ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ಖಾಸಗಿ ಅನ್ನ ಪೂರ್ಣೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಗುರುವಾರ ನಡೆದ ಚಳ್ಳಕೆರೆ ವಿಭಾಗದ ಹಿರಿಯೂರು ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚಿತ್ರದುರ್ಗ, ಹಿರಿಯೂರು ಹಾಗೂ ಚಳ್ಳಕೆರೆ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ರೈತರ ಹೈನುಗಾರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಳ್ಳಕೆರೆಯಲ್ಲಿ ಶಿಮುಲ್ ವಿಭಾಗಿಯ ಕಚೇರಿಯನ್ನು ಪ್ರಾರಂಭಿಸಲಾಗಿದೆ. ನಾವು ಅಧಿಕಾರಕ್ಕೆ ಬಂದು 10 ತಿಂಗಳು ಕಳೆದಿದ್ದು ಸಾಕಷ್ಟು ಬದಲಾವಣೆ ತರಲಾಗಿದೆ. ಹಿರಿಯೂರು ವಿಭಾಗಕ್ಕೆ ಸಭೆ ನಡೆಸಲು ಆಡಳಿತ ಕಚೇರಿ ಅವಶ್ಯಕತೆ ಇದ್ದು ಮುಂದಿನ ವರ್ಷ 40 ಲಕ್ಷ ವೆಚ್ಚದಲ್ಲಿ ಆಡಳಿತ ಕಚೇರಿಯನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.ತಾಲೂಕಿನಲ್ಲಿ 4 ಸಂಘಗಳನ್ನು ಹೊಸದಾಗಿ ಉದ್ಘಾಟನೆ ಮಾಡಲಾಗಿದ್ದು, ಇದರಿಂದ ಹಾಲಿನ ಉತ್ಪಾದನೆ, ಹಾಲು ಉತ್ಪಾದಕರ ಸಂಖ್ಯೆ ಹೆಚ್ಚಳಕ್ಕೆ ಸಹಕಾರಿಯಾಗಲಿದೆ. ಹೊಸದಾಗಿ 4 ನಂದಿನಿ ಪಾರ್ಲರ್ ಕೇಂದ್ರ ಮತ್ತು 5 ಡೀಲರ್ ಶಿಪ್ ನೀಡಲಾಗಿದ್ದರಿಂದ ಮಾರಾಟ ಹೆಚ್ಚಳವಾಗಿದೆ.
ಹೊಳಲ್ಕೆರೆ ಶಿಮುಲ್ ನಿರ್ದೇಶಕ ಜಿ.ಬಿ.ಶೇಖರ್ ಮಾತನಾಡಿ, ದೇಶದಲ್ಲಿ ನಂದಿನಿ ಉತ್ಪನ್ನಗಳು 4ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ತಾಲೂಕಿನಲ್ಲಿ ಚಾಪ್ ಕಟ್ಟರ್ ಸಮಸ್ಯೆ ಇದ್ದು ಮುಂದಿನ ದಿನಗಳಲ್ಲಿ ಚಾಪ್ ಕಟ್ಟರ್ ಕೊಡಿಸುವ ಪ್ರಯತ್ನ ಮಾಡಲಾಗುವುದು.
ಚಿತ್ರದುರ್ಗದ ನಿರ್ದೇಶಕ ಜಿ.ಪಿ.ರೇವಣಸಿದ್ದಪ್ಪ ಮಾತನಾಡಿ, ಹಿರಿಯೂರಿನಿಂದ ಶಿಮುಲ್‌ಗೆ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿರುವುದು ಸಂತಸದ ವಿಷಯ. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡ ಬಳಿಕ ನೀರಾವರಿ ಸೌಲಭ್ಯದಿಂದ ಹೆಚ್ಚಿನ ಹಾಲು ಉತ್ಪಾದನೆಯಾಗುವ ನಿರೀಕ್ಷೆಯಿದೆ. ದಾವಣಗೆರೆ ಹಾಗೂ ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಮಾಡಲು 300 ಕೋಟಿ ರು. ವೆಚ್ಚದಲ್ಲಿ ಡೈರಿ ನಿರ್ಮಾಣಕ್ಕೆ ಸಿದ್ಧವಾಗಿದ್ದು ಶ್ರಾವಣ ಮಾಸದಲ್ಲಿ ಗುದ್ದಲಿ ಪೂಜೆ ನೇರವೇರಿಸಿ ಮುಂದಿನ 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ಎರಡು ಜಿಲ್ಲೆಯ ಹೈನುಗಾರಿಕೆಗೆ ಅನುಕೂಲವಾಗಲಿದೆ ಎಂದರು.ಈ ಸಂದರ್ಭದಲ್ಲಿ ಸಹಾಯಕ ವ್ಯವಸ್ಥಾಪಕ ಎಂ. ಪುಟ್ಟರಾಜು, ವಿಸ್ತರಣಾಧಿಕಾರಿ ಕೃಷ್ಣಕುಮಾರ್, ಪಶುವೈದ್ಯ ಡಾ. ದೀರಾಜ್ ಪ್ರಕಾಶ್ ಜಿ, ನಿವೃತ್ತ ವಿಸ್ತರಣಾಧಿಕಾರಿ ಕೃಷ್ಣಪ್ಪ ಸೇರಿದಂತೆ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಹಾಜರಿದ್ದರು.