ಸುರೇಶ ಯಳಕಪ್ಪನವರ
ಹೊಸಪೇಟೆ ಕಲಾವಿದ ಜಗದೀಶ್ ಕೈಚಳಕದಲ್ಲಿ ಮೂಡಿಬಂದ ಎರಡು ಕಲಾಕೃತಿಗಳು ಉತ್ಸವಕ್ಕೆ ಮೆರಗು ತಂದಿದ್ದವು. ಚಂಡು ಹೂಗಳಿಂದ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪ ನಿರ್ಮಿಸಲಾಗಿದೆ. ಬಡವಿ ಶಿವಲಿಂಗ ನಿರ್ಮಾಣಕ್ಕೆ ೧೦ ಸಾವಿರ ಹಾಗೂ ಸಾಸಿವೆ ಕಾಳು ಗಣಪತಿ ನಿರ್ಮಾಣಕ್ಕೆ ೫ ಸಾವಿರ ಹೂಗಳು ಬಳಕೆ ಮಾಡಿದ್ದಾರೆ. ಪುಷ್ಪಲೋಕದಲ್ಲಿ ಅರಳಿದ ಬೃಹತ್ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪತಿ ಪ್ರಮುಖ ಆಕರ್ಷಣೆ ಎನಿಸಿವೆ. ನೇರಳೆ, ಹಳದಿ ಬಣ್ಣದ ಸೇವಂತಿ, ಗುಲಾಬಿ, ಬಿಳಿ, ಕೆಂಪು ಬಣ್ಣಗಳಿಂದ ಫಲಪುಷ್ಪ ಪ್ರದರ್ಶನ ಜನಮನ ಸೂರೆಗೊಳ್ಳುತ್ತಿದೆ.
ಸುಗ್ಗಿ ಸಂಭ್ರಮದ ಮೆರಗು:ದವಸ ಧಾನ್ಯಗಳ ರಾಶಿ ಪೂಜೆ ಮಾಡುವ ಮೂಲಕ ಸುಗ್ಗಿ ಸಂಭ್ರಮಕ್ಕೆ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ ನೀಡಿದರು. ಕೃಷಿ ವಸ್ತುಗಳ ಪ್ರದರ್ಶನ ನಾಡಿನ ರೈತರ ಬದುಕನ್ನು ಅನಾವರಣಗೊಳಿಸಿತು. ಸುಗ್ಗಿ ಸಂಭ್ರಮ, ಪಾರಂಪರಿಕ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಸಹಯೋಗದೊಂದಿಗೆ ಸುಸ್ಥಿರ ಕೃಷಿ ಅಭಿವೃದ್ಧಿ ಸಾಧ್ಯತೆಯನ್ನು ವಸ್ತು ಪ್ರದರ್ಶನ ಸಾರುತ್ತಿದೆ. ಸಂಕ್ರಾಂತಿ ಹಬ್ಬ, ರಾಶಿಪೂಜೆ, ಬೀಜಗಳ ಒಕ್ಕಣೆ ಮಾಡುತ್ತಾ ಹಾಗೂ ಒಳಕಲ್ಲಿನಲ್ಲಿ ಧಾನ್ಯ ಬೀಸುತ್ತಾ ಜನಪದ ಗೀತೆ ಹಾಡುವ ಗ್ರಾಮೀಣ ಮಹಿಳೆಯರು, ಎತ್ತಿನ ಬಂಡಿ ಹಳ್ಳಿ ಸೊಗಡನ್ನು ಚಿತ್ರಣವನ್ನು ನೋಡುಗರ ಕಣ್ಣಿಗೆ ಕಟ್ಟಿಕೊಡುತ್ತಿವೆ. ಜಿಲ್ಲಾಡಳಿತ ಉತ್ಸವದಲ್ಲಿ ಕೃಷಿಗೆ ವಿಶೇಷ ಆಧ್ಯತೆ ನೀಡಿದ್ದು ಎಲ್ಲೆಡೆ ಕಂಡುಬಂತು.
