ಧಾರವಾಡ: ನಮ್ಮಂತ ಅನೇಕ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಪ್ರಾಮಾಣಿಕ ಓದು, ಕಠಿಣ ಪರಿಶ್ರಮಗಳೇ ಬದುಕಿನ ಬೆಳಕಾಗಿವೆ. ಮಕ್ಕಳು ಪ್ರಾಮಾಣಿಕವಾಗಿ, ಮನಮುಟ್ಟುವಂತೆ ಓದಬೇಕು. ಈ ಓದು ಉನ್ನತ ಹುದ್ದೆ, ಉತ್ತಮ ಸ್ಥಾನಮಾನ, ಹೆಚ್ಚಿನ ಸಾಧನೆಗಳಿಗೆ ಸಹಕಾರಿ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಪೊಲೀಸ್ ವಸತಿ ಶಾಲೆಯ ಅಭಿವೃದ್ಧಿಗೆ ಜಿಲ್ಲಾಡಳಿತ ಸಿದ್ಧವಿದೆ. ಮಕ್ಕಳು ಓದು, ಕ್ರೀಡೆಗಳಲ್ಲಿ ಗುರಿ ಹೊಂದಿ, ಪ್ರಯತ್ನಿಸಬೇಕು. ದೇಶಭಕ್ತಿ, ತಂದೆ-ತಾಯಿ ಬಗ್ಗೆ ಗೌರವ, ನಾಡಿನ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಉತ್ತಮ ಸಂಸ್ಕೃತಿ, ಸಂಸ್ಕಾರಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಬೆಳೆಸಿಕೊಳ್ಳಬೇಕು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಜಿಪಂ ಸಿಇಓ ಭುವನೇಶ ಪಾಟೀಲ ಮಾತನಾಡಿ, ಪೊಲೀಸ್ ಶಾಲೆ ಶಿಸ್ತು ಕಲಿಸುತ್ತದೆ. ಪೊಲೀಸ್ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಸಮಾಜದಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಓದು, ಬರಹ ಮತ್ತು ಗುರಿ ಸಾಧಿಸುವಲ್ಲಿ ಬದ್ಧತೆ ಇರಬೇಕು ಎಂದರು.ಐಎಎಸ್ ಪ್ರೊಬೇಷನರಿ ಅಧಿಕಾರಿ ರಿತಿಕಾ ವರ್ಮಾ ಮಾತನಾಡಿ, ಮಕ್ಕಳು ಸಹನೆ, ತಾಳ್ಮೆ, ಶ್ರಮದ ಗುಣ ಬೆಳಸಿಕೊಳ್ಳಬೇಕು. ಶಾಲೆಗಳಲ್ಲಿ ಪಡೆಯುವ ಜ್ಞಾನ ನಮ್ಮ ವ್ಯಕ್ತಿತ್ವ ರೂಪಿಸುತ್ತದೆ. ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ವಿದ್ಯಾರ್ಥಿಗಳು ತಮ್ಮನ್ನು ಮುಕ್ತವಾಗಿ ಒಳಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ ಸ್ವಾಗತಿಸಿದರು. ಶಾಲಾ ಸಮಿತಿ ಸದಸ್ಯ ಜಿ.ಆರ್. ಭಟ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಬರಮಣಿ ಇದ್ದರು.ಶಾಲೆ ಮುಖ್ಯೋಪಾಧ್ಯಾಯಿನಿ ಡಾ. ಎಸ್.ಓ. ಬಿರಾದಾರ ಪರಿಚಯಿಸಿದರು. ರಾಷ್ಟ್ರಮಟ್ಟದ ವಿದ್ಯಾರ್ಥಿ ವಿಭಾಗದ ಯೋಗ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಮತ್ತು ಪ್ರಶಸ್ತಿ ಪಡೆದ ವಿಜಯಕುಮಾರ ಸಂಗಪ್ಪ ಅರಳಿಕಟ್ಟಿ ಅವರನ್ನು ಹಾಗೂ ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಸಂಕೇತ ಪೆಡ್ನೇಕರ ಅವರನ್ನು ಸನ್ಮಾನಿಸಲಾಯಿತು. ಮತ್ತು ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸಲಾಯಿತು. ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿವಿಧ ಸಸಿಗಳನ್ನು ನೆಡಲಾಯಿತು.