ಎಚ್‌ಎಂಪಿವಿ ಬೆಂಗಳೂರಲ್ಲಿ ಕಂಡು ಬಂದ ಹಿನ್ನೆಲೆ ಕೆಎಂಸಿಆರ್‌ಐನಲ್ಲಿ ಪ್ರತ್ಯೇಕ ತಂಡ!

KannadaprabhaNewsNetwork | Updated : Jan 09 2025, 12:32 PM IST

ಸಾರಾಂಶ

ಕೆಎಂಸಿಆರ್‌ಐಗೆ ಉತ್ತರ ಕರ್ನಾಟಕದ 13 ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಾರೆ. ಅದರಲ್ಲೂ ಇಂಥ ಸಾಂಕ್ರಾಮಿಕ ರೋಗಗಳಿದ್ದರೆ ಜನರಿಗೆ ಖಾಸಗಿ ಆಸ್ಪತ್ರೆಗಳಿಗಿಂತ ಹೆಚ್ಚು ನಂಬುಗೆ ಕೆಎಂಸಿಆರ್‌ಐ ಬಗ್ಗೆಯೇ ಇದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:  ಚೀನಾದ ಎಚ್‌ಎಂಪಿವಿ   ಬೆಂಗಳೂರಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಅದರೊಂದಿಗೆ ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಹೆಸರು ಪಡೆದಿರುವ ಕೆಎಂಸಿಆರ್‌ಐ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಕೂಡ ಮುನ್ನಚ್ಚರಿಕೆಗೆ ಮುಂದಡಿ ಇಟ್ಟಿದೆ. ಎಚ್‌ಎಂಪಿವಿ  ಬಗ್ಗೆ ಭಯಬೇಡ; ಆದರೆ ನಿರ್ಲಕ್ಷ್ಯವೂ ಬೇಡ, ಎಚ್ಚರಿಕೆ ವಹಿಸಿ ಎಂದು ಕೆಎಂಸಿಆರ್‌ಐ ತಿಳಿಸುತ್ತದೆ.

ಹಾಗೆ ನೋಡಿದರೆ ಎಚ್‌ಎಂಪಿವಿ  ಹೊಸದಲ್ಲ. ಇದು ಹಳೆಯ ವೈರಸ್‌. ಇಲ್ಲೂ ಜ್ವರ, ನೆಗಡಿ, ಸೀನುವಿಕೆ ಹೀಗೆ ಮುಂತಾದ ಲಕ್ಷಣಗಳನ್ನೇ ಇದು ಹೊಂದಿರುತ್ತದೆ. ಈ ಬಗ್ಗೆ ಇದೀಗ ಭಾರತದಲ್ಲಷ್ಟೇ ಅಲ್ಲ. ಕರ್ನಾಟಕದಲ್ಲೂ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನಾದಂತೆ ಕಾಡದಿರಲಿ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಮುನ್ನಚ್ಚರಿಕೆ ಕೈಗೊಂಡಿದೆ. ಅದರಂತೆ ಕೆಎಂಸಿಆರ್‌ಐನಲ್ಲೂ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸೂಚನೆಯನ್ನೂ ನೀಡಿದೆ. ಅದಕ್ಕೆ ತಕ್ಕಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಪ್ರತ್ಯೇಕ ವಾರ್ಡ್‌:

ಕೆಎಂಸಿಆರ್‌ಐಗೆ ಉತ್ತರ ಕರ್ನಾಟಕದ 13 ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಾರೆ. ಅದರಲ್ಲೂ ಇಂಥ ಸಾಂಕ್ರಾಮಿಕ ರೋಗಗಳಿದ್ದರೆ ಜನರಿಗೆ ಖಾಸಗಿ ಆಸ್ಪತ್ರೆಗಳಿಗಿಂತ ಹೆಚ್ಚು ನಂಬುಗೆ ಕೆಎಂಸಿಆರ್‌ಐ ಬಗ್ಗೆಯೇ ಇದೆ. ಕೊರೋನಾದ ಬಳಿಕವಂತೂ ಈ ನಂಬುಗೆ ಇನ್ನಷ್ಟು ಜಾಸ್ತಿಯಾಗಿದೆ. ಕೊರೋನಾ ಬಳಿಕ ಕೆಎಂಸಿಆರ್‌ಐನ ಇಮೇಜ್‌ ಕೂಡ ಹೆಚ್ಚಾಗಿದೆ.