ಫಲಪುಷ್ಪ ಪ್ರದರ್ಶನ:
ಪ್ರದರ್ಶನದಲ್ಲಿ ಕುಲಾಂತರಿ ಹಾಗೂ ವಿದೇಶಿ ಬೀಜಗಳ ನಡುವೆಯೂ ಜವಾರಿ ಹಾಗೂ ನಾಟಿ ಬೀಜ ಸಂಪತ್ತು, ಜೀವ ಹಾಗೂ ಸಸ್ಯ ವೈವಿಧ್ಯತೆ ಕಾಪಾಡುವ ಮಹತ್ವ ಸಾರುತ್ತಿವೆ. ಕೃಷಿ ವಸ್ತು ಪ್ರದರ್ಶನದಲ್ಲಿ ದೇಶಿ ಪಾರಂಪರಿಕ ಕೃಷಿ ಉತ್ಪನ್ನಗಳು ರೈತರ ಜೀವನ ತರೆದಿಡುತ್ತಿವೆ. ಸಿರಿಧಾನ್ಯಗಳಲ್ಲಿ ಮೂಡಿಬಂದ ಗಣಪತಿ, ಕೆ.ಎಸ್.ಡಿ.ಎ ಲಾಂಚನ ಹಾಗೂ ನಂದಿ ಜನರನ್ನು ಸಳೆಯುತ್ತಿವೆ. ಇದರೊಂದಿಗೆ ಕೃಷಿಯಲ್ಲಿ ದ್ರೋಣಗಳ ಬಳಕೆ, ಟ್ರಾಕ್ಟರ್, ಪಶುಪಾಲನೆಯೊಂದಿಗೆ ಸಮಗ್ರ ಕೃಷಿ ಪದ್ದತಿ ಬಗ್ಗೆ ತಿಳಿಸುವ ಕೃಷಿ ಬ್ರ‍್ರಹ್ಮಾಂಡ, ರೇಷ್ಮೆ ಕೃಷಿ, ಸಿರಿಧಾನ್ಯಗಳ ಖಾದ್ಯಗಳ ಹಾಗೂ ಸಾವಯವ ಕೃಷಿ ಉತ್ಪನ್ನ ಮಾರಾಟ ಈ ಬಾರಿಯ ಕೃಷಿ ಪ್ರದರ್ಶನದಲ್ಲಿ ಪ್ರಮುಖ ಎನಿಸಿವೆ.
ಜಿಲ್ಲೆಯ ಹೆಮ್ಮೆಯ ದರೋಜಿ ಕರಡಿಧಾಮವನ್ನು ಹಂಪಿಯ ಅಂಗಳದಲ್ಲಿ ಅರಣ್ಯ ಇಲಾಖೆ ಅತ್ಯಂತ ಸುಂದರವಾಗಿ ಸೃಷ್ಟಿಸಿದೆ. ವಿಜಯನಗರ ಜಿಲ್ಲೆಯ ಸಮೃದ್ಧ ಜೀವ ವೈವಿಧ್ಯತೆಯನ್ನು ಪರಿಚಯಿಸುವ ಅರಣ್ಯ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಯು ಪ್ರವಾಸಿಗರ ಮನಗೆಲ್ಲುತ್ತಿದೆ. ಬೆಟ್ಟಗುಡ್ಡಗಳ ಸಾಲು, ಕಲ್ಲುಗಳ ನಡುವಿನ ಗುಹೆಗಳು ಮತ್ತು ಹಸಿರಿನ ಹೊದಿಕೆಯನ್ನು ಕಂಡು ಪ್ರವಾಸಿಗರು ನಿಬ್ಬೆರಗಾಗುತ್ತಿದ್ದಾರೆ. ಹುಲಿ, ಚಿರತೆ, ಕರಡಿ ಹಾಗೂ ವಿವಿಧ ಉರಗಗಳ ಕಲಾಕೃತಿಗಳು ಪ್ರೇಕ್ಷಕರನ್ನು ಸ್ವಾಗತಿಸುತ್ತವೆ. ಇವುಗಳನ್ನು ಕಂಡ ಪ್ರವಾಸಿಗರು ಇವುಗಳ ಮುಂದೆ ನಿಂತು ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ.