ವೆಂಕಟೇಶ್ ಕಲಿಪಿ
ಚಾಲಕರು ಮಾನ್ಯತೆ ಹೊಂದಿದ ಚಾಲನಾ ಪರವಾನಗಿ ಹೊಂದಿದ್ದಾರೆಯೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ವಾಹನ ಮಾಲೀಕ(ಉದ್ಯೋಗದಾತರು)ರೇ ಹೊಂದಿರುತ್ತಾರೆ. ಪರವಾನಗಿ ಹೊಂದಿರದ ಚಾಲಕನಿಂದ ಅಪಘಾತವಾದರೆ ವಾಹನ ಮಾಲೀಕರೇ ಸಂತ್ರಸ್ತರಿಗೆ ಪರಿಹಾರ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಶಾಲಾ ವಾಹನವೊಂದು ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದ ಪ್ರಕರಣದಲ್ಲಿ ಚಾಲಕ ಪರವಾನಗಿ ಹೊಂದಿರದ ಕಾರಣ ಮೃತ ಚಾಲಕನ ಕುಟುಂಬದವರಿಗೆ ಪರಿಹಾರ ಪಾವತಿಸುವಂತೆ ವಾಹನ ಮಾಲೀಕರೂ ಆದ ಶಾಲಾ ಮುಖ್ಯಶಿಕ್ಷಕನಿಗೆ ಕೋರ್ಟ್ ನಿರ್ದೇಶಿಸಿದೆ.ಈ ಆದೇಶದ ಅನ್ವಯ ವಾಹನಗಳ (ಉದ್ಯೋಗದಾತರು) ಮಾಲೀಕರು ಚಾಲಕರನ್ನು ನೇಮಿಸಿಕೊಳ್ಳುವಾಗ, ಅವರು ಮಾನ್ಯತೆ ಹೊಂದಿರುವ ಚಾಲನಾ ಪರವಾನಗಿ ಹೊಂದಿದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಂಡು ಉದ್ಯೋಗ ನೀಡಬೇಕು. ಪರವಾನಗಿ ಹೊಂದಿರದ ಚಾಲಕನನ್ನು ಉದ್ಯೋಗಕ್ಕೆ ಸೇರಿಸಿಕೊಂಡರೆ ಅದು ವಿಮಾ ಪಾಲಿಸಿಯ ಷರತ್ತಿನ ಉಲ್ಲಂಘನೆ ಆಗಲಿದೆ. ಒಂದು ವೇಳೆ ಆ ವಾಹನ ಅಪಘಾತಕ್ಕೊಳಗಾದರೆ ಸಂತ್ರಸ್ತರಿಗೆ ವಾಹನ ಮಾಲೀಕರೇ ಪರಿಹಾರ ಕೊಡಬೇಕಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ತೆಂಕುಳಿಪಾಡಿಯ ಬಲ್ಮಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ ನ್ಯಾಯಮೂರ್ತಿ ಕೆ.ಮನ್ಮಥರಾವ್ ಅವರ ಪೀಠ ಈ ಆದೇಶ ಮಾಡಿದೆ.ಪ್ರಕರಣದ ಹಿನ್ನೆಲೆ:
ಬುದ್ರುದ್ದೀನ್ ಎಂಬುವರು ಬಲ್ಮಿ ಪ್ರಾಥಮಿಕ ಶಾಲೆಯ ಬಸ್ ಚಾಲಕನಾಗಿದ್ದರು. ಶಾಲೆ ಮುಖ್ಯ ಶಿಕ್ಷಕರೇ ಬಸ್ ಮಾಲೀಕರಾಗಿದ್ದರು. 2008ರ ಆ.14ರಂದು ಬದ್ರುದ್ದೀನ್ ಶಾಲಾ ಮಕ್ಕಳನ್ನು ಕರೆತರಲು ಬಸ್‌ನಲ್ಲಿ ತೆರಳುತ್ತಿದ್ದರು. ಭಾರೀ ಮಳೆಯಿಂದ ಉಂಟಾದ ಪ್ರವಾಹ ಸಂಪೂರ್ಣ ರಸ್ತೆಯನ್ನು ಆವರಿಸಿತ್ತು. ಈ ವೇಳೆ ನಿಯಂತ್ರಣ ಕಳೆದುಕೊಂಡು ಬಸ್ ಫಲ್ಗುಣಿ ನದಿಗೆ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ಚಾಲಕ ಬದ್ರುದ್ದೀನ್ ಸಾವಿಗೀಡಾಗಿದ್ದರು.