ಕುಲಕಸುಬುಗಳ ನಿರ್ಲ್ಯಕ್ಷಿಸಿ ಬಹು ರಾಷ್ಟ್ರೀಯ ಕಂಪನಿಗಳಿಗೆ ಮಣೆ

KannadaprabhaNewsNetwork | Published : Jan 18, 2024 2:03 AM

ಸಾರಾಂಶ

ರಾಜ್ಯ ಸರ್ಕಾರ ಕುಲಕಸುಬುಗಳ ನಿರ್ಲಕ್ಷಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕುತ್ತಿದೆ ಎಂದು ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ರಾಜ್ಯಾಧ್ಯಕ್ಷ ಡಾ.ಪ್ರಣವಾನಂದ ಶ್ರೀಗಳು ಆರೋಪಿಸಿದರು

ಚಿತ್ರದುರ್ಗ: ರಾಜ್ಯ ಸರ್ಕಾರ ಕುಲಕಸುಬುಗಳ ನಿರ್ಲಕ್ಷಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕುತ್ತಿದೆ ಎಂದು ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ರಾಜ್ಯಾಧ್ಯಕ್ಷ ಡಾ.ಪ್ರಣವಾನಂದ ಶ್ರೀಗಳು ಆರೋಪಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರದ ನಡೆಯಿಂದಾಗಿ ಒಂದು ಜನಾಂಗವೇ ನಾಶವಾಗುವ ಹಂತ ತಲುಪಿದೆ. ಕುಲ ಕಸುಬುಗಳಾದ ಕುಂಬಾರಿಕೆ, ಕಮ್ಮಾರಿಕೆ, ಚಮ್ಮಾರಿಕೆ, ಅಕ್ಕಸಾಲಿಗ, ಸೇಂದಿ ಇಳಿಸುವುದು ಸೇರಿದಂತೆ ಇತರೆ ಕುಲ ಕಸುಬುಗಳು ಕಣ್ಮರೆಯಾಗುತ್ತಿವೆ. ಇವುಗಳನ್ನು ಉಳಿಸಿಕೊಳ್ಳಬೇಕಾದರೆ ಸರ್ಕಾರದ ಸಹಾಯ ಅಗತ್ಯ ಎಂದರು.

ಸರ್ಕಾರ ಪ್ರಭಾವಿ ಮಠಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡುತ್ತಿದೆ. ನಮ್ಮಂತಹ ಮಠಗಳ ಕಣ್ಣೆತ್ತಿಯೂ ನೋಡುತ್ತಿಲ್ಲ. ಮುಂದಿನ ದಿನದಲ್ಲಿ ಲೋಕಸಭಾ ಚುನಾವಣೆ ಬರುತ್ತಿದ್ದು, ಈ ಸಮಯುದಲ್ಲಿ ಸಮುದಾಯವರನ್ನು ಜಾಗೃತಿ ಮೂಡಿಸಲಾಗುತ್ತಿದೆ. ಮತವನ್ನು ಮಾರಿ ಕೊಳ್ಳದೆ ಒಳ್ಳೆಯವರಿಗೆ ಮತವನ್ನು ದಾನ ಮಾಡಿ ಎಂದು ತಿಳಿಸುವ ಕಾರ್ಯವನ್ನು ಮುಂದಿನ ದಿನಮಾನದಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಸರ್ಕಾರ ವಿವಿಧ ರೀತಿಯ ನಿಗಮಗಳನ್ನು ಸ್ಥಾಪನೆ ಮಾಡುತ್ತಿದೆ. ಆದರೆ ಅದಕ್ಕೆ ಅನುದಾನ ನೀಡುತ್ತಿಲ್ಲ. ಇದರಿಂದ ಯಾವ ಪ್ರಯೋಜನವಾಗುವುದಿಲ್ಲ. ರಾಜ್ಯದ ಮೂರು ಪಕ್ಷಗಳು ಸಹ ಅತಿ ಹಿಂದುಳಿದ ಸಮುದಾಯಗಳನ್ನು ನಿರ್ಲಕ್ಷ ಮಾಡಿವೆ. ಚುನಾವಣೆ ಸಮಯದಲ್ಲಿ ಮಾತ್ರ ಉಪಯೋಗ ಮಾಡಿಕೊಂಡು ನಂತರ ಬೀಸಾಡುತ್ತಿದ್ದಾರೆ. ಇದು ತಪ್ಪಬೇಕು ನಮಗೂ ಸರಿಯಾದ ರೀತಿಯಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಆಗ್ರಹಿಸಿದರು.

ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಬಸವನಾಗ್ತಿದೇವ ಶ್ರೀಗಳು ಮಾತನಾಡಿ, ನಮ್ಮ ಸಮುದಾಯಗಳನ್ನು ಆಳುವ ಪಕ್ಷಗಳು ಕಡೆಗಣಿಸಿದ್ದಾರೆ. ಇದರ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯವನ್ನು ಗ್ರಾಮಾಂತರ ಮಟ್ಟದಿಂದ ಮಾಡಲಾಗುವುದು. ಶಿಕ್ಷಣ ವಂಚಿತ ಸಮುದಾಯಗಳಿಗೆ ಶಿಕ್ಷಣ ಕೂಡಿಸುವ ಕಾರ್ಯ ಮಾಡಬೇಕಿದೆ. ನಮ್ಮಲ್ಲಿನ ನೂನ್ಯತೆಯನ್ನು ಸರಿಪಡಿಸಿಕೊಳ್ಳುವುದರ ಮೂಲಕ ಮುಖ್ಯವಾಹಿನಿಗೆ ಬರುವ ಪ್ರಯತ್ನವನ್ನು ಮಾಡಲಾಗುವುದು ಎಂದರು.

ಸರ್ಕಾರ ಈ ಹಿಂದೆ ಕಾಂತರಾಜ್ ರವರಿಂದ ಆರ್ಥಿಕ ಸಾಮಾಜಿಕ, ಶೈಕ್ಷಣಿಕ ವರದಿಯನ್ನು 175 ಕೋಟಿ ವೆಚ್ಚ ಮಾಡಿ ತಯಾರಿಸಿತ್ತು. ಈವರೆವಿಗೂ ಸರ್ಕಾರ ಅಂಗೀಕರಿಸಿಲ್ಲ. ಮುಖ್ಯಮಂತ್ರಿಗಳು ಈ ವರದಿಯ ಸ್ವೀಕಾರ ಮಾಡಿ ಜಾರಿ ಮಾಡಬೇಕಿದೆ ಸರ್ಕಾರಿ ನೌಕರಿಯಲ್ಲಿರುವ ನಮ್ಮ ಸಮುದಾಯದ ನೌಕರರ ಮೇಲೆ ವಿವಿಧ ರೀತಿಯ ಕಿರುಕುಳ ನಡೆಯುತ್ತಿದೆ. ಇದರ ಬಗ್ಗೆಯೂ ಮುಖ್ಯಮಂತ್ರಿಗಳು ಗಮನ ನೀಡುವುದರ ಮೂಲಕ ದೌರ್ಜನ್ಯ ತಪ್ಪಿಸುವಂತೆ ಮನವಿ ಮಾಡಿದರು.

ಗೋಷ್ಟಿಯಲ್ಲಿ ದೊಡೇಂದ್ರ ಶ್ರೀಗಳು, ಸರ್ದಾರ್ ಸೇವಾಲಾಲ್ ಶ್ರೀಗಳು, ಬಸವಮೂರ್ತಿ ಕುಂಬಾರ ಗುಂಡಯ್ಯ ಶ್ರೀಗಳು, ಕರುಣಾಕರ ಸ್ವಾಮಿಗಳು ಇದ್ದರು.

Share this article