ಕನ್ನಡಪ್ರಭ ವಾರ್ತೆ ಕಾರ್ಕಳ
ರಾಜ್ಯದಲ್ಲಿ ನಡೆದ ಎನ್‌ಐಎ ದಾಳಿ ಪೈಪೋಟಿಯ ಕಾನೂನು ಸುವ್ಯವಸ್ಥೆ ಹಾಗೂ ಗೃಹ ಇಲಾಖೆಯ ವಿಫಲತೆ ಪತ್ತೆ ಹಚ್ಚಿರುವುದಾಗಿ ಅಭಿಪ್ರಾಯಪಟ್ಟಿರುವ ಮಾಜಿ ಸಚಿವ ಮತ್ತು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಗಳವಾರ ತಡರಾತ್ರಿ ನಡೆದ ಎನ್‌ಐಎ ದಾಳಿಯ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪೊಲೀಸರು ಮತ್ತು ಕಾರಾಗೃಹ ಸಿಬ್ಬಂದಿಯೊಬ್ಬರೇ ಅಂತಾರಾಷ್ಟ್ರೀಯ ಭಯೋತ್ಪಾದಕರ ಜತೆ ಕೈ ಜೋಡಿಸುತ್ತಿರುವುದು ಸರ್ಕಾರದ ಭದ್ರತಾ ವ್ಯವಸ್ಥೆ ಎಷ್ಟರ ಮಟ್ಟಿಗೆ ಕುಸಿದಿದೆ ಎಂಬುದರ ಸ್ಪಷ್ಟ ಸಂಕೇತ ಎಂದು ಆರೋಪಿಸಿದರು.ಭಯೋತ್ಪಾದಕರಿಗೆ ಸಿಬ್ಬಂದಿಯೇ ಬೆಂಬಲ:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಲಷ್ಕರ್ ಉಗ್ರ ಮತ್ತು ವಿದೇಶದಲ್ಲಿರುವ ಜುನೈದ್ ಪಾಷಾ ಎಂಬ ಭಯೋತ್ಪಾದಕರಿಗೆ ಕಾರಾಗೃಹ ಸಿಬ್ಬಂದಿಯೇ ನೆರವಾಗಿರುವುದು ಆತಂಕಕಾರಿ ಸಂಗತಿ. ಇಂಥ ಸಂಬಂಧಗಳ ನಡುವೆಯೂ ರಾಜ್ಯ ಭದ್ರತಾ ದಳ ನಿಶ್ಚಲವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.ಸರ್ಕಾರ ಭಯೋತ್ಪಾದಕರ ಕುರಿತು ನಯವಾದ ನಿಲುವು ತಾಳುತ್ತಿದೆ ಎಂದಿರುವ ಅವರು, ಹಿಂದು ಕಾರ್ಯಕರ್ತರ ಹತ್ಯೆ ಸೇರಿದಂತೆ ಹಲವು ಜಿಹಾದಿ ಚಟುವಟಿಕೆಗಳ ತನಿಖೆ ನಡೆಸಲು ರಾಜ್ಯ ಪೊಲೀಸರು ನಿರಾಶದಾಯಕ ಸ್ಥಿತಿಯಲ್ಲಿದ್ದಾರೆ. ಪ್ರತಿಬಾರಿಯೂ ಎನ್‌ಐಎ ಅಧಿಕಾರಿಗಳು ಘಟನೆಯ ಹಿಂದಿರುವ ಷಡ್ಯಂತ್ರ ಬಯಲಿಗೆಳೆಯುತ್ತಿದ್ದಾರೆ. ಇದರಿಂದ ಸರ್ಕಾರವೇ ಪೊಲೀಸ್ ಅಧಿಕಾರಿಗಳನ್ನು ನಿರುದ್ಯೋಗಿಗಳಂತೆ ಮಾಡುತ್ತಿದ್ದೆಯೆ ಎಂದು ಪ್ರಶ್ನಿಸಿದ್ದಾರೆ.ಭಯೋತ್ಪಾದಕರ ಜತೆಗೆ ಸಂಬಂಧ ಹೊಂದಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು ಅವರಿಗೆ ಕಾರಾಗೃಹದಲ್ಲೇ ವಿಶೇಷ ಸೌಲಭ್ಯ ಒದಗಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ ಎಂದು ಸುನಿಲ್ ಬೊಟ್ಟು ಮಾಡಿದ್ದಾರೆ.ಬುಡಮೇಲು ನಕ್ಸಲ್ ಕೃತ್ಯದಲ್ಲಿ ಭಾಗಿಯಾಗಿದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿಯಿಂದ ಶರಣಾಗತಿ ಪ್ಯಾಕೇಜ್ ನೀಡಲಾಗಿತ್ತು. ಇದೇ ರೀತಿಯಲ್ಲಿ ಈಗ ಭಯೋತ್ಪಾದಕ ನಿಗ್ರಹ ದಳವನ್ನೂ ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.ಕಾನೂನು ಸುವ್ಯವಸ್ಥೆ ಪಾತಾಳಕ್ಕೆ:
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜನತೆ ಕಳವಳಗೊಂಡ ಸ್ಥಿತಿಯಲ್ಲಿದ್ದಾರೆ. ಓಲೈಕೆಯ ರಾಜಕಾರಣಕ್ಕಾಗಿ ರಾಜ್ಯದ ಒಳ ಭದ್ರತೆಗೆ ಟೈಮ್ ಬಾಂಬ್ ಹೊತ್ತಿಸುವಂತಹ ಈ ನೀತಿ ತಕ್ಷಣ ನಿಲ್ಲಿಸಬೇ ಎಂದು ವಿ. ಸುನಿಲ್ ಕುಮಾರ್ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.