ಹಾಕಿ ಕ್ರೀಡಾಕೂಟ: ಬಾಲಕಿಯರಲ್ಲಿ ಮೈಸೂರು, ಬಾಲಕರಲ್ಲಿ ಕೊಡಗು ತಂಡ ಚಾಂಪಿಯನ್‌

KannadaprabhaNewsNetwork |  
Published : Nov 23, 2026, 03:00 AM IST
ಶೀರ್ಷಿಕೆ: ೧ | Kannada Prabha

ಸಾರಾಂಶ

ಜಮಖಂಡಿ ನಗರದತಾಲೂಕುಕ್ರೀಡಾಂಗಣದಲ್ಲಿ ನಡೆದರಾಜ್ಯಮಟ್ಟದ ಹಾಕಿ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪ್ರಥಮ ಸ್ಥಾನ ಪಡೆದ ಕೊಡಗು ತಂಡಕ್ಕೆ ಗಣ್ಯರು ಟ್ರೋಫಿ ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ರಾಷ್ಟ್ರೀಯ ಕ್ರೀಡೆಯಾದ ಹಾಕಿ ಆಟಕ್ಕೆ ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಿನ ಜನಪ್ರೀಯತೆ ಇಲ್ಲದಿದ್ದರೂ ತುಂಗಳ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಹಾಕಿ ಕ್ರೀಡಾಕೂಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತುಂಗಳ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಶೋಕ ತುಂಗಳ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಹಾಗೂ ಬಾಗಲಕೋಟೆ ಮತ್ತು ತುಂಗಳ ವಿಜ್ಞಾನ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಜಮಖಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ೨೦೨೬ನೇ ಸಾಲಿನ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಹಾಕಿ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ತುಂಗಳ ಶಾಲೆಯ ಬೆಳ್ಳಿ ಸಂಭ್ರಮದ ನಿಮಿತ್ತ ಮುಂದಿನ ವರ್ಷವೂ ರಾಜ್ಯಮಟ್ಟದ ಯಾವುದಾದರೂ ಒಂದು ಕ್ರೀಡಾಕೂಟ ಆಯೋಜಿಸುವ ಉದ್ದೇಶವಿದೆ. ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರತರಲು ಸಂಸ್ಥೆ ಸದಾ ಸಹಕಾರ ನೀಡಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಕಾಂಬಳೆ, ಇಂದಿನ ಮಕ್ಕಳು ಮೊಬೈಲ್‌ನಂತಹ ವ್ಯಸನಗಳಿಗೆ ಬಲಿಯಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ದೈಹಿಕ ಕ್ಷಮತೆ, ಮಾನಸಿಕ ಸದೃಢತೆ, ಶಿಸ್ತು ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದರ ಜೊತೆಗೆ ಸರ್ವತೋಮುಖ ಬೆಳವಣಿಗೆ ಸಾಧಿಸಬಹುದು ಎಂದು ಹೇಳಿದರು. ತುಂಗಳ ವಿಜ್ಞಾನ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಜಿ. ಜಹಾಗೀರದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

45 ತಂಡಗಳ ನಡುವೆ ಕ್ರೀಡಾ ಪೈಪೋಟಿ:

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಾಲಕರ ೨೪ ಹಾಗೂ ಬಾಲಕಿಯರ ೨೧ ತಂಡಗಳು ಸೇರಿ ಒಟ್ಟು ೪೫ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದವು. ಬಾಲಕಿಯರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಕೊಡಗು ತಂಡ ಬಾಗಲಕೋಟೆ ತಂಡವನ್ನು ೪-೦ ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಪಂದ್ಯದಲ್ಲಿ ಮೈಸೂರು ತಂಡ ಬೆಂಗಳೂರು ಕೇಂದ್ರತಂಡವನ್ನು ೫-೦ ಗೋಲುಗಳಿಂದ ಮಣಿಸಿ ಫೈನಲ್‌ಗೆ ಅರ್ಹತೆ ಪಡೆಯಿತು.

ಬಾಲಕರ ವಿಭಾಗದ ಸೆಮಿಫೈನಲ್‌ನಲ್ಲಿ ಕೊಡಗು ಹಾಗೂ ಬಳ್ಳಾರಿ ತಂಡಗಳ ನಡುವಿನ ಪಂದ್ಯ ೧-೧ ಗೋಲುಗಳಿಂದ ಸಮಬಲಗೊಂಡಿತು. ಟೈಬ್ರೇಕರ್‌ನಲ್ಲಿ ೪-೨ ಅಂತರದಿಂದ ಕೊಡಗು ತಂಡ ಜಯಗಳಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ನಾರ್ತ್‌ ತಂಡ ಚಿಕ್ಕೋಡಿ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.

ಮೈಸೂರು, ಕೊಡಗು ತಂಡಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ:

ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಮೈಸೂರು ತಂಡ ಕೊಡಗು ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಯಿತು.

ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಕೊಡಗು ಹಾಗೂ ಬೆಂಗಳೂರು ನಾರ್ತ್ ತಂಡಗಳು ತಲಾ ಒಂದು ಗೋಲು ದಾಖಲಿಸಿ ಸಮಬಲ ಸಾಧಿಸಿದವು. ಬಳಿಕ ನಡೆದ ಟೈಬ್ರೇಕರ್‌ನಲ್ಲಿ ಕೊಡಗು ತಂಡ ಮೇಲುಗೈ ಸಾಧಿಸಿ ಪ್ರಥಮ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯಿತು.

ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಗಣ್ಯರು ಬಹುಮಾನ ಹಾಗೂ ಪ್ರಶಸ್ತಿ ವಿತರಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬಾಗಲಕೋಟೆ ಸಹಾಯಕ ನಿರ್ದೇಶಕ ಗುರುಪಾದ ದೂಗನ್ನವರ, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಕೆ. ಮುರುಗೋಡ, ತುಂಗಳ ಸಂಸ್ಥೆಯ ಡಾ.ಲಕ್ಷ್ಮಿ ತುಂಗಳ, ತುಂಗಳ ಪದವಿ ಪೂರ್ವ ಮಹಾವಿದ್ಯಾಲಯ, ಹುಲ್ಯಾಳದ ಪ್ರಾಚಾರ್ಯ ವಿಜಯ ಎಸ್. ಕುಲಕರ್ಣಿ ಉಪಸ್ಥಿತರಿದ್ದರು. ಶಿಕ್ಷಕ ಶ್ರೀಕಾಂತ ಪಢತರೆ ನಿರೂಪಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಗುರು ಜನವಾಡ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರದಲ್ಲಿ ಆಸರೆಯಾದ ಕಳಸಕೊಪ್ಪ ಕೆರೆ
ಬೆಳಗಾವಿಯಲ್ಲಿ ಮಟಕಾ ದಂಧೆ ಮೇಲೆ ಪೊಲೀಸರ ಸರಣಿ ದಾಳಿ