ಸತ್ವಯುತ ಚಿತ್ರಗಳಿಗೆ ಐತಿಹಾಸಿಕ ಸಿನಿಮಾಗಳೇ ಆಶಾಕಿರಣ: ಜಿ.ಎಸ್.ನಾರಾಯಣ ರಾವ್

KannadaprabhaNewsNetwork |  
Published : Sep 14, 2024, 01:58 AM IST
ಪೋಟೋ: 13ಎಸ್‌ಎಂಜಿಕೆಪಿ02ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ, ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜ, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಿನಿಮಾ ವಸ್ತು ನೋಡುವ ಬಗೆ ಮತ್ತು ಶಿಕ್ಷಣ ಕಾರ್ಯಾಗಾರವನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಿನಿಮಾ ವಸ್ತು ನೋಡುವ ಬಗೆ ಮತ್ತು ಶಿಕ್ಷಣ ಕಾರ್ಯಾಗಾರಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹೊಸ ತಲೆಮಾರಿಗೆ ಅವಶ್ಯಕತೆಯಿರುವ ಸತ್ವಯುತ ಸಿನಿಮಾಗಳು ರೂಪಗೊಳ್ಳಲು ಇತಿಹಾಸದ ಸಿನಿಮಾಗಳು ಆಶಾಕಿರಣವಾಗಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.

ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ, ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜ, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಿನಿಮಾ ವಸ್ತು ನೋಡುವ ಬಗೆ ಮತ್ತು ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜಕ್ಕೆ ಶಿಕ್ಷಣ ನೀಡುತ್ತಿದ್ದ ಅಂದಿನ ಸಿನಿಮಾಗಳು ಸದಾ ಸ್ಮರಣೀಯ. ತುಂಬು ಕುಟುಂಬದ ಅವಶ್ಯಕತೆ, ವ್ಯಕ್ತಿತ್ವ ವಿಕಸನ, ಸಮಾಜಕ್ಕೆ ಕೊಡುಗೆ ನೀಡುವಂತಹ ಪ್ರೇರಣೆ ನೀಡುತ್ತಿದ್ದ ಸಿನಿಮಾಗಳು ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿವೆ. ಇಂದು ಕುಟುಂಬ ಸಹಿತ ಸಿನಿಮಾಗಳು ನೋಡಲು ಮುಜುಗರವಾಗುವ ಸಂದರ್ಭ ಸೃಷ್ಟಿಯಾಗುತ್ತಿದೆ ಎಂದರು.

ಕನ್ನಡ ಚಿತ್ರರಂಗಕ್ಕೆ ಅದ್ಭುತ ಕಲಾತ್ಮಕ ಸಿನಿಮಾಗಳನ್ನು ನೀಡುತ್ತ ಮೇರು ಸದೃಶ್ಯದ ವ್ಯಕ್ತಿತ್ವವಾಗಿ ರೂಪಗೊಂಡವರು ಗಿರೀಶ್ ಕಾಸರವಳ್ಳಿ. ಸತ್ವಯುತ ಸಿನಿಮಾಗಳು ರೂಪಿಸುವ ಅವಶ್ಯಕತೆಗಳಿಗೆ ನಮ್ಮ ಪೂರ್ವಿಕ ಸಿನಿಮಾ ನಿರ್ದೇಶಕರು ಕಲಾವಿದರು ಆಶಾಕಿರಣವಾಗಿ‌ ನಿಲ್ಲಲಿದ್ದಾರೆ.

ಇಂದು ಬಂದು ನಾಳೆ ಮಾಯವಾಗುವ ಸಿನಿಮಾಗಳೇ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ, ಯುವ ಜನಾಂಗ ಎಚ್ಚೆತ್ತು ಕೊಳ್ಳಬೇಕಿದೆ. ಯಾರನ್ನು ನಮ್ಮ ನಾಯಕರನ್ನಾಗಿ, ಅಭಿಮಾನಿಯಾಗಿ ಹಿಂಬಾಲಿಸಬೇಕು ಎಂಬ ಆತ್ಮ ವಿಮರ್ಶೆ ಮಾಡಿ ಕೊಳ್ಳಬೇಕು. ಯಕ್ಷಗಾನದ‌ ಮೂಲಕ ಸಾಮಾಜಿಕ‌ ಕ್ರಾಂತಿ ಗ್ರಾಮೀಣ ಭಾಗದಲ್ಲಿ ನಡೆಯುತ್ತಿತ್ತು. ಅಂತಹ ಕಲೆಗಳನ್ನು ಉಳಿಸಿಕೊಳ್ಳುವ ಸವಾಲು ಎದುರಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.

