ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಹೋಳಿ ಹಬ್ಬವನ್ನು ಬುಧವಾರ ಅತ್ಯಂತ ಸಡಗರ, ಸಂಭ್ರಮದೊಂದಿಗೆ ಆಚರಿಸಿದರು.ಹೊಸಪೇಟೆ ನಗರ ಸೇರಿದಂತ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಕಾಮದಹನ ಮಾಡಿದ ಯುವಕರು ಮತ್ತು ಚಿಕ್ಕಮಕ್ಕಳು ಇಡೀ ರಾತ್ರಿ ಹಲಗೆ ವಾದನಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸುತ್ತಿದ್ದರು.
ಬೆಳಗ್ಗೆಯಿಂದಲೇ ನಗರದ ಗಲ್ಲಿ ಗಲ್ಲಿಗಳಲ್ಲಿ ಯುವಕರು, ಚಿಕ್ಕಮಕ್ಕಳು ಹಾಗೂ ಮಹಿಳೆಯರು ಒಬ್ಬರಿಗೊಬ್ಬರು ಬಣ್ಣ ಎರಚುವ ಹೋಳಿ ಆಟದಲ್ಲಿ ತೊಡಗಿಕೊಂಡಿದ್ದರು.
ಇನ್ನು ಕೆಲ ಯುವಕರು ಕೋಳಿ ಮೊಟ್ಟೆ, ಟೊಮೋಟೊ ತಲೆಯ ಮೇಲೆ ಒಡೆದು ಮತ್ತೆ ಅದಕ್ಕೆ ಬಣ್ಣ ಹಾಕುತ್ತಾ, ಸ್ನೇಹಿತರ ಮೈಮೇಲೆ ಇರುವ ಬಟ್ಟೆಗಳನ್ನು ಹರಿದು ಕೇಕೆ ಹಾಕುತ್ತಾ ಹಲಗೆ ವಾದನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಗುಂಪು ಗುಂಪಾಗಿ ಕಣಿದಾಡಿದರು.ಬಣ್ಣವಾಡಿ ಮಧ್ಯಾಹ್ನದ ನಂತರ ತುಂಗಭದ್ರಾ ಜಲಾಶಯಕ್ಕೆ ಹಾಗೂ ಕಾಲುವೆಗಳಿಗೆ ಸ್ನಾನಕ್ಕೆ ತೆರಳಿದರು. ಹೋಳಿ ಹಬ್ಬದ ಅಂಗವಾಗಿ ನಗರದ ಬಹುತೇಕ ಅಂಗಡಿ, ಹೋಟೆಲ್‌ಗಳು ಸೇರಿದಂತೆ ಇತರೆ ವ್ಯಾಪಾರ ವಹಿವಾಟುಗಳು ಸಂಜೆವರೆಗೂ ಬಂದ್ ಮಾಡಲಾಗಿತ್ತು. ಸಂಜೆ ನಂತರ ಕೆಲ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು, ಹೋಟೆಲ್ ಸೇರಿದಂತೆ ಇತರೆ ವ್ಯಾಪಾರಗಳನ್ನು ತೆರೆದುಕೊಂಡು ವ್ಯಾಪಾರ ವಹಿವಾಟು ನಡೆಸಿದರು.
ಈಗಾಗಲೇ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯುತ್ತಿದ್ದಾರೆ. ಕೆಲವು ವಿಷಯಗಳ ಪರೀಕ್ಷೆ ಮುಗಿದಿದ್ದು, ಇನ್ನು ಕೆಲ ವಿಷಯಗಳ ಪರೀಕ್ಷೆ ಬರೆಯುತ್ತಿದ್ದಾರೆ. ಆದರೂ ಕೆಲ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಲೆಕ್ಕಿಸದೇ ಸ್ನೇಹಿತರೊಂದಿಗೆ ಸೇರಿಕೊಂಡು ಹೋಳಿ ಆಟದಲ್ಲಿ ತೊಡಗಿಕೊಂಡಿದ್ದರು.
ಮರಿಯಮ್ಮನಹಳ್ಳಿ ಪಟ್ಟಣ ಸೇರಿದಂತೆ ಹೋಬಳಿಯಲ್ಲಿ ಹೋಳಿ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದೊಂದಿಗೆ ಆಚರಿಸಿದರು. ಬೆಳಿಗ್ಗೆಯಿಂದಲೇ ಚಿಕ್ಕಮಕ್ಕಳು ಹಾಗೂ ಯುವಕರು ಹಲಗೆ ಬಡೆಯುತ್ತಾ, ಕೇಕೆ ಹಾಕುತ್ತಾ, ತಮ್ಮ ಸ್ನೇಹಿತರಿಗೆ ಬಣ್ಣ ಹಚ್ಚುತ್ತಾ, ಕೆಲವರಿಗೆ ಕೋಳಿ ಮೊಟ್ಟೆ ಹೊಡೆದು, ಮೈ ಮೇಲೆ ಇರುವ ಬಟ್ಟೆಗಳನ್ನು ಹರಿದು ಹಾಕಿ ಬರೀ ಮೈಯಿಲಿ ಇರುವಂತೆ ಮಾಡಿ ಮೈಗೆಲ್ಲಾ ಬಣ್ಣ ಹಚ್ಚಿ ಸಂಭ್ರಮಿಸಿದರು.
ಯಾವುದೇ ಅಹಿತರ ಘಟನೆಗಳು ನಡೆಯದಂತೆ ಸ್ಥಳೀಯ ಪೊಲೀಸರು ಸೂಕ್ತ ಬಂದೋಬಸ್ತ್ ಹಮ್ಮಿಕೊಂಡಿದ್ದರು.