ಕನ್ನಡಪ್ರಭ ವಾರ್ತೆ ಇಳಕಲ್ಲ
ಇಳಕಲ್ಲ ಕಲಾವಿದರ ತವರೂರು. ಕಲಾಭಿಮಾನಿಗಳ ಪ್ರೋತ್ಸಾಹದಿಂದ ಮಾತ್ರ ಕಲಾವಿದರು ಬೆಳೆಯಲು ಸಾಧ್ಯ ಎಂದು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ೨೦೨೪ರ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಎಲ್.ಬಿ. ಶೇಖ್ ಮಾಸ್ತರ ಹೇಳಿದರುಇಲ್ಲಿಯ ಶ್ರೀ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ಕನ್ನಡ ಕಲಾ ಸಂಘ ಟಿ.ಬಿ. ಡ್ಯಾಂ ಹೊಸಪೇಟ ಇವರ ನಾ ಸತ್ತಿಲ್ಲ ಉಚಿತ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಒಂದು ಸಂಘ ಕಟ್ಟುವುದಾಗಲಿ, ಅದನ್ನು ಉಳಿಸಿ ಬೆಳೆಸುವುದಾಗಲಿ ಅಷ್ಟೊಂದು ಸುಲಭವಲ್ಲ. ಅದರಲ್ಲೂ ರಂಗಭೂಮಿ ನಾಟಕಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಇಂದಿನ ದಿನಮಾನಗಳಲ್ಲಿ ಅತ್ಯಂತ ಕಷ್ಟದಾಯಕವಾಗಿದೆ. ಈಗ ನಮ್ಮ ಭಾಗದವರೇ ಸಚಿವರಾಗಿದ್ದು, ಅವರೂ ಕಲಾಶಕ್ತರಾಗಿರುವುದು ಕಲಾವಿದರಿಗೆ ಒಂದು ಆಶಾಕಿರಣವಾಗಿದೆ. ಕಲಾವಿದರಿಗೆ ನೀಡುತ್ತಿರುವ ಈಗಿನ ಮಾಸಾಶನ ಏತಕ್ಕೂ ಸಾಲದು. ಅದಕ್ಕಾಗಿ ಇಲ್ಲಿಯ ಸ್ನೇಹರಂಗದ ಸದಸ್ಯರೊಂದಿಗೆ ಕಲಾವಿದರ ಸಭೆ ನಡೆಸಿ ಸಚಿವರಾದ ಶಿವರಾಜ ತಂಗಡಗಿ ಅವರನ್ನು ಭೇಟಿಯಾಗಿ ಮಾಸಾಶನ ಹೆಚ್ಚಿಸುವಂತೆ ಮನವಿ ಮಾಡೋಣ. ೧೫೦ ವರ್ಷಗಳ ಇತಿಹಾಸವಿರುವ ಪರಂಪರೆ ಉಳಿಸಿಕೊಂಡು ಬಂದಿರುವ, ವೃತ್ತಿ ರಂಗಭೂಮಿಯ ಧೀಮಂತ ನಟ, ಖ್ಯಾತ ಕಂಪನಿಯ ಮಾಲೀಕ ಗುಬ್ಬಿ ವೀರಣ್ಣನವರ ಪ್ರಶಸ್ತಿ ಲಭಿಸಿರುವುದು ನನ್ನ ಕಲಾ ಜೀವನ ಸಾರ್ಥಕವಾಯಿತು. ಇದು ನನಗೆ ಸಂದ ಪ್ರಶಸ್ತಿಯಲ್ಲ ನಿಮ್ಮೆಲ್ಲರಿಗೆ ಸಂದ ಪ್ರಶಸ್ತಿ ಎಂದು ಹೇಳಿದರು.
ಕನ್ನಡ ಕಲಾ ಸಂಘದ ಡಾ.ಕೃಷ್ಣಾ ಕೋಲ್ಹಾರ ಕುಲಕರ್ಣಿ ಮಾತನಾಡಿ, ಇಳಕಲ್ಲದಲ್ಲಿ ನಮ್ಮ ನಾಟಕ ಪ್ರದರ್ಶನಕ್ಕೆ ಕಾರಣ ಹವ್ಯಾಸಿ ರಂಗ ಕಲಾವಿದರಾದ ಮಹಾಂತೇಶ ಗಜೇಂದ್ರಗಡ ಅವರು ಕಾರಣ. ಒಬ್ಬ ವ್ಯಕ್ತಿ ತಾನು ಸತ್ತಿಲ್ಲವೆಂದು ವಾದಿಸುವುದು, ಆತನ ಆಸ್ತಿ ಆಸೆಗಾಗಿ ಕಾನೂನು ಮತ್ತು ಧರ್ಮಶಾಸ್ತ್ರ ಮುಖೇನ ವಾದಿಯು ಸತ್ತಿರುವನೆಂದು ಪ್ರತಿಪಾದಿಸುವುದೇ ಈ ನಾಟಕ ಎಂದು ಹೇಳಿದರು.೨೦೨೪ ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಭಾಜನರಾದ ಎಲ್.ಬಿ. ಶೇಖ ಮಾಸ್ತರ ಅವರನ್ನು ನಗರದ ರಂಗಭೂಮಿ ಕಲಾವಿದರು ಗೌರವಿಸಿ ಸನ್ಮಾನಿಸಿದರು.