ಹಾಗಾಗಿ ಮೃತನ ಪೋಷಕರು, ಪತ್ನಿ-ಮಕ್ಕಳು ಉದ್ಯೋಗ ನಿರ್ವಹಣೆ ಸಮಯದಲ್ಲಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ 13 ಲಕ್ಷ ರು. ಅನ್ನು ವಾರ್ಷಿಕ ಶೇ.12ರಷ್ಟು ಬಡ್ಡಿದರದಲ್ಲಿ ಪರಿಹಾರವಾಗಿ ಪಾವತಿಸಲು ಬಸ್ ಮಾಲೀಕರಾದ ಶಾಲೆ ಮುಖ್ಯಶಿಕ್ಷಕ ಮತ್ತು ಬಸ್‌ಗೆ ವಿಮಾ ಪಾಲಿಸಿ ಕಲ್ಪಿಸಿರುವ ಕಂಪನಿಗೆ ನಿರ್ದೇಶಿಸುವಂತೆ ಕೋರಿ ಕ್ಲೇಮು ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ಉದ್ಯೋಗಿಗಳ ಪರಿಹಾರ ಆಯುಕ್ತರು ಆದ ಮಂಗಳೂರಿನ ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ, 2009ರ ಆ.14ರಿಂದ ಶೇ.12ರಷ್ಟು ಬಡ್ಡಿದರದೊಂದಿಗೆ 5,38,200 ರು. ಅನ್ನು ಪರಿಹಾರ ಪಾವತಿಸಬೇಕು ಎಂದು ಬಸ್ ಮಾಲೀಕರಾದ ಶಾಲಾ ಮುಖ್ಯೋಪಾಧ್ಯಾಯ ಅವರಿಗೆ ಆದೇಶಿಸಿತ್ತು. ಈ ತೀರ್ಪು ರದ್ದುಪಡಿಸುವಂತೆ ಕೋರಿ ಶಾಲಾ ಮುಖ್ಯೋಪಾಧ್ಯಾಯರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಹೈಕೋರ್ಟ್, ಘಟನೆ ಸಂಭವಿಸಿದ ವೇಳೆ ಬದ್ರುದ್ದೀನ್ ಅಪಘಾತಕ್ಕೆ ಒಳಗಾದ ಬಸ್ (7,500 ಕೆ.ಜಿ.ಗಿಂತ ಕಡಿಮೆ ತೂಕದ ವಾಹನ ) ಚಲಾಯಿಸಲು ಮಾನ್ಯತೆ ಹೊಂದಿರುವ (ಅಧಿಕೃತ) ಚಾಲನಾ ಪರವಾನಗಿ ಹೊಂದಿರಲಿಲ್ಲ. ಬದ್ರುದ್ದೀನ್ ಅಧಿಕೃತ ಚಾಲನಾ ಪರವಾನಗಿ ಹೊಂದಿದ್ದರು ಎಂದು ಬಸ್ ಮಾಲೀಕರಾದ ಶಾಲಾ ಮುಖ್ಯೋಪಾಧ್ಯಾಯರು ವಾದಿಸಿದರೂ, ಅದನ್ನು ನಂಬಲು ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ. ಇದರಿಂದ ಬದ್ರುದ್ದೀನ್ ಕುಟುಂಬದವರಿಗೆ ಪರಿಹಾರ ಪಾವತಿಸುವ ಹೊಣೆಯನ್ನು ಶಾಲಾ ಮುಖ್ಯೋಪಾಧ್ಯಾಯರ ಹೆಗಲಿಗೆ ಹೊರಿಸಿ ಅಧೀನ ನ್ಯಾಯಾಲಯ ಹೊರಡಿಸಿದ ಆದೇಶ ಸೂಕ್ತವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿ, ಮೇಲ್ಮನವಿ ವಜಾಗೊಳಿಸಿತು.
ಅಲ್ಲದೆ, ತಮ್ಮ ಚಾಲಕರು ಮಾನ್ಯತೆ ಹೊಂದಿರುವ ಚಾಲನಾ ಪರವಾನಗಿ ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯೂ ವಾಹನ ಮಾಲೀಕರಿಗೆ (ಉದ್ಯೋಗದಾತ) ಇರುತ್ತದೆ. ಈ ಜವಾಬ್ದಾರಿ ನಿರ್ವಹಿಸದಿದ್ದರೆ ಹಾಗೂ ಚಾಲಕ ಅಧಿಕೃತ ಚಾಲನವಾ ಪರವಾನಗಿ ಹೊಂದಿರದಿದ್ದರೆ, ಅದು ವಿಮಾ ಪಾಲಿಸಿ ಷರತ್ತುಗಳ ಸ್ಪಷ್ಟ ಉಲ್ಲಂಘನೆ. ಆಗ ವಾಹನವು ವಿಮಾ ಸೌಲಭ್ಯ ಹೊಂದಿದ್ದರೂ ಅಪಘಾತ ಸಂತ್ರಸ್ತರಿಗೆ ಪರಿಹಾರ ಪಾವತಿಸುವ ಹೊಣೆಯಿಂದ ವಿಮಾ ಕಂಪನಿ ಮುಕ್ತವಾಗುತ್ತದೆ ಎಂದು ಆದೇಶದಲ್ಲಿ ನ್ಯಾಯಪೀಠ ಹೇಳಿದೆ.