ಎಚ್.ಐ.ವಿ. ಸೋಂಕಿತರ ಬಗ್ಗೆ ಕೀಳರಿಮೆ ಸಲ್ಲದು: ಡಾ.ಎಂ.ಕೆ. ಗುಜ್ಜರಿ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ತಿಕೋಟಾದ ಎ.ಬಿ. ಜತ್ತಿ ಪದವಿ ಪೂರ್ವ ಕಾಲೋನಿಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಆಲ್ ಅಮಿನ್ ವೈದ್ಯಕೀಯ ಮಹಾವಿದ್ಯಾಲಯದ ಪಿ.ಪಿ.ಟಿ.ಸಿ.ಟಿ ಕೇಂದ್ರ ಹಾಗೂ ಎ.ಬಿ. ಜತ್ತಿ ಪದವಿ ಪೂರ್ವ ಮಹಾವಿದ್ಯಾಲಯ ಆಶ್ರಯದಲ್ಲಿ ತಿಕೋಟಾ ತಾಲೂಕು ಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಎಚ್.ಐ.ವಿ. ಭಯಾನಕ ರೋಗವಲ್ಲ. ಅದನ್ನು ನಿಯಂತ್ರಣ ಸಾಧ್ಯವಿದೆ ಎಂದು ತಿಕೋಟಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಕೆ. ಗುಜ್ಜರಿ ಹೇಳಿದರು.

ತಿಕೋಟಾದ ಎ.ಬಿ. ಜತ್ತಿ ಪದವಿ ಪೂರ್ವ ಕಾಲೋನಿಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಆಲ್ ಅಮಿನ್ ವೈದ್ಯಕೀಯ ಮಹಾವಿದ್ಯಾಲಯದ ಪಿ.ಪಿ.ಟಿ.ಸಿ.ಟಿ ಕೇಂದ್ರ ಹಾಗೂ ಎ.ಬಿ. ಜತ್ತಿ ಪದವಿ ಪೂರ್ವ ಮಹಾವಿದ್ಯಾಲಯ ಆಶ್ರಯದಲ್ಲಿ ತಿಕೋಟಾ ತಾಲೂಕು ಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿರಿಯ ಆಪ್ತಸಮಾಲೋಚಕ ರವಿ ಕಿತ್ತೂರ ಮಾತನಾಡಿ, ಜಿಲ್ಲೆಯಲ್ಲಿ ನಿರಂತರವಾಗಿ ಎಚ್.ಐ.ವಿ. ನಿಯಂತ್ರಣದ ಸಲುವಾಗಿ ಎಲ್ಲ ಸಮುದಾಯಗಳಿಗೆ ಹಾಗೂ ಯುವಕರಿಗೆ ಮಾಹಿತಿ ನೀಡುವ ಕಾರ್ಯ ನಡೆಯುತ್ತಿದೆ. ಮನೆ ಮನೆಗೆ ಭೇಟಿಯಾಗಿ ಮಾಹಿತಿ ನೀಡುವ ಕಾರ್ಯ ಹಲವಾರು ವರ್ಷದಿಂದ ನಡೆಯುತ್ತಿದೆ. ಇದರಿಂದ ಜಿಲ್ಲೆಗೆ ಅಂಟಿಕೊಂಡಿರುವ ಕಳಂಕ ಹೋಗಲಾಡಿಸುವ ಕಾರ್ಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಎಚ್.ಐ.ವಿ. ಸೋಂಕಿತರು, ತಮ್ಮದೆ ಆದ ಸಂಘದ ಮುಖಾಂತರ, ಸೋಂಕಿತರಿಗೆ ಆಗುತ್ತಿರುವ ಕಳಂಕ ತಾರತಮ್ಯ ಹೋಗಲಾಡಿಸುವ ಕಾರ್ಯ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ಎಚ್.ಐ.ವಿ. ಸೋಂಕಿತರ ಬಗ್ಗೆ ಇರುವ ನಕಾರಾತ್ಮಕ ಧೋರಣೆ ಬಿಟ್ಟು, ಅವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಬೇಕಿದೆ. ಸೋಂಕಿತರು ಇತರರಂತೆ ಸುಂದರ ಜೀವನ ನಡೆಸುತ್ತಿದ್ದಾರೆ. ಅವರ ಬಗ್ಗೆ ಕೀಳರಿಮೆ ಸಲ್ಲದು ಎಂದರು.

ಮುಖ್ಯ ಅತಿಥಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಬಾಬುರಾವ ತಳವಾರ ಮಾತನಾಡಿ, ಇಲಾಖೆಯಿಂದ ಎಚ್.ಐ.ವಿ. ನಿಯಂತ್ರಣಕ್ಕಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಯುವಕರು ಕ್ಷಣಿಕ ಸುಖಕ್ಕಾಗಿ ತಮ್ಮ ಜೀವನ ಹಾಳುಮಾಡಿಕೊಳ್ಳದೆ ಸನ್ಮಾರ್ಗದಲ್ಲಿ ನಡೆಯುವ ಕಾರ್ಯ ಆಗಬೇಕಿದೆ. ಇಂದು ಹಲವಾರು ಹೊಸ ರೋಗಗಳನ್ನು ಕಾಣುತ್ತಿದ್ದೇವೆ. ಅವುಗಳನ್ನು ನಿಯಂತ್ರಣ ಮಾಡಬೇಕಾದರೆ, ಸರಿಯಾದ ಜ್ಞಾನ ಹೊಂದಿರಬೇಕು. ಜಿಲ್ಲೆಯಲ್ಲಿ ಎಚ್.ಐ.ವಿ. ಹೊಸ ಸೊಂಕನ್ನು ಸೊನ್ನೆಗೆ ತರಲು ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಎ.ಬಿ. ಜತ್ತಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ವಿ.ಆರ್. ಸದಾಶಿವ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಆಲ್ ಅಮೀನ್ ವೈದ್ಯಕೀಯ ಕಾಲೇಜಿನ ಪಿ.ಪಿ.ಟಿ.ಸಿ.ಟಿ , ಐ.ಸಿ.ಟಿ.ಸಿ. ಆಪ್ತ ಸಮಾಲೋಚಕರಾದ ಅಮೀನಪರಿ ಮುಲ್ಲಾ, ಅನ್ನಪೂರ್ಣ ಪತ್ತಾರ, ಗೋಪಾಲ ರಬಕವಿ,

ಕವಿತಾ ಹೊಸಟ್ಟಿ, ಸವಿತಾ ಜಂಬಗಿ, ಸಿದ್ದರಾಮ ಕರ್ಕಿ ಪಾಲ್ಗೊಂಡಿದ್ದರು.ನಿರಂಜನ ಕೊರೆ ನಿರೂಪಿಸಿದರು.

Share this article