ಕನ್ನಡಪ್ರಭ ವಾರ್ತೆ ಕೊಪ್ಪಳ
ಭದ್ರತೆಯ ವಿಷಯದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಸಂಪೂರ್ಣ ವಿಫಲವಾಗಿದ್ದು, ಇವರು ನೈತಿಕ ಹೊಣೆ ಹೊರಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆರೋಪಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ, ಗೃಹ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಫೋಟಕ್ಕೂ ಮೊದಲು ಬಿಜೆಪಿ ಕಚೇರಿಯಲ್ಲಿ ಸ್ಫೋಟಿಸುವ ಸಂಚು ರೂಪಿಸಿರುವುದನ್ನು ಕೇಂದ್ರ ತನಿಖಾ ಸಂಸ್ಥೆ ಬೆಳಕಿಗೆ ತರುವವರೆಗೂ ರಾಜ್ಯ ಗೃಹ ಇಲಾಖೆಗೆ ಈ ಮಾಹಿತಿಯೇ ಗೊತ್ತಾಗಿಲ್ಲ ಎಂದರೇ ಏನರ್ಥ? ಇದರಲ್ಲಿ ಆಡಳಿತ ವೈಫಲ್ಯ ಎದ್ದು ಕಾಣುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.ರಾಜ್ಯ ಗುಪ್ತಚರ ಇಲಾಖೆಗೆ ಯಾಕೆ ಈ ಮಾಹಿತಿ ದೊರೆಯಲಿಲ್ಲ. ಇದನ್ನು ಪತ್ತೆ ಯಾಕೆ ಮಾಡಲಿಲ್ಲ. ಗೃಹ ಇಲಾಖೆ ಗಾಢನಿದ್ರೆಯಲ್ಲಿದೆ ಎಂದರು. ಗೃಹ ಸಚಿವರ ಆಡಳಿತ ಅಟ್ಟರ್‌ಪ್ಲಾಪ್ ಎಂದು ವ್ಯಂಗವಾಡಿದರು.
ರಾಜ್ಯದಲ್ಲಿ ಅತ್ಯಾಚಾರ, ಗಲಾಟೆ, ಅನಾಚಾರಗಳು ಅವ್ಯಾಹತವಾಗಿ ನಡೆಯುತ್ತಿವೆ. ಸಾಮಾನ್ಯರ ಬದುಕಿಗೆ ನೆಮ್ಮದಿ ಇಲ್ಲವಾಗಿದೆ. ಇದೆಲ್ಲ ಅವರ ಆಡಳಿತ ವೈಫಲ್ಯಕ್ಕೆ ಸಾಕ್ಷಿ. ಸೋಶಿಯಲ್ ಮೀಡಿಯಾದಲ್ಲಿ ಏನಾದರೂ ಬರೆದರೆ ಅವರ ಪತ್ತೆಗೆ ಬೆಂಗಳೂರಿಂದ ಉತ್ತರ ಪ್ರದೇಶಕ್ಕೆ ತಂಡ ಕಳಿಸುವುದೇ ರಾಜ್ಯ ಸರ್ಕಾರದ ಸಾಧನೆಯಾಗಿದೆ. ರಾಹುಲ್ ಗಾಂಧಿ ಅವರು ವಿದೇಶದಲ್ಲಿ ಭಾರತದ ಬಗ್ಗೆ ಮಾತನಾಡುವ ವೇಳೆ ಅಪ್ರಬುದ್ಧತೆ ತೋರಿದ್ದಾರೆ. ರಾಹುಲ್ ಗಾಂಧಿ ಅವರ ಮುತ್ತಜ್ಜ, ಅಜ್ಜ, ತಂದೆ ಈ ದೇಶವನ್ನು ನಡೆಸಿದ್ದಾರೆ.ಅವರ ಅಸಮರ್ಥತೆ ಎತ್ತಿ ತೋರಿಸುವ ಹೇಳಿಕೆ ಇದಾಗಿದೆ. ವಿದೇಶಿ ನೆಲದಲ್ಲಿ ಭಾರತದ ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆಯಿಂದ ಮಾತನಾಡಬೇಕು. ಭಾರತದ ಗಡಿ ಭಾಗದಲ್ಲಿ ಚೀನಾ ವಿರೋಧಿ ಕೆಲಸ ಮಾಡುತ್ತಿದೆ. ರಾಹುಲ್ ಭಾರತದ ಅಸ್ಮಿತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಅಂಜನಾದ್ರಿ ಅಭಿವೃದ್ಧಿ ಕಾರ್ಯಕ್ಕೆ ಬಿಜೆಪಿ ಸರ್ಕಾರ ಹೆಚ್ಚು ಕಾಳಜಿ ವಹಿಸಿತ್ತು. ಆದರೆ ಈಗಿನ ಸರ್ಕಾರ ಎಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದೆ ಎನ್ನುವುದು ಹೇಳಲಿ ಎಂದು ಆಗ್ರಹಿಸಿದರು. ಬಿಜೆಪಿ ಕೇವಲ ಮುಡಾ ಹಗರಣದಲ್ಲಿ ಮಾತ್ರ ಪ್ರತಿಭಟನೆ ನಡೆಸಿಲ್ಲ. ಎಸ್‌ಟಿ ನಿಗಮದ ಹಗರಣ, ಹಾಲಿನ ಬಾಕಿ ಬಿಡುಗಡೆ ವಿಚಾರ ಸೇರಿದಂತೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದರೂ ರಾಜ್ಯ ಸರ್ಕಾರ ಸ್ಪಂದನೆ ಮಾಡುತ್ತಿಲ್ಲ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಸೇರಿದಂತೆ ಇತರರಿದ್ದರು.