ಗದಗ: ಜೇನು ನೈಸರ್ಗಿಕ ಉತ್ಪಾದನೆಯಾಗಿದ್ದು, ಬೇರೆ ಉತ್ಪನ್ನಗಳಿಗೆ ಕೊನೆ ಎಂಬುದು ಇರುವುದರಿಂದ ಅವುಗಳು ನಂತರ ಬಳಕೆಗೆ ಬರುವುದಿಲ್ಲ. ಆದರೆ, ಜೇನುತುಪ್ಪಕ್ಕೆ ಕೊನೆ ಎಂಬುದು ಇಲ್ಲದಿರುವುದರಿಂದ ಅದನ್ನು ಎಷ್ಟು ವರ್ಷವಾದರೂ ಬಳಸಬಹುದು ಎಂದು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಕಲಾವತಿ ಕಂಬಳಿ ತಿಳಿಸಿದರು.ನಗರದ ನೂತನ ಬಸ್ ನಿಲ್ದಾಣದ ಹತ್ತಿರವಿರುವ ತೋಟಗಾರಿಕಾ ಇಲಾಖೆಯ ತರಬೇತಿ ಕೇಂದ್ರದಲ್ಲಿ ರೈತರಿಗೆ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜೇನು ಸಾಕಾಣಿಕೆಯಿಂದ ತೋಟಗಾರಿಕೆ ಬೆಳೆಗಳಲ್ಲಿ ಶೇ. 80ರಷ್ಟು ಹಾಗೂ ಆಹಾರ ಬೆಳೆಗಳಲ್ಲಿ ಶೇ. 70ರಷ್ಟು ಇಳುವರಿ ಹೆಚ್ಚಾಗುತ್ತದೆ. ಜೇನಿನ ಪರಾಗಸ್ಪರ್ಶದಿಂದ ಹೂವು ಕಾಳನ್ನು ಕಟ್ಟಿ ಬೆಳೆಗಳು ಬೆಳೆಯುತ್ತದೆ ಎಂದರು. ಕುಟುಂಬಕೋಸ್ಕರ ನಿಸ್ವಾರ್ಥವಾಗಿ ಬದುಕುವ ಜೀವಿ ಜೇನು ಆಗಿದೆ. ಕಾರ್ಮಿಕ ಜೇನುಗಳು ರಾಣಿ ಜೇನಿನ ಮಾತನ್ನು ಎಂದು ಮೀರುವುದಿಲ್ಲ ಅದು ಪೀರೋಪಿನ್ ಎಂಬ ದ್ರವ್ಯ ಬಿಡುವುದರಿಂದ ಅದರ ವಾಸನೆಯನ್ನು ಗ್ರಹಿಸಿ ಕಾರ್ಮಿಕ ಜೇನುಗಳು ಕೆಲಸ ಮಾಡುತ್ತವೆ. ರಾಣಿ ಜೇನು 3 ವರ್ಷ ಬದುಕುತ್ತದೆ. ಉಳಿದ ಜೇನುಗಳು 90 ದಿನಗಳ ವರೆಗೆ ಬದುಕುತ್ತವೆ. ಇವುಗಳು ರಾಜಶಾಹಿ ರಸವನ್ನು ತಿನಿಸಿ ರಾಣಿ ಜೇನನ್ನಾಗಿ ಮಾರ್ಪಡು ಮಾಡುತ್ತವೆ. ಜೇನುಗಳು 9 ಕಿಮೀ ವರೆಗೆ ಸಂಚರಿಸಿ ಆಹಾರವನ್ನು ಹುಡುಕುತ್ತವೆ. ಜೇನಿನಿಂದ ಮನುಷ್ಯರು ಕಲಿಯುವುದು ಸಾಕಷ್ಟಿದೆ. ಪರಿಸರ ಸ್ನೇಹಿಯಾದವರು ಮಾತ್ರ ಜೇನು ಕೃಷಿ ಮಾಡಬಹುದು ಎಂದರು.ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ಮಾತನಾಡಿ, ಇಲಾಖೆಯಿಂದ ರೈತರಿಗೆ ಜೇನು ಸಾಕಾಣಿಕೆ ಮಾಡಲು ಜೇನು ಪೆಟ್ಟಿಗೆಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ತರಬೇತಿ ನೀಡುವ ಮೂಲಕ ಜಿಲ್ಲೆಯಲ್ಲಿ ಜೇನು ಕೃಷಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು. ಹಿರಿಯ ಸಹಾಯಕ ನಿರ್ದೇಶಕ ಶೈಲೇಂದ್ರ ಬಿರಾದಾರ ಮಾತನಾಡಿ, ಜೇನು ಸಾಕಾಣಿಕೆಯಿಂದ ಆರ್ಥಿಕವಾಗಿ ಸದೃಢರಾಗಬಹುದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಉತ್ಸಾಹದಿಂದ ಆಗಮಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಾಗಾರಗಳನ್ನು ಆಯೋಜಿಸಿ ಜೇನು ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ಪ್ರಗತಿಪರ ರೈತರಾದ ಪರಮೇಶ ಜಂತ್ಲಿ, ರುದ್ರಣ್ಣ ಗುಳಗುಳಿ ಮಾತನಾಡಿ, ಇಲ್ಲಿಯವರೆಗೆ ಮಾಹಿತಿ ಕೊರತೆಯಿಂದ ಜೇನು ಸಾಕಾಣಿಕೆಯಲ್ಲಿ ಸಾಕಷ್ಟು ಹಿಂದೆ ಉಳಿದಿದ್ದೇವೆ. ವರ್ಷಕ್ಕೆ 8ರಿಂದ 10 ಟನ್ ಜೇನು ತುಪ್ಪಕ್ಕೆ ಬೇಡಿಕೆ ಇರುವುದರಿಂದ ಕಳೆದ ಹತ್ತು ವರ್ಷಗಳಿಂದ ಜೇನು ಸಾಕಾಣಿಕೆ ಮಾಡುತ್ತ ಬಂದಿದ್ದರೂ ಬೇಡಿಕೆಗನುಗುಣವಾಗಿ ಜೇನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ತರಬೇತಿ ನೀಡಿ ಜೇನು ಕೃಷಿಗೆ ಪ್ರೋತ್ಸಾಹ ನೀಡಬೇಕು ಎಂದರು. ಸಚಿನ ಹಿರೇಕುಂಬಾರ ಅವರು ಜೇನು ಸಾಕಾಣಿಕೆ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಮಂಜುನಾಥ ಹೂಗಾರ ಸ್ವಾಗತಿಸಿದರು. ನಿಂಗಪ್ಪ ಕುಂಬಾರ ನಿರೂಪಿಸಿದರು. ನಂದಿನಿ ಹಳ್ಳಿ ವಂದಿಸಿದರು.