ಬ್ಯಾಡಗಿಯಲ್ಲಿ ಹೋಳಿ ಸಂಭ್ರಮ, ಕುಣಿದು ಕುಪ್ಪಳಿಸಿದ ಜನ

KannadaprabhaNewsNetwork | Published : Mar 20, 2025 1:15 AM

ಸಾರಾಂಶ

ಬುಧವಾರ ಬ್ಯಾಡಗಿ ಪಟ್ಟಣ ಅಕ್ಷರಶಃ ಬಣ್ಣಗಳಿಂದ ಕೂಡಿತ್ತು. ಎಲ್ಲಿ ನೋಡಿದರೂ ಹಲಗೆ ಸದ್ದು, ವಿವಿಧ ವೇಷಭೂಷಣ ತೊಟ್ಟ ಜನರು, ಹಾಗೂ ಬಣ್ಣಗಳಲ್ಲಿ ಮಿಂದೆದ್ದ ಯುವಕರ ದಂಡೇ ಕಾಣುತ್ತಿತ್ತು.

ಬ್ಯಾಡಗಿ: ಸುಡುವ ಬಿಸಿಲನ್ನು ಲೆಕ್ಕಿಸದೇ ಬುಧವಾರ ಪಟ್ಟಣದಲ್ಲಿ ನಡೆದ ರಂಗುರಂಗಿನ ಹೋಳಿ ಹಬ್ಬದ ಸಂಭ್ರಮಾಚರಣೆ ಯುವ ಮನಸ್ಸುಗಳಿಗೆ ಮುದ ನೀಡಿದರೇ ಹಲಗೆ ಸದ್ದು, ಡಿಜೆ ನಿನಾದ, ಎಲ್ಲ ವಯೋಮಾನದ ಜನರನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.ಬುಧವಾರ ಬ್ಯಾಡಗಿ ಪಟ್ಟಣ ಅಕ್ಷರಶಃ ಬಣ್ಣಗಳಿಂದ ಕೂಡಿತ್ತು. ಎಲ್ಲಿ ನೋಡಿದರೂ ಹಲಗೆ ಸದ್ದು, ವಿವಿಧ ವೇಷಭೂಷಣ ತೊಟ್ಟ ಜನರು, ಹಾಗೂ ಬಣ್ಣಗಳಲ್ಲಿ ಮಿಂದೆದ್ದ ಯುವಕರ ದಂಡೇ ಕಾಣುತ್ತಿತ್ತು. ಬೆಳಗ್ಗೆ 10ರಿಂದ ಆರಂಭವಾದ ಹೋಳಿ ಹಬ್ಬದ ಸಂಭ್ರಮ ಸುಡುವ ಬಿಸಿಲಿನಲ್ಲಿಯೂ ಇಡೀ ದಿನ ಎಲ್ಲೆ ಮೀರಿತ್ತು.

ಕ್ರೀಡಾಂಗಣದಲ್ಲಿ ಬಣ್ಣದ ಹಬ್ಬ: ಹೋಳಿ ನಿಮಿತ್ತ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಯುವಕರ ದಂಡು ಸೇರಿಕೊಂಡು ನೂತವಾಗಿ ಆಯೋಜಿಸಿದ್ದ ರಂಗೋತ್ಸವ ಕಾರ‍್ಯಕ್ರಮ ಎಲ್ಲರನ್ನು ಸೆಳೆಯಿತು. ಚಿಕ್ಕಮಕ್ಕಳು ಯುವಕರು ಸೇರಿದಂತೆ ಎಲ್ಲ ವಯೋಮಾನದ ಜನರು ಸೇರಿಕೊಂಡು ಒಂದೇ ಸೂರಿನಡಿಯಲ್ಲಿ ಪರಸ್ಪರ ಬಣ್ಣವನ್ನು ಎರಚಿಕೊಂಡು ಬಣ್ಣದೋಕುಳಿಯಲ್ಲಿ ಮಿಂದೆದ್ದರು.

ಕಾರ‍್ಯಕ್ರಮದಲ್ಲಿ ಯುವ ಮನಸ್ಸುಗಳಿಗೆ ಮುದ ನೀಡುವ ಸಂಗೀತದ ಅಬ್ಬರ ಜೋರಾಗಿದ್ದು, ಸಂಗೀತಕ್ಕೆ ತಕ್ಕಂತೆ ಯುವಕರು ಹೆಜ್ಜೆ ಹಾಕಿ ಹೊಳಿ ಹಬ್ಬವನ್ನು ಉತ್ಸಾಹದಿಂದ ಆಚರಿಸಿದರು.

ಮಹಿಳೆಯರು ಭಾಗಿ: ಪಟ್ಟಣದ ಎಲ್ಲ ವಾರ್ಡಗಳಲ್ಲಿ ಜನರು ಹೋಳಿ ಹಬ್ಬವನ್ನು ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುತ್ತಾ ಕುಣಿಯುತ್ತಾ ಆಚರಿಸಿದರು. ನೆಹರು ನಗರ, ಸಂಗಮೇಶ್ವರ ನಗರ, ಕಾಕೊಳ ರಸ್ತೆ, ವಿದ್ಯಾನಗದ ಸೇರಿದಂತೆ ಹಲವು ಕಡೆ ಮಹಿಳೆಯರು ಸಹ ಪರಸ್ಪರ ಬಣ್ಣ ಎರೆಚಿಕೊಳ್ಳುತ್ತಾ ಹಬ್ಬವನ್ನು ಆಚರಿಸಿದರು. ಬೆಳಗ್ಗೆ 10ಕ್ಕೆ ಆರಂಭವಾದ ಹೋಳಿ ಆಚರಣೆ ಯಾವುದೇ ಅಡೆ ತಡೆಯಿಲ್ಲದೇ ಶಾಂತಿಯುತವಾಗಿ ಸಂಜೆ 4 ಗಂಟೆಗೆ ಮುಕ್ತಾಯವಾಯಿತು.

ಬಿಗಿ ಬಂದೋಬಸ್ತ್: ಹೋಳಿ ಹಬ್ಬದ ಹಿನ್ನೆಲೆ ಸಿಪಿಐ ಮಹಾಂತೇಶ ಲಂಬಿ, ಪಿಎಸ್‌ಐ ಅರವಿಂದ ಪಿ.ಎಸ್. ಅವರ ನೇತೃತ್ವದಲ್ಲಿ ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.ಮೂರು ದಿನಗಳ ಕಮ್ಮಟ: ಆಸಕ್ತರಿಂದ ಅರ್ಜಿ ಆಹ್ವಾನ

ಹಾವೇರಿ: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜಿಲ್ಲೆಯ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿ ಕನ್ನಡ ಸಾಹಿತ್ಯ ಮತ್ತು ಸಾಂವಿಧಾನಿಕ ಮೌಲ್ಯಗಳು ಎಂಬ ಹೆಸರಿನಲ್ಲಿ 3 ದಿನಗಳ ಕಮ್ಮಟವನ್ನು ಏ. 21, 22 ಮತ್ತು 23ರಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಆಸಕ್ತ 20ರಿಂದ 45 ವರ್ಷದೊಳಗಿನ ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಜ್ಯದ ಎಲ್ಲ ಭಾಗದ ಅಭ್ಯರ್ಥಿಗಳು ಏ. 5ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ http://karnatakasahithyaacademy.org ಇಂದ ಅರ್ಜಿ ನಮೂನೆ ಹಾಗೂ ವಿವರಗಳನ್ನು ಪಡೆದುಕೊಳ್ಳಬಹುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article