ಇತಿಹಾಸವನ್ನು ಮರೆತು ವರ್ತಮಾನವನ್ನು ಅರ್ಥಮಾಡಿಕೊಳ್ಳದವರು ಭವಿಷ್ಯವನ್ನು ಸೃಷ್ಟಿಸಲಾರರು. ಪರಂಪರೆಯ ಕ್ರಮಬದ್ಧ ಅಧ್ಯಯನವೇ ಇತಿಹಾಸ ಎಂದು ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು
ಕನ್ನಡಪ್ರಭ ವಾರ್ತೆ ತುಮಕೂರು
ಇತಿಹಾಸವನ್ನು ಮರೆತು ವರ್ತಮಾನವನ್ನು ಅರ್ಥಮಾಡಿಕೊಳ್ಳದವರು ಭವಿಷ್ಯವನ್ನು ಸೃಷ್ಟಿಸಲಾರರು. ಪರಂಪರೆಯ ಕ್ರಮಬದ್ಧ ಅಧ್ಯಯನವೇ ಇತಿಹಾಸ ಎಂದು ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.ತುಮಕೂರು ವಿವಿಯಲ್ಲಿ ಅಖಿಲ ಭಾರತೀಯ ಇತಿಹಾಸ ಸಂಕಲನ ಸಮಿತಿ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಸಹಯೋಗದಲ್ಲಿ ಶ್ರೀಕೃಷ್ಣದೇವರಾಯರ 496ನೇ ಪುಣ್ಯಸ್ಮರಣೆಯ ಅಂಗವಾಗಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ಕಾಲಘಟ್ಟದಲ್ಲಿ ಮಾನವ ಪ್ರೇಮ, ಭ್ರಾತೃತ್ವವನ್ನು ಕಲಿಯಲು, ಭವ್ಯವಾಗಿ ಬದುಕಲು, ಪ್ರಮಾದರಹಿತ ಬದುಕು ನಮ್ಮದಾಗಲು ಇತಿಹಾಸ ಅಧ್ಯಯನ ಅವಶ್ಯಕವಾಗಿದೆ. ವಿಜಯನಗರ ಸಾಮ್ರಾಜ್ಯಕ್ಕೆ ಮೆರುಗು, ವೈಭವ ತಂದುಕೊಟ್ಟ ಶ್ರೀಕೃಷ್ಣದೇವರಾಯ ಜನಾನುರಾಗಿದ್ದರು ಎಂದು ತಿಳಿಸಿದರು. ಅಖಿಲ ಭಾರತೀಯ ಇತಿಹಾಸ ಸಂಕಲನ ಸಮಿತಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ. ಬಾಲಮುಕುಂದ ಪಾಂಡೆ ಮಾತನಾಡಿ, ಶಿಕ್ಷಣದ ಉದ್ದೇಶ ನೌಕರಿ ಹಿಡಿಯುವುದಾಗಿದೆ. ಸಾಹಿತ್ಯ-ಸಂಸ್ಕೃತಿಯನ್ನು ತಿಳಿದುಕೊಳ್ಳುವ ಗೋಜಿಗೆ ವಿದ್ಯಾರ್ಥಿಗಳು ಹೋಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ಇತಿಹಾಸವು ಜ್ಞಾನ ಆಧಾರಿತ ಶಿಕ್ಷಣವನ್ನು ಒಳಗೊಂಡಿತ್ತು. 21ನೇಯ ಶತಮಾನ ಉದ್ಯೋಗ ಆಧಾರಿತ ಶಿಕ್ಷಣ ನೀಡುವುದರಲ್ಲಿ ತಲ್ಲೀನವಾಗಿದೆ. ಸುಧಾರಿತ ಪಠ್ಯಕ್ರಮಗಳಿಂದ ಶಿಕ್ಷಣ ವ್ಯವಸ್ಥೆ ಸುಧಾರಿಸುತ್ತಿಲ್ಲ ಎಂದರು.ಹಂಪಿ ಕನ್ನಡ ವಿವಿಯ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ ಮಾತನಾಡಿ, ಪ್ರಾದೇಶಿಕ ಚರಿತ್ರೆಯೊಂದಿಗೆ ರಾಷ್ಟ್ರೀಯ ಚರಿತ್ರೆಯತ್ತ ನಾವೆಲ್ಲರೂ ಮುಖಮಾಡಬೇಕು. ಪೂರ್ವ ನಿರ್ಧಾರಿತ ಸಿದ್ಧಾಂತಗಳಿಂದ ಸಮಾಜಮುಖಿ ಅರಸರ ಚರಿತ್ರೆ ಮುನ್ನೆಲೆಗೆ ಬಂದಿಲ್ಲ ಎಂದು ತಿಳಿಸಿದರು.ವಿಚಾರ ಸಂಕಿರಣದ ಸಂಯೋಜಕ ಪ್ರೊ.ಎಂ.ಕೊಟ್ರೇಶ್ ಮಾತನಾಡಿ, ಸಾಮ್ರಾಟ ಶ್ರೀಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯವನ್ನು ವ್ಯಾಪಕವಾಗಿ ವಿಸ್ತರಿಸಿದ್ದಾರೆ. ಶ್ರೀಕೃಷ್ಣದೇವರಾಯನ ಆಡಳಿತ ಭಾಷೆ ಕನ್ನಡವಾಗಿತ್ತು ಎಂದು ತಿಳಿಸಿದರು.ಶ್ರೀಕೃಷ್ಣದೇವರಾಯರ ಕುರಿತು ವಿವಿಧ ಶೈಕ್ಷಣಿಕ ಗೋಷ್ಠಿಗಳು ನಡೆದವು. ದೇಶದ ವಿವಿಧ ಭಾಗದಿಂದ ಆಗಮಿಸಿದ್ದ- ಭಾರತೀಯ ಇತಿಹಾಸ ಸಂಕಲನ ಸಮಿತಿ ಉಪಾಧ್ಯಕ್ಷ ಕೆ. ಆರ್. ನರಸಿಂಹನ್, ಪ್ರಸಿದ್ಧ ಇತಿಹಾಸಕಾರ ಮತ್ತು ಖ್ಯಾತ ವಿದ್ವಾಂಸ ಡಾ. ವಸುಂಧರಾ ಫಿಲಿಯೋಜ, ಡಾ.ಕೆ. ಜಿ. ಗೋಪಾಲಕೃಷ್ಣ, ಡಾ. ಲಕ್ಷ್ಮೀಶ ಹೆಗಡೆ, ಡಾ.ಡಿ. ಎನ್. ಯೋಗೀಶ್ವರಪ್ಪ, ಶಾಸನ ಸಂಶೋಧಕ ಕೆ. ಧನಪಾಲ್, ಪ್ರೊ. ಎಲ್. ಪಿ.ರಾಜು, ಡಾ. ಚಿಕ್ಕಣ್ಣ, ಡಾ. ಪ್ರಿಯಾಠಾಕೂರ್ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.