ಕೊಪ್ಪಳ: ಸಾವಿರಾರು ಜನರಿಗೆ ಆರ್ಥಿಕ ಸಹಕಾರ ನೀಡುವ ಸಹಕಾರ ಸಂಘಗಳಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಸಾಮಾಜಿಕ ಕಳಕಳಿ ಅತ್ಯವಶ್ಯವಾಗಿದೆ ಎಂದು ಹಿಂದೂ ಸೇವಾ ಪ್ರತಿಷ್ಠಾನದ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತ ಸಂಯೋಜಕ ಸುಧಾಕರ ಹೇಳಿದರು.
ನಗರದ ಮಳೆಮಲ್ಲೇಶ್ವರ ದೇವಸ್ಥಾನದ ರಂಗಮಂದಿರದಲ್ಲಿ ಶುಕ್ರವಾರ ನೂತನವಾಗಿ ಆಯ್ಕೆಯಾದ ಸಹಕಾರ ಭಾರತಿ ಸಂಘಟನೆಯ ಕೊಪ್ಪಳ ಜಿಲ್ಲಾ ಮತ್ತು ವಿವಿಧ ತಾಲೂಕಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ವಿಶೇಷ ಅತಿಥಿಯಾಗಿ ಮಾತನಾಡಿದರು. ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಜನ ವಿಶ್ವಾಸದಿಂದ ನೋಡುತ್ತಾರೆ. ವಿಶೇಷವಾಗಿ ಗ್ರಾಮೀಣ ಜನರ ಬದುಕಿಗೆ ಸಹಕಾರ ಸಂಘಗಳು ಆರ್ಥಿಕ ಶಕ್ತಿ ನೀಡಿ ಸ್ವಾವಲಂಬನೆಯ ಬದುಕಿಗೆ ಸಹಕಾರಿಯಾಗಿವೆ. ಹಣಕಾಸಿನ ವ್ಯವಹಾರ ಹೊಂದಿರುವುದರಿಂದ ಜನರ ನಂಬಿಕೆ, ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದರು.ಸಹಕಾರ ಭಾರತಿ ಸೇರಿದಂತೆ ಪರಿವಾರದ ಸಂಘಟನೆಗಳಿಗೆ ಆರ್‌ಎಸ್‌ಎಸ್ ಮಾತೃ ಸಂಘಟನೆಯಾಗಿದೆ. ಸಂಘ ಸುಸಂಸ್ಕೃತ ವ್ಯಕ್ತಿಗಳ ನಿರ್ಮಾಣದ ಕೆಲಸ ಮಾಡುತ್ತದೆ. ಸುಸಂಸ್ಕೃತ ವ್ಯಕ್ತಿಗಳಿಂದ ಸಮಾಜ ಶುದ್ಧವಾಗುತ್ತದೆ ಎಂಬ ನಂಬಿಕೆಯಿಂದ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಜನರು ಇಟ್ಟಿರುವ ವಿಶ್ವಾಸ ಉಳಿಸಿಕೊಂಡು ಸಂಘಟನೆಯ ಜವಾಬ್ದಾರಿ ನಿಭಾಯಿಸಬೇಕು ಎಂದು ಅವರು ಕರೆ ನೀಡಿದರು.
ಸಹಕಾರ ಭಾರತಿ ಸಂಘಟನೆ ರಾಜ್ಯಾಧ್ಯಕ್ಷ ಪ್ರಭುದೇವ ಆರ್. ಮಾಗನೂರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪದಾಧಿಕಾರಿಗಳಿಗೆ ಜವಾಬ್ದಾರಿ ನಿಭಾಯಿಸುವ ಆತ್ಮವಿಶ್ವಾಸವಿರಬೇಕು ಎಂದರು.ಸಹಕಾರ ಭಾರತಿ ಸಂಘಟನೆಯ ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ ಮಾತನಾಡಿ, ದೇಶಕ್ಕೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರ ಮುಂಚೂಣಿಯಲ್ಲಿದೆ. ಇಂತಹ ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕ, ಪಾರದರ್ಶಕ ವ್ಯಕ್ತಿಗಳ ನಿರ್ಮಾಣಕ್ಕಾಗಿ ಮತ್ತು ಸಹಕಾರಿ ಕ್ಷೇತ್ರಗಳನ್ನು ಸಬಲಗೊಳಿಸಲು ೧೯೭೮ರಲ್ಲಿ ಸಹಕಾರ ಭಾರತಿ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ೨೮ ರಾಜ್ಯದ ೭೦೦ ಜಿಲ್ಲೆಗಳಲ್ಲಿ ಸಹಕಾರ ಭಾರತಿ ವಿಸ್ತಾರಗೊಂಡಿದೆ ಎಂದರು.
ಸಹಕಾರ ಭಾರತಿ ಸಂಘಟನೆಯ ಕೊಪ್ಪಳ ಜಿಲ್ಲೆಯ ನೂತನ ಅಧ್ಯಕ್ಷರಾಗಿರುವ ರಮೇಶ ಕವಲೂರ ಅವರಿಗೆ ರಾಜ್ಯಾಧ್ಯಕ್ಷ, ನಿಕಟಪೂರ್ವ ಜಿಲ್ಲಾಧ್ಯಕ್ಷರು ಧ್ವಜ ಹಸ್ತಾಂತರ ಮಾಡಿದರು. ನಂತರ ಜಿಲ್ಲಾ ಪದಾಧಿಕಾರಿಗಳನ್ನು ಎಲ್ಲಾ ಹಿರಿಯರು ಸನ್ಮಾನಿಸಿದರು.ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಹಕಾರ ಭಾರತಿ ಸಂಘಟನೆ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ ಇದ್ದರು. ಶರಣಪ್ಪ ಹ್ಯಾಟಿ ನಿರ್ವಹಿಸಿದರು. ದೇವರಾಜ ಸ್ವಾಗತಿಸಿದರು. ಜಿಲ್ಲೆಯ ವಿವಿಧ ಸಹಕಾರ ಸಂಘಗಳ ನಿರ್ದೇಶಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷರಾಗಿ ರಮೇಶ ಕವಲೂರು ಆಯ್ಕೆ: ಸಹಕಾರ ಭಾರತಿ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಗಂಗಾ ಯಮುನಾ ಸೌಹಾರ್ದ ಸಂಘದ ರಮೇಶ ಕವಲೂರ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕುಮಾರೆಪ್ಪ ಸಿಂಗನಾಳ, ಶರಣಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ಸೋಮಣ್ಣ ಹಕ್ಕಿ, ಸಹ ಪ್ರಧಾನ ಕಾರ್ಯದರ್ಶಿಯಾಗಿ ಶಿವನಗೌಡ ಪೊಲೀಸ್ ಪಾಟೀಲ್, ಸಂಘಟನಾ ಕಾರ್ಯದರ್ಶಿಯಾಗಿ ಆನಂದಕುಮಾರ ಅಕ್ಕಿ, ಮಹದೇವಯ್ಯ ಹಿರೇಮಠ ಸೇರಿದಂತೆ ೨೦ ಜನ ನಿರ್ದೇಶಕರನ್ನು ಹಾಗೂ ಜಿಲ್ಲೆಯ ಮಹಿಳಾ ಘಟಕ, ವಿವಿಧ ತಾಲೂಕು ಘಟಕದ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಪ್ರಭುದೇವ ಮಾಗನೂರ ಘೋಷಣೆ ಮಾಡಿದರು.