ಐತಿಹಾಸಿಕ ಮಡಿಕೇರಿ ದಸರಾಗೆ ಹರಿದುಬಂದ ಜನ ಸಾಗರ: ಇರುಳ ಬೆಳಕಾಗಿಸಿದ ಶೋಭಾಯಾತ್ರೆ

KannadaprabhaNewsNetwork |  
Published : Oct 25, 2023, 01:15 AM ISTUpdated : Oct 25, 2023, 01:16 AM IST
ಮಡಿಕೇರಿ ದಸರಾ ಮಂಟಪ | Kannada Prabha

ಸಾರಾಂಶ

ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿ, ದಂಡಿನ ಮಾರಿಯಮ್ಮ ಹಾಗೂ ಕೋಟೆ ಮಾರಿಯಮ್ಮ ದೇವರ ಕರಗಗಳು ರಾತ್ರಿಯಿಡೀ ಸಂಚರಿಸಿದವು.

ಕನ್ನಡಪ್ರಭ ವಾರ್ತೆ ಮಡಿಕೇರಿ ಐತಿಹಾಸಿಕ ಹಿನ್ನೆಯೊಂದಿರುವ ಮಡಿಕೇರಿ ದಸರಾ ಅಂಗವಾಗಿ ಮಂಗಳವಾರ ರಾತ್ರಿ ಜನ ಸಾಗರವೇ ಹರಿದುಬಂತು. ವಿಭಿನ್ನ ಕಥಾ ಸಾರಾಂಶವನ್ನು ಒಳಗೊಂಡ ದಶಮಂಟಪಗಳ ಶೋಭಾಯಾತ್ರೆ ಮನಸೂರೆಗೊಳಿಸಿತು. ದೇವತೆಗಳು ಅಸುರರನ್ನು ಸಂಹಾರ ಮಾಡುವ ದೃಶ್ಯ ಮಂಟಪದಲ್ಲಿ ಕಂಡುಬಂತು. ದಶಮಂಟಪಗಳು ಇರುಳನ್ನು ಬೆಳಕಾಗಿಸಿದವು. ಬಾನಿನಲ್ಲಿಯೂ ಬೆಳಕು ಪ್ರಕಾಶಿಸಿತು. ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿ, ದಂಡಿನ ಮಾರಿಯಮ್ಮ ಹಾಗೂ ಕೋಟೆ ಮಾರಿಯಮ್ಮ ದೇವರ ಕರಗಗಳು ರಾತ್ರಿಯಿಡೀ ಸಂಚರಿಸಿದವು. ಮಡಿಕೇರಿಯ ಪೇಟೆ ಶ್ರೀ ರಾಮ ಮಂದಿರ ಮಂಟಪದಲ್ಲಿ ವೈಕುಂಠ ದರ್ಶನ, ಚೌಡೇಶ್ವರಿ ಮಂಟಪದಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ, ಕೋದಂಡ ರಾಮ ಮಂಟಪದಲ್ಲಿ ಮಣಿಕಂಠನಿಂದ ಮಹಿಷೆಯ ಶಾಪ ವಿಮೋಚನೆ, ಕೋಟೆ ಮಹಾಗಣಪತಿ ಮಂಟಪದಲ್ಲಿ ಗಣಪತಿಯಿಂದ ಶತಮಾಹಿಷೆಯ ಸಂಹಾರ ಕಥಾ ಸಾರಾಂಶ ಅಳವಡಿಸಲಾಗಿತ್ತು. ದೇಚೂರು ರಾಮ ಮಂದಿರ ಮಂಟಪದಲ್ಲಿ ವಿಷ್ಣುವಿನಿಂದ ಮಧು ಕೈಟಭರ ಸಂಹಾರ, ಕಂಚಿ ಕಾಮಾಕ್ಷಿ ದೇವಾಲಯದ ಮಂಟಪದಲ್ಲಿ ಶಿವನಿಂದ ತ್ರಿಪುರಾಸುರನ ಸಂಹಾರ, ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ಮಂಟಪದಲ್ಲಿ ಶ್ರೀ ದುರ್ಗಾ ಸಪ್ತಪತಿ ಪುರಾಣದಿಂದ ಅಧ್ಯಾಯ 6ರಿಂದ 10ರ ವರೆಗಿನ ಕದಂಬ ಕೌಟಿಕೆ, ಕೋಟೆ ಮಾರಿಯಮ್ಮ ದೇವಾಲಯ ಮಂಟಪದಲ್ಲಿ ಪಂಚಮುಖಿ ಆಂಜನೇಯನಿಂದ ಅಹಿರಾವಣ- ಮಹಿರಾವಣ, ದಂಡಿನ ಮಾರಿಯಮ್ಮ ಮಂಟಪದಲ್ಲಿ ಪರಶಿವನಿಂದ ಜಲಂಧರನ ಸಂಹಾರ, ಕರವಲೆ ಭಗವತಿ ದೇವಾಲಯ ಮಂಟಪದಲ್ಲಿ ಉಗ್ರ ನರಸಿಂಹನಿಂದ ಹಿರಣ್ಯ ಕಶ್ಯಪು ವಧೆ ಕಥಾ ಸಾರಾಂಶಗಳನ್ನು ಅಳವಡಿಸಲಾಗಿತ್ತು. ಮಂಗಳವಾರ ಸಂಜೆಯಾಗುತ್ತಿದಂತೆ ಮಡಿಕೇರಿಗೆ ಜನ ಸಾಗರವೇ ಹರಿದುಬಂತು. ಮಡಿಕೇರಿಯ ಜನರಲ್ ತಿಮ್ಮಯ್ಯ ಮೈದಾನ, ಎಪಿಎಂಸಿ ಮೈದಾನ ಮತ್ತಿತರ ಕಡೆಗಳಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಜನರಲ್ ತಿಮ್ಮಯ್ಯ ಮೈದಾನದಿಂದ ಎಲ್ಲೆಲ್ಲೂ ಜನರ ಓಡಾಟ ಕಂಡುಬಂತು. ದಸರಾ ಹಿನ್ನೆಲೆಯಲ್ಲಿ ಕೈಗಾರಿಕಾ ಬಡಾವಣೆ ಕಡೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯನ್ನು ಬಂದ್ ಮಾಡಲಾಗಿತ್ತು. ವಿಜಯ ದಶಮಿ ಅಂಗವಾಗಿ ಮಡಿಕೇರಿ ನಗರದಸರಾ ಸಮಿತಿಯಿಂದ ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಮಂಗಳವಾರ ರಾತ್ರಿಯಿಂದ ಬೆಳಗ್ಗೆ 5 ಗಂಟೆ ವರೆಗೆ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಾವಿರಾರು ಮಂದಿ ಕಾರ್ಯಕ್ರಮ ವೀಕ್ಷಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