ಹಿಂದುಗಳು ಕೇರಳ ಸ್ಟೋರಿ 2 ನೋಡಲಿ: ಮುತಾಲಿಕ್‌

KannadaprabhaNewsNetwork |  
Published : Mar 15, 2026, 03:15 AM IST
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಕೇರಳ ಸ್ಟೋರಿ 2 ಸಿನೆಮಾದಲ್ಲಿ ಲವ್ ಜಿಹಾದ್‌ಗೆ ಸಂಬಂಧಿಸಿದ ತಂತ್ರಗಾರಿಕೆ ಮತ್ತು ಹೆಣ್ಣು ಮಕ್ಕಳ ಹೆತ್ತವರು ಅನುಭವಿಸುವ ನೋವನ್ನು ತೋರಿಸಲಾಗಿದೆ. ಈ ಚಿತ್ರವನ್ನು ಹಿಂದುಗಳು ನೋಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೇರಳ ಸ್ಟೋರಿ 2 ಸಿನೆಮಾದಲ್ಲಿ ಲವ್ ಜಿಹಾದ್‌ಗೆ ಸಂಬಂಧಿಸಿದ ತಂತ್ರಗಾರಿಕೆ ಮತ್ತು ಹೆಣ್ಣು ಮಕ್ಕಳ ಹೆತ್ತವರು ಅನುಭವಿಸುವ ನೋವನ್ನು ತೋರಿಸಲಾಗಿದೆ. ಈ ಚಿತ್ರವನ್ನು ಹಿಂದುಗಳು ನೋಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಯೌವ್ವನದ ಮೋಹದಲ್ಲಿ ಹಿಂದು ಹುಡುಗಿಯರು ಹೇಗೆ ಬಲಿಯಾಗುತ್ತಾರೆ ಎಂಬ ಸತ್ಯ ಘಟನೆಗಳ ಆಧಾರದಲ್ಲಿ ಈ ಸಿನೆಮಾ ಮಾಡಲಾಗಿದೆ. ನಾವು ಸಾವಿರಾರು ಭಾಷಣದಲ್ಲಿ ಹೇಳುವುದನ್ನು ಒಂದು ಸಿನೆಮಾದ ಮೂಲಕ ತೋರಿಸಿದರೆ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿಯೊಬ್ಬ ಹಿಂದು ಕುಟುಂಬ ಸಮೇತರಾಗಿ ಈ ಸಿನೆಮಾ ನೋಡಬೇಕು ಎಂದು ಕರೆ ನೀಡಿದರು.

ಲವ್ ಜಿಹಾದ್ ವಿರುದ್ಧವಾಗಿ ನಾವು ಆರಂಭಿಸಿದ ಸಹಾಯವಾಣಿಗೆ ಎರಡು ವರ್ಷಗಳಲ್ಲಿ 8 ಸಾವಿರ ಕರೆಗಳು ಬಂದಿವೆ. ಅವುಗಳಲ್ಲಿ ಶೇ.70 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಓಡಿ ಹೋದ 4800 ಹುಡುಗಿಯರನ್ನು ಮರಳಿ ಕರೆತಂದು ಹಿಂದೂ ಯುವಕರ ಜೊತೆ ಮದುವೆ ಮಾಡಿಸಿದ್ದೇವೆ. ಅವರು ಈಗ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.

