮಾಜವನ್ನು ತಮ್ಮ ಇಚ್ಛೆಗೆ ತಕ್ಕಂತೆ ಬಳಸಿಕೊಂಡವರೇ ಇಂದಿಗೂ ನಮ್ಮನ್ನು ತುಳಿಯುತ್ತಿದ್ದಾರೆ. ಇನ್ನಾದರೂ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದ್ದು, ಮೊದಲು ಶಿಕ್ಷಣವಂತರಾಗಿ ಬದುಕನ್ನು ಕಟ್ಟಿಕೊಳ್ಳೋಣ ಎಂದು ಸಲಹೆ ನೀಡಿದರು.
ಸಾಮಾಜಿಕ ನ್ಯಾಯದಡಿ ಡಾ. ಅಂಬೇಡ್ಕರ ಸಂವಿಧಾನಾತ್ಮಕ ಹಾಗೂ ಹಕ್ಕುಬದ್ಧ ಅವಕಾಶಗಳನ್ನು ಕಲ್ಪಿಸಲು ಮುಂದಾದರು. ಆದರೆ ರಾಜಕಾರಣದ ದಳ್ಳುರಿಗೆ 4 ಜಾತಿಗಳಿದ್ದ ಪರಿಶಿಷ್ಟ ಜಾತಿಯಲ್ಲಿ 118 ಜಾತಿಗಳನ್ನು ಸೇರಿಸುವ ಮೂಲಕ ನಮ್ಮನ್ನು ಮೇಲೇಳಲು ಬಿಡಲಿಲ್ಲ. ಬದಲಾಗಿ ಮೊದಲಿದ್ದ ಜಾಗಕ್ಕೆ ಕರೆದೊಯ್ಯುವ ಕೆಲಸವಾಗುತ್ತಿದೆ ಎಂದರು.ಮಾದಿಗ ಸಮಾಜ ದೇಶದ ಮುಖ್ಯವಾಹಿನಿಗೆ ಬರಬೇಕಾದರೆ ಇನ್ನಿತರ ಎಲ್ಲ ಸಮಾಜದ ಜನರನ್ನು ಅಪ್ಪಿಕೊಳ್ಳುವ ಕೆಲಸ ಮಾಡಬೇಕು. ಊರ ಗೌಡ್ರು ಬೆಳೆದರೆ ಅದನ್ನು ಸಂಭ್ರಮಿಸದಂತಹ ಜಾತಿ ನಮ್ಮದು. ಆದರೆ ನಮ್ಮನ್ನು ಮುಂದಿಟ್ಟುಕೊಂಡು ಗುಂಡು ಹೊಡೆಯುವ ಕೆಲಸ ನಡೆಯುತ್ತಿದೆ. ತಾವೆಲ್ಲರೂ ಮೊದಲು ಕಾಂಪ್ರೊಮೈಸ್ ಅಟ್ರ್ಯಾಸಿಟಿ ಕೇಸಗಳಿಂದ ಹೊರ ಬರಬೇಕು ಎಂದರು.
ಒಳಮೀಸಲಾತಿ ಧೈರ್ಯ: ಇದೀಗ ಗೌರವಯುತವಾಗಿ ಬದುಕುವ ಸಮಯ ಬಂದಿದೆ. ಒಳ ಮೀಸಲಾತಿ ಮೂಲಕ ಶಿಕ್ಷಣ, ಉದ್ಯೋಗದ ಸೌಲಭ್ಯ ಪಡೆದರೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಈ ಗಣತಿಯಿಂದ ಯಾರೂ ಹೊರಗುಳಿಯಬಾರದು. ಸ್ಥಳೀಯ ಮುಖಂಡರು, ಸರ್ಕಾರಿ ನೌಕರರು, ವಿದ್ಯಾವಂತ ಯುವಕರು ಗಣತಿದಾರರ ಜತೆ ನಿಂತು ಸಮಗ್ರ ಮಾಹಿತಿ ಒದಗಿಸುವ, ನಮ್ಮವರಲ್ಲಿ ಅರಿವು ಮೂಡಿಸುಬ ಕೆಲಸ ಮಾಡಬೇಕುದೆಂದು ಕಿವಿಮಾತು ಹೇಳಿದರು.ಪಾಲಿಕೆಯ ಮಾಜಿ ಸದಸ್ಯ ಮೋಹನ ಹಿರೇಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ರಾಮಕೃಷ್ಣ ದೊಡಮನಿ, ಸುಜಾತಾ ದೊಡಮನಿ, ಡಾ.ನಿಜಲಿಂಗಪ್ಪ ಮಟ್ಟಿಹಾಳ, ಪ್ರಭಾಕರ ಐಹೊಳಿ, ಜಿ.ಪಂ. ಮಾಜಿ ಸದಸ್ಯ ಗಾಳೆಪ್ಪ ಮಾತನಾಡಿದರು. ಬೆಳಗಾವಿ, ಕೊಪ್ಪಳ, ಹಾವೇರಿ, ಗದಗ, ಧಾರವಾಡ ಜಿಲ್ಲೆಯ ಮಾದಿಗ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಪ್ರೇಮನಾಥ ಚಿಕ್ಕತುಂಬಳ ಕಾರ್ಯಕ್ರಮ ನಿರೂಪಿಸಿದರು.