ಗ್ಯಾರಂಟಿ ತಲುಪಿಸಲು ಗ್ರಾಮಸಭೆ ನಡೆಸಿ: ಬೆಂತೂರ

KannadaprabhaNewsNetwork | Updated : Oct 25 2024, 01:06 AM IST

ಸಾರಾಂಶ

ಪ್ರತಿತಿಂಗಳು ಗ್ಯಾರಂಟಿ ಯೋಜನೆ ಸಭೆಗೆ ಅಧಿಕಾರಿ ವರ್ಗ ಅನುಪಾಲನಾ ವರದಿ ತರದಿದ್ದರೆ ಅಂಥ ಅಧಿಕಾರಿಗಳು ಹಾಜರಾಗಬೇಡಿ ಎಂದು ಶಿವಾನಂದ ಬೆಂತೂರ ಹೇಳಿದರು.

ಕುಂದಗೋಳ:

ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ತಾಲೂಕಿನ 27 ಗ್ರಾಮ ಪಂಚಾಯಿತಿ ಒಳಗೊಂಡತೆ ಗ್ರಾಮಸಭೆ ಕರೆಯಬೇಕೆಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಬೆಂತೂರ ಆಗ್ರಹಿಸಿದರು.

ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿತಿಂಗಳು ಗ್ಯಾರಂಟಿ ಯೋಜನೆ ಸಭೆಗೆ ಅಧಿಕಾರಿ ವರ್ಗ ಅನುಪಾಲನಾ ವರದಿ ತರದಿದ್ದರೆ ಅಂಥ ಅಧಿಕಾರಿಗಳು ಹಾಜರಾಗಬೇಡಿ ಎಂದರು.

ಆಹಾರ ಇಲಾಖೆಯ ಅಧಿಕಾರಿ ಮಹೇಶ ಶ್ಯಾನಭಾಳ ಮಾತನಾಡಿ, ನ್ಯಾಯಬೆಲೆ ಅಂಗಡಿಗಳು 50, ಅಂತ್ಯೋದಯ ಕಾರ್ಡ್‌ಗಳ ಸಂಖ್ಯೆ 4476, ಬಿಪಿಎಲ್ 38797 ಹಾಗೂ ಎಪಿಎಲ್ 1442 ಇವೆ. ಆದರೆ ಅಧಿಕಾರಿ ವರ್ಗ ತಂದ ವರದಿಯಲ್ಲಿ ಲೋಪದೋಷಗಳಿದ್ದವು. ಹೀಗಾಗಿ ವರದಿ ಸರಿಯಾಗಿ ತೆಗೆದುಕೊಂಡು ಬರಬೇಕು ಎಂದು ತಾಕೀತು ಮಾಡಿದರು.

ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶಾರದಾ ನಾಡಗೌಡರ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ 42932 ಫಲಾನುಭವಿಗಳಿದ್ದಾರೆ. ಈ ಪೈಕಿ 254 ಫಲಾನುಭವಿಗಳಿಗೆ ದುಡ್ಡು ಬಂದಿಲ್ಲ ಎಂದು ಹೇಳಿದರು.

ಸಾರಿಗೆ ಇಲಾಖೆಯ ಕುಂದಗೋಳ ಕಂಟ್ರೋಲರ್ ಪ್ರಕಾಶ ಹುಗ್ಗಣ್ಣವರ ಮಾತನಾಡಿ, ಬಸ್‌ಗಳ ಮಾಹಿತಿ ಪಡೆದರು. ಹೆಸಾಂ ಇಲಾಖೆಯ ಅಧಿಕಾರಿ ವೀರೇಶ ಮಠದ ಗೃಹ ಜ್ಯೋತಿ ಯೋಜನೆ ಮಾಹಿತಿ ನೀಡಿದರು.

ಯುವನಿಧಿ ಯೋಜನೆ (ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹುಬ್ಬಳ್ಳಿಯ) ವಿಭಾಗದ ಪ್ರಭಾರ ಅಧಿಕಾರಿ ಮಹೇಶ ಮಾಳ್ವೇಡೆಕರ ಮಾತನಾಡಿ, ಸಂಶಿ ಗ್ರಾಮದ ಐಟಿಐ ಕಾಲೇಜನಲ್ಲಿ ಅ. 29ರಂದು ಯುವ ನಿಧಿ ಬಗ್ಗೆ ಮಾಹಿತಿ ನೀಡಲು ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

ಈ ವೇಳೆ ತಾಪಂ ಇಒ ಜಗದೀಶ್ ಕಮ್ಮಾರ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸದಸ್ಯರಾದ ಅಡಿವೆಪ್ಪ ಹೆಬಸೂರ, ಗಿರೀಶ್ ಮುದಿಗೌಡರ, ಶಶಿಧರ ಸೋಮರಡ್ಡಿ, ವೈ.ಜಿ. ಪಾಟೀಲ, ಚಂದ್ರು ಕಾಳಿ, ಶಂಕ್ರಪ್ಪ ಹಡಪದ ಸೇರಿದಂತೆ ಅನೇಕರಿದ್ದರು.

Share this article