2019ರಿಂದ 2021ರವರೆಗೆ ದೇಶದಲ್ಲಿ ಅಪಹರಣ, ಅತ್ಯಾಚಾರ ಮತ್ತು ಕೊಲೆ ಸೇರಿದಂತೆ 13.13 ಲಕ್ಷ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಶೇ.62 ಪ್ರಕರಣಗಳಲ್ಲಿ ಮುಸ್ಲಿಮರು ತಮ್ಮ ಹೆಸರನ್ನು ಹಿಂದೂ ಎಂದು ಹೇಳಿಕೊಂಡು ಮೋಸ ಮಾಡಿದ ಘಟನೆಗಳಿವೆ. ಲವ್ ಜಿಹಾದ್ ನಡೆಸಲು ಮದುವೆ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುವ ಮೇಕಪ್ ಮ್ಯಾನ್‌ಗಳು, ಫೋಟೋಗ್ರಾಫರ್‌ಗಳು, ಜಿಮ್‌ಗಳು, ಮಹಿಳಾ ಪಾರ್ಲರ್‌ಗಳು ಮಾತ್ರವಲ್ಲ ಕಾಲೇಜು, ಹಾಸ್ಟೆಲ್ ಮತ್ತು ಹೈಸ್ಕೂಲ್‌ಗಳಲ್ಲಿಯೂ ಕೇಂದ್ರಗಳನ್ನು ನಿರ್ಮಿಸಿದ್ದಾರೆ. ಇದರಿಂದ ಹಿಂದೂಗಳು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಮಕ್ಕಳ ಅಪಹರಣ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಅಶ್ವಿನ ಉಪಾಧ್ಯಾಯ ಸುಪ್ರೀಂಕೋರ್ಟ್‌ನಲ್ಲಿ ಐದು ರಾಜ್ಯಗಳ ಕುರಿತು ಪ್ರಕರಣ ದಾಖಲಿಸಿದ್ದಾರೆ. ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ಹರಿಯಾಣದಲ್ಲಿ ಕಾಣೆಯಾದ 75 ಸಾವಿರ ಮಕ್ಕಳ ಪೈಕಿ ಹಲವರು ಮದರಸಾಗಳಲ್ಲಿ ಇದ್ದಾರೆ ಎಂಬ ಮಾಹಿತಿ ದೊರೆತಿದೆ. ಮದರಸಾಗಳು ಅಪಹರಣ ಮತ್ತು ಮತಾಂತರದ ಕೇಂದ್ರಗಳಾಗಿವೆ. ಆದ್ದರಿಂದ ಕೇಂದ್ರ ಸರ್ಕಾರ ಮದರಸಾಗಳನ್ನು ನಿಷೇಧಿಸಬೇಕು. ಜತೆಗೆ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರಬೇಕು ಎಂದು ಆಗ್ರಹಿಸಿದರು.

ರುದ್ರಾಕ್ಷಿ ಸುಂದರಿ ಮೊನಾಲಿಸಾ ವಿವಾಹವೂ ಲವ್ ಜಿಹಾದ್ ಆಗಿದೆ. ಇಬ್ಬರೂ ಉತ್ತರ ಭಾರತದವರಾಗಿದ್ದರೂ ಕೇರಳಕ್ಕೆ ಬಂದು ಮದುವೆಯಾಗಿರುವುದು ಅಲ್ಲಿನ ಬೆಂಬಲದ ಕಾರಣದಿಂದಾಗಿ. ಮೊನಾಲಿಸಾ ಮತಾಂತರವಾಗುವುದಿಲ್ಲ ಎಂದು ಹೇಳಿದ್ದಾಳೆ. ಆದರೆ ಮುಸ್ಲಿಂ ಆಗದೇ ಆ ಸಮಾಜದಲ್ಲಿ ಸ್ವೀಕರಿಸುವುದಿಲ್ಲ ಎಂದು ಹೇಳಿದರು. ಯುಗಾದಿ ಮತ್ತು ರಾಮನವಮಿ ಸಂದರ್ಭದಲ್ಲಿ ಹಲಾಲ್ ಮುಕ್ತ ಹಬ್ಬ ಆಚರಿಸಬೇಕು. ಹಲಾಲ್ ವ್ಯವಸ್ಥೆ ಕೇವಲ ಮಾಂಸಕ್ಕೆ ಮಾತ್ರ ಸೀಮಿತವಾಗಿಲ್ಲ. ಹಲವಾರು ವಸ್ತುಗಳಿಗೂ ಹಲಾಲ್ ಮಾಡಲಾಗುತ್ತಿದೆ. ಅದರ ಮೂಲಕ ಸಂಗ್ರಹವಾಗುವ ಹಣ ಭಯೋತ್ಪಾದನೆಗೆ ಹೋಗುತ್ತದೆ. ಹಿಂದೂಗಳು ಯುಗಾದಿ ಸಂದರ್ಭದಲ್ಲಿ ಹೂವು, ಹಣ್ಣು ಹಾಗೂ ಚಿನ್ನವನ್ನು ಹಿಂದು ವ್ಯಾಪಾರಿಗಳಿಂದಲೇ ಖರೀದಿಸಬೇಕು ಎಂದು ಹೇಳಿದರು.

ಬೈಲಹೊಂಗಲದಲ್ಲಿ ಕಿತ್ತೂರು ಚನ್ನಮ್ಮ ಸಮಾಧಿ ಅಭಿವೃದ್ಧಿ ಕುರಿತ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ ಅನ್ನು ಚೆನ್ನಾಗಿ ಅಭಿವೃದ್ಧಿಪಡಿಸಿದ್ದಾರೆ. ಆದರೆ ಚನ್ನಮ್ಮ ಸಮಾಧಿಯ ವಿಷಯದಲ್ಲಿ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ. ಇದರಲ್ಲೂ ಜಾತಿ ರಾಜಕಾರಣ ಮಾಡುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