ಸಿನಿಮಾ ಟಾಕೀಸ್ ಮಾಯವಾಗಿ ದೊಡ್ಡ ಮಾಲ್‌ಗಳಾಗಿವೆ. ಇತಿಹಾಸವನ್ನು ಅರಿಯದಾತ ಎಂದಿಗೂ ಭವಿಷ್ಯವನ್ನು ರೂಪಿಸಿ ಕೊಳ್ಳಲಾರ.‌ ಕಲಿಯುವ ವಿದ್ಯೆಯಲ್ಲಿ ಏರಿಳಿತವಾದರೂ ಪರವಾಗಿಲ್ಲ ಸಂಸ್ಕಾರ ಕಲಿಸುವಲ್ಲಿ ಏರಿಳಿತವಾಗದಿರಲಿ. ವಿದ್ಯೆ ಕಲಿತ ವರು ಭ್ರಷ್ಟರಾಗಬಹುದು, ಅದರೇ ಸಂಸ್ಕಾರ ಕಲಿತವರು ಎಂದೂ ದಾರಿ ತಪ್ಪುವುದಿಲ್ಲ ಎಂದು ಹೇಳಿದರು. ಅಂತಹ ಸಂಸ್ಕಾರ ನೀಡುವ ಸಿನಿಮಾಗಳನ್ನು ಅಧ್ಯಯನ ನಡೆಸುವಂತೆ ಕರೆ ನೀಡಿದರು.

ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜ ಸಂಚಾಲಕ ಡಾ.ಎಚ್.ಎಸ್.ನಾಗಭೂಷಣ್ ಮಾತನಾಡಿ, ಸಿನಿಮಾ‌ ಶೈಕ್ಷಣಿಕ ಚೌಕಟ್ಟಿಗೆ ಬಂದಿದೆ. ಸಿನಿಮಾ ನೋಡುವ ಆನಂದಿಸುವ ಹೊರತಾಗಿ ಅಧ್ಯಯನ ನಡೆಸಬೇಕಾದ ಅವಶ್ಯಕತೆಯಿದೆ. ಅನೇಕ ಜನಪ್ರಿಯ ಸಿನಿಮಾಗಳು ಅಧ್ಯಯನ ಮತ್ತು ವಿಶ್ಲೇಷಣೆ ನಡೆಯುವುದೇ ಇಲ್ಲ. ತಂತ್ರಜ್ಞಾನದ ಒಳಗಿನ ಆತ್ಮದ ಜೊತೆಗೆ ಒಡನಾಟ‌ ಮಾಡುತ್ತ ಸಿನಿಮಾಗಳನ್ನು ರೂಪಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಅಧ್ಯಕ್ಷತೆ ವಹಿಸಿ ದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ‌ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜ ಸಂಚಾಲಕ ಎಚ್.ಯು.ವೈದ್ಯನಾಥ, ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶಾಲಿನಿ, ಅಲ್ ಮೊಹಮದ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸೋಮಶೇಖರ್, ಕುವೆಂಪು ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಜಿ.ಮಧು, ಸಂಯೋಜಕಿ ಡಾ.ಈ.ಲಾವಣ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕನಸೆಂಬ ಕುದುರೆಯನ್ನೇರಿ’ ಮತ್ತು ‘ಕೂರ್ಮಾವತಾರ’ ಚಲನಚಿತ್ರಗಳು ಪ್ರದರ್ಶನಗೊಂಡಿತು. ಶನಿವಾರ ಈ ಸಿನಿಮಾದ ಕುರಿತು ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಂವಾದ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