ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಚುನಾವಣೆ ನೆಪ, ಹಿರೀಕಾಟಿ ಚೆಕ್ ಪೋಸ್ಟ್ ಬಂದ್ʼ ಎಂದು ಮೇ.7 ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ವರಿದಿಗೆ ಎಚ್ಚೆತ್ತು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಹಿರೀಕಾಟಿ ಖನಿಜ ಠಾಣೆ (ಚೆಕ್ ಪೋಸ್ಟ್)ನಲ್ಲಿ ತಪಾಸಣೆ ಶುರು ಮಾಡಿದೆ. ಲೋಕಸಭೆ ಚುನಾವಣೆ ಚುನಾವಣೆ ನೆಪದಲ್ಲಿ ಜಿಲ್ಲಾ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಳೆದ ಹತ್ತು ದಿನಗಳಿಂದ ಹಿರೀಕಾಟಿ ಖನಿಜ ತನಿಖಾ ಠಾಣೆಯ ಬಾಗಿಲು ಮುಚ್ಚಿತ್ತು.ಕ್ವಾರಿ ಲೀಸ್‌ದಾರರು ಕ್ವಾರಿಯ ರಾ ಮೆಟಿರಿಯಲ್ ಸಾಗಾಣಿಕೆಗೆ ರಾಯಲ್ಟಿ ಹಾಗೂ ಕ್ರಷರ್‌ನ ಉತ್ಪನ್ನಗಳ ಸಾಗಾಣಿಕೆಗೆ ಎಂಡಿಪಿ ವಂಚಿಸಿ ಸರ್ಕಾರಕ್ಕೆ ರಾಜಧನ ಮೋಸ ಮಾಡುತ್ತಿದ್ದಾರೆ ಎಂದು ಕನ್ನಡಪ್ರಭ ವರದಿ ಪ್ರಕಟಿಸಿ ಜಿಲ್ಲಾಡಳಿತ ಗಮನ ಸೆಳೆದಿತ್ತು.
ಕನ್ನಡಪ್ರಭದ ವರದಿ ಬೆನ್ನಲ್ಲೇ ಮಂಗಳವಾರ ಬೆಳಗ್ಗೆ ಹಿರೀಕಾಟಿ ಬಳಿಯ ಖನಿಜ ತನಿಖಾ ಠಾಣೆಗೆ ಭೂ ವಿಜ್ಞಾನಿ ಪುಷ್ಪ ಬಂದು ತಪಾಸಣೆ ಶುರು ಮಾಡಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ಸೂಚನೆ ಮೇರೆಗೆ ಹಿರೀಕಾಟಿ ಖನಿಜ ತನಿಖಾ ಠಾಣೆ ಮಂಗಳವಾರ ಬೆಳಗ್ಗೆ ಆರಂಭವಾದ ನಂತರವೂ ಕ್ವಾರಿಯ ರಾ ಮೆಟಿರಿಯಲ್ ಹಾಗೂ ಕ್ರಷರ್ ಉತ್ಪನ್ನಗಳನ್ನು ತುಂಬಿದ ಓವರ್ ಲೋಡ್ ಟಿಪ್ಪರ್‌ಗಳು ಸಂಚರಿಸಿವೆ.ರಾಜಧನ ವಂಚನೆ: ಹಿರೀಕಾಟಿ, ಅರೇಪುರ, ತೊಂಡವಾಡಿ, ಬೆಳಚಲವಾಡಿ ಕ್ವಾರಿಯಿಂದ ಕ್ರಷರ್‌ಗೆ ತೆರಳುವ ಟಿಪ್ಪರ್ ಗಳಲ್ಲಿ ಬಹುತೇಕರು ರಾಯಲ್ಟಿ ಕಟ್ಟದೆ ರಾಜಾರೋಷವಾಗಿ ಓವರ್ ಲೋಡ್ ತುಂಬಿದ ಕಲ್ಲು ಕ್ರಷರ್ ಗೆ ತೆರಳುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಹಾಗೂ ಸ್ಥಳೀಯ ಪೊಲೀಸರು ನಿಗಾ ವಹಿಸುತ್ತಿಲ್ಲ.
ಕಾಟಾಚಾರ ತಪಾಸಣೆ?:ಮೈಸೂರು-ಊಟಿ ಹೆದ್ದಾರಿಯ ಹಿರೀಕಾಟಿ ಗೇಟ್ ಬಳಿಯ ಖನಿಜ ತನಿಖಾ ಠಾಣೆಯ ಮುಂದೆಯೇ ಟಿಪ್ಪರ್ ಓವರ್ ಲೋಡ್ ತುಂಬಿಕೊಂಡು ಹೋಗುತ್ತಿವೆ ಭೂ ವಿಜ್ಞಾನಿ ಅದ್ಯಾವ ಪರಿ ತಪಾಸಣೆ ನಡೆಸಿದರು ಎಂದು ಹಿರೀಕಾಟಿ ಗ್ರಾಮದ ಪ್ರಸನ್ನ ವ್ಯಂಗವಾಡಿದ್ದಾರೆ. ಟಿಪ್ಪರ್‌ಗಳು ಕ್ವಾರಿ ರಾ ಮೆಟಿರಿಯಲ್ ಹಾಗೂ ಕ್ರಷರ್‌ನ ಉತ್ಪನ್ನಗಳನ್ನು ತುಂಬಿಕೊಂಡು 30 ಟನ್ ಇದ್ದರೆ ೧೫ ಟನ್ ಪರ್ಮಿಟ್/ಎಂಡಿಪಿ ಹಾಕಿ ತೆರಳುತ್ತಿವೆ. ಹೆಚ್ಚುವರಿ ಟನ್ ಅಕ್ರಮವಾಗಿ ಸಾಗಾಣಿಕೆ ಆದರೂ ದಂಡ ಏಕೆ ವಿಧಿಸುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.
ಇಂದಿನಿಂದ (ಮಂಗಳವಾರ) ಹಿರೀಕಾಟಿ ಖನಿಜ ತನಿಖಾ ಠಾಣೆಯಲ್ಲಿ ತಪಾಸಣೆ ಶುರು ಮಾಡಿದೆ. ಭೂ ವಿಜ್ಞಾನಿಯೊಬ್ಬರು ತಪಾಸಣೆ ನಡೆಸುತ್ತಿದ್ದಾರೆ. ನಾನು ಸಹ ದಿಡೀರ್ ಭೇಟಿ ನೀಡಿ ತಪಾಸಣೆ ನಡೆಸುವೆ.ಪದ್ಮಜ, ಡಿಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