ಇದೀಗ ಮತ್ತೊಂದು ವೈರಸ್‌ ಕಂಡು ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ. ಅತ್ತ ವೈರಸ್‌ ಕಂಡು ಬಂದ ತಕ್ಷಣವೇ ಇತ್ತ ತಜ್ಞ ಹಾಗೂ ಹಿರಿಯ ವೈದ್ಯರೊಂದಿಗೆ ಸಭೆ ನಡೆಸಿರುವ ಕೆಎಂಸಿಆರ್‌ಐನ ನಿರ್ದೇಶಕರು, ತಕ್ಷಣವೇ ಇದಕ್ಕಾಗಿ ಪ್ರತ್ಯೇಕ ತಂಡವನ್ನೇ ರಚಿಸಿದ್ದಾರೆ. ಶ್ವಾಸಕೋಶ ವಿಭಾಗದ ಮುಖ್ಯಸ್ಥರು, ಮಕ್ಕಳ ವಿಭಾಗದ ಮುಖ್ಯಸ್ಥರು, ಮೆಡಿಸಿನ್‌ ಸೇರಿದಂತೆ ಹಿರಿಯ ಹಾಗೂ ತಜ್ಞ ಐದು ವೈದ್ಯರ ತಂಡವನ್ನು ರಚಿಸಿದೆ. ಜತೆಗೆ ಇದಕ್ಕಾಗಿ ಪ್ರತ್ಯೇಕ ವಾರ್ಡ್‌ನ್ನು ಮೀಸಲಿರಿಸಲಾಗಿದೆ. 20 ಬೆಡ್‌ಗಳವುಳ್ಳ ವಾರ್ಡ್‌ನ್ನು ಸಿದ್ಧಪಡಿಸಲಾಗಿದ್ದು, ಎಲ್ಲ ಅತ್ಯಾಧುನಿಕ ಸೌಲಭ್ಯಗಳು ಇಲ್ಲಿವೆ. ಎಂಥದೇ ಪ್ರಸಂಗ ಬಂದರೂ ಎದುರಿಸಲು ಕೆಎಂಸಿಆರ್‌ಐ ಸಜ್ಜುಗೊಂಡಿದೆ.

ಆತಂಕ ಬೇಡ; ನಿರ್ಲಕ್ಷ್ಯವೂ ಬೇಡ:

ಹಾಗೆ ನೋಡಿದರೆ ಈ ವೈರಸ್‌ ಅಷ್ಟೊಂದು ಭಯ ಬೀಳುವಂತಹದ್ದಲ್ಲ. ಈ ವೈರಸ್‌ ಹೊಸದು ಕೂಡ ಅಲ್ಲ. ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿರ್ಲಕ್ಷ್ಯ ವಹಿಸುವುದು ಬೇಡ, ನಿಮ್ಮ ಆರೋಗ್ಯದ ಬಗ್ಗೆ ಕೊಂಚ ಹೆಚ್ಚಿನ ಗಮನಹರಿಸಬೇಕು. ಸೀನು ಬಂದರೆ ಕರವಸ್ತ್ರ ಬಳಸಬೇಕು. ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ಆಗ ತಪ್ಪದೇ ಮಾಸ್ಕ್‌ ಬಳಸಬೇಕು. 

ವೈರಲ್‌ ಫಿವರ್ ಬಂದಾಗ ಯಾವ ರೀತಿ ಲಕ್ಷಣಗಳಿರುತ್ತವೆಯೋ ಆ ರೀತಿ ಇರುತ್ತವೆ ಅಷ್ಟೇ. ಯಾರು ಭಯ ಪಡಬೇಕಿಲ್ಲ ಎಂದು ವೈದ್ಯರು ತಿಳಿಸುತ್ತಾರೆ.ಎಚ್‌ಎಂಪಿವಿ ವೈರಸ್‌ ಹೊಸದಲ್ಲ. ಆದರೂ ಮುನ್ನಚ್ಚರಿಕೆ ಅಗತ್ಯ. ಕೆಎಂಸಿಆರ್‌ಐನಲ್ಲಿ ಮುನ್ನಚ್ಚರಿಕೆ ಕ್ರಮಕೈಗೊಂಡಿದೆ. ತಜ್ಞ ವೈದ್ಯರನ್ನೊಳಗೊಂಡ ಪ್ರತ್ಯೇಕ ತಂಡ ರಚಿಸಲಾಗಿದೆ. ಇದಕ್ಕಾಗಿ 20 ಬೆಡ್‌ಗಳ ಪ್ರತ್ಯೇಕ ವಾರ್ಡ್‌ ಕೂಡ ಮೀಸಲಿರಿಸಲಾಗಿದೆ. ಈ ವೈರಸ್‌ ಬಗ್ಗೆ ಯಾವುದೇ ಭಯ ಪಡಬೇಕಿಲ್ಲ. ಸ್ವಲ್ಪ ಆರೋಗ್ಯದ ಬಗ್ಗೆ ಗಮನಹರಿಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಸಾಕು ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ಹೇಳಿದರು.

Share this article