ಹುಬ್ಬಳ್ಳಿ:
ಪೊಲೀಸ್ ಠಾಣೆಗಳ ಉದ್ಘಾಟನಾ ಸಮಾರಂಭವೂ ಕಾಂಗ್ರೆಸ್- ಬಿಜೆಪಿ ವಾಗ್ವಾದಕ್ಕೆ ವೇದಿಕೆಯಾಯಿತು.ಗೃಹ ಸಚಿವ ಜಿ. ಪರಮೇಶ್ವರ ತಮ್ಮ ಭಾಷಣದಲ್ಲಿ ಕೇಂದ್ರ ಸಚಿವರು ತಮ್ಮನ್ನು ಅಸಮರ್ಥ ಎಂದು ಟೀಕಿಸಿದ್ದಾರೆ. ಹಾಗೆ ಹೇಳುವುದೂ ಸರಿಯಲ್ಲ. ಆದರೆ ಯಾವುದೇ ಟೀಕೆ, ಟಿಪ್ಪಣಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಜನರಿಗೆ ನೆರವಾಗುವ ಕೆಲಸ ಮಾಡುವುದೇ ಪೊಲೀಸ್ ಕೆಲಸ. ಅದನ್ನೇ ನಾನು ಮಾಡುತ್ತಿದ್ದೇನೆ ಎಂದರು.
ಜತೆಗೆ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿರುವುದನ್ನು ಸಮರ್ಥಿಸಿಕೊಂಡ ಸಚಿವರು, 10 ಸಾವಿರಕ್ಕೂ ಅಧಿಕ ಜನ ಏಕಾಏಕಿ ವಿಧಾನಸೌಧಕ್ಕೆ ನುಗ್ಗಿದರೆ ಪೊಲೀಸರು ಏನ್ಮಾಡೋಕೆ ಆಗುತ್ತದೆ. ಆ ಪರಿಸ್ಥಿತಿ ನಿಭಾಯಿಸುವುದು ಅನಿವಾರ್ಯವಾಗುತ್ತದೆ. ಆದರೆ, ಈ ಬಗ್ಗೆ ಸಾಕಷ್ಟು ಟೀಕೆಗಳು ಬಂದಿವೆ. ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದರು.ಬಳಿಕ ರೈತರ ಮೇಲಿನ ಕೇಸ್ ಹಿಂಪಡೆಯುವಂತೆ ಶಾಸಕ ಕೋನರಡ್ಡಿ ಬೇಡಿಕೆ ಇಟ್ಟಿದ್ದಾರೆ. ಇದನ್ನು ಸಚಿವ ಸಂಪುಟ ಮುಂದಿಟ್ಟು ಚರ್ಚಿಸಿದ ಬಳಿಕವಷ್ಟೇ ನಿರ್ಧಾರ ಕೈಗೊಳ್ಳಲಾಗುವುದು. ಹಳೆಹುಬ್ಬಳ್ಳಿ ಗಲಭೆ ಕೇಸ್‌ನ್ನು ಹಿಂಪಡೆಯಲಾಗಿದೆ. ನ್ಯಾಯಯುತವಾಗಿ ಅವರ ಬೇಡಿಕೆ ಈಡೇರಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.
ಬಳಿಕ ವಿದ್ಯಾನಗರ ಠಾಣೆ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ತಮ್ಮ ಭಾಷಣದಲ್ಲಿ ಹಳೇಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವುದು ಖೇದಕರ ಎನಿಸುತ್ತದೆ. ಏಕೆಂದರೆ ಪೊಲೀಸರಿಗೆ ನೈತಿಕ ಬಲ ತುಂಬಬೇಕು. ಆದರೆ, ಪೊಲೀಸರ ಮೇಲೆ ಹಲ್ಲೆ ನಡೆಸಿದ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದವರ ಮೇಲಿನ ಪ್ರಕರಣ ಹಿಂಪಡೆದಿರುವುದು ಎಷ್ಟು ಸರಿ. ಇದು ಸಮಾಜಕ್ಕೆ ಏನು ಸಂದೇಶ ಹೋಗುತ್ತದೆ. ಪೊಲೀಸರು ನೈತಿಕ ಬಲ ಹೆಚ್ಚಿಸಿದಂತಾಗುತ್ತದೆಯೇ? ಎಂದು ಖಾರವಾಗಿ ಪ್ರಶ್ನಿಸಿದರು.ಜತೆಗೆ ನಮ್ಮ ಕರ್ನಾಟಕ ಪೊಲೀಸ್ ಭಾರಿ ಸಾಮರ್ಥ್ಯ ಹೊಂದಿದವರು. ಆದರೆ, ಅವರ ಕೈ ಕಟ್ಟಿ ಹಾಕಲಾಗಿದೆ. ಅವರಿಗೆ ಫ್ರೀ ಹ್ಯಾಂಡ್ ಬಿಟ್ಟರೆ ಇನ್ನೂ ಉತ್ತಮ ಕೆಲಸ ಮಾಡುತ್ತಾರೆ. ಕಳೆದ ವಾರ ನಡೆದ ಪ್ರಕರಣದಲ್ಲೇ ಯಾರದೋ ಒತ್ತಡಕ್ಕೆ ಮಣಿದು ಅವರು ಹೇಳಿದಂತೆ ಇವರು ಕೆಲಸ ಮಾಡಿದ್ದಾರೆ. ಪೊಲೀಸ್ ಇಲಾಖೆ ಪಕ್ಷಾತೀತವಾಗಿರಬೇಕು ಎಂದು ಸಿ.ಟಿ. ರವಿ ಹೆಸರು ಹೇಳದೇ ಅವರ ಪ್ರಕರಣದ ನೆನಪಿಸುವ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದರು.
ಬಳಿಕ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ, ಹಳೇಹುಬ್ಬಳ್ಳಿ ಪ್ರಕರಣದ ಬಗ್ಗೆ ಟೆಂಗಿನಕಾಯಿ ಪ್ರಸ್ತಾಪಿಸಿದ್ದಾರೆ. ಅದು ಸರ್ಕಾರದ ವಿವೇಚನೆಗೆ ಬಿಟ್ಟಿರುವಂತಹ ಕೆಲಸ. ಯಾವ ಕೇಸ್ ಹಿಂಪಡೆಯಬೇಕು ಎಂಬುದನ್ನು ಸಚಿವ ಸಂಪುಟದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳಲಾಗಿರುತ್ತದೆ. ಹಿಂದಿನ ಸರ್ಕಾರಗಳು ಹಲವು ಕೇಸ್ ಹಿಂಪಡೆದಿದ್ದವು. ಮುಂದೆ ಬರುವ ಸರ್ಕಾರವೂ ಇದೇ ರೀತಿ ಮಾಡುತ್ತದೆ ಎಂದು ಹೇಳುವ ಮೂಲಕ ಹಳೇಹುಬ್ಬಳ್ಳಿ ಕೇಸ್ ಹಿಂಪಡೆದಿರುವುದನ್ನು ಸಮರ್ಥಿಸಿಕೊಂಡರು.