ಜಿಲ್ಲೆಯು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ. 95.24ರಷ್ಟು ಫಲಿತಾಂಶ ಪಡೆದು ರಾಜ್ಯದ ಸರಾಸರಿಗಿಂತ ಮುಂದಿರುವುದು ಹೆಮ್ಮೆಯ ವಿಷಯ.
ಗದಗ: ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ರಾಜ್ಯದ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಫಲಿತಾಂಶ ಬಂದಿದೆ. ಇದು ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಹಾಗೂ ಅಧಿಕಾರಿಗಳ ಅವಿರತ ಪರಿಶ್ರಮಕ್ಕೆ ಸಂದ ಜಯ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಶಿಕ್ಷಕರ ಸಂಘಟನೆಗಳ ಹಾಗೂ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ. 95.24ರಷ್ಟು ಫಲಿತಾಂಶ ಪಡೆದು ರಾಜ್ಯದ ಸರಾಸರಿಗಿಂತ ಮುಂದಿರುವುದು ಹೆಮ್ಮೆಯ ವಿಷಯ. ಹಾಗೆಯೇ ಪಿಯುಸಿ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 10ರಷ್ಟು ಹೆಚ್ಚಳ ಕಂಡು ಶೇ. 76.65ರಷ್ಟು ಬಂದಿರುವುದು ಸಮಾಧಾನಕರ ಸಂಗತಿ ಎಂದರು.
ಡಿಡಿಪಿಐ ಆರ್.ಎಸ್. ಬುರಡಿ ಮಾತನಾಡಿ, ಸತತ ಸರಣಿ ಪರೀಕ್ಷೆಗಳು, ಚಿಕಿತ್ಸಾ ಬೋಧನಾ ಪದ್ಧತಿ ಹಾಗೂ ಪ್ರಧಾನ ಕಾರ್ಯದರ್ಶಿಗಳು ಸೂಚಿಸಿದ 29 ಅಂಶಗಳ ಕಾರ್ಯಕ್ರಮದ ಯಶಸ್ವಿ ಅನುಷ್ಠಾನದಿಂದಾಗಿ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಮೂಡಿಬರಲು ಸಾಧ್ಯವಾಯಿತು ಎಂದರು.
ಇದೇ ಸಂದರ್ಭದಲ್ಲಿ ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಡಿಡಿಪಿಐ ಆರ್.ಎಸ್. ಬುರಡಿ, ಪಪೂ ಇಲಾಖೆ ಉಪನಿರ್ದೇಶಕ ಜಿ.ಎಸ್. ಸಿರ್ಸಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡವಿನಮನಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪಿಎಚ್‌ಡಿ ಪಡೆದ ಸಾಧಕರಿಗೆ ನೀಟ್ ಪರೀಕ್ಷೆಯ ನಂತರ ಜಿಲ್ಲಾ ಮಟ್ಟದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಉಪನ್ಯಾಸಕ ಶ್ರೀಶೈಲ ಬೀರಕಬ್ಬಿ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಬಿ.ಎಫ್. ಪೂಜಾರ, ಶರಣಪ್ಪ ನಾಗರಳ್ಳಿ, ಐ.ಬಿ. ಹಾದಿಮನಿ, ವಿ.ಎಂ. ಹಿರೇಮಠ ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯ ಹಂಚಿಕೊಂಡರು. ಪ್ರಾಚಾರ್ಯ ಅಶೋಕ ಅಂಗಡಿ ಸ್ವಾಗತಿಸಿದರು. ಉಪನ್ಯಾಸಕ ಎಸ್.ಐ. ಮೇಟಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.