ಕನ್ನಡಪ್ರಭ ವಾರ್ತೆ ಕಲಬುರಗಿ
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಲಬುರಗಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ.
ನ್ಯಾಯ ಒದಗಿಸುವ, ನೌಕರಿ ಕೊಡಿಸುವ ನೆಪ ಮಾಡಿಕೊಂಡು ರೇಪ್ ಮಾಡಿ ತನ್ನನ್ನು ಹನಿಟ್ರ್ಯಾಪ್‌ಗೂ ಬಳಸಿದ್ದಾರೆಂದು ಮುಂಬೈ ಮೂಲದ ಯುವತಿ ಸೇರಿದಂತೆ ಸಂತ್ರಸ್ತ ಯುವತಿಯರು ನೀಡಿರುವ ದೂರನ್ನಾಧರಿಸಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿನ ಆರೋಪಿಗಳಾದ ರಾಜು ಲೇಂಗಟಿ ಹಾಗೂ ಪ್ರಭು ಹಿರೇಮಠ ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸಾಮಾಜಿಕ ಜಾಲ ತಾಣದಲ್ಲಿ ಆದ ಪರಿಚಯ ಸ್ನೇಹಕ್ಕೆ ತಿರುಗಿತ್ತು, ಕಲಬುರಗಿಗೆ ಬಂದರೆ ನೌಕರಿ ಕೊಡಿಸುವ ಭರವಸೆ ನೀಡಿದ್ದರಿಂದ ಮುಂಬೈನ ಹೋಟಲ್ ನೌಕರಿ ಬಿಟ್ಟು ಇಲ್ಲಿಗೆ ಬಂದಾಗ ತನ್ನನ್ನು ನಂಬಿಸಿ ಮೋಸ ಮಾಡಲಾಯ್ತಲ್ಲದೆ ಅತ್ಯಾಚಾರ ಎಸಗಿ, ತನ್ನನ್ನು ಈ ಗ್ಯಾಂಗ್ ಹನಿಟ್ರ್ಯಾಪ್‌ಗೂ ಬಳಸಲಾಗಿತ್ತು ಎಂದು ಮುಂಬೈ ಮೂಲದ ಯುವತಿ ತನದಾಗ ನೋವು- ಯಾತನೆಗಳನ್ನೆಲ್ಲ ವಿವರಿಸಿ ಸುದ್ದಿಗೋಷ್ಠಿ ಮಾಡಿದ್ದಳು. ಅದಕ್ಕೂ ಮೊದಲು ಕಮೀಶನರ್ ಕಚೇರಿಗೆ ದೂರು ಸಲ್ಲಿಸಿ ಗಮನ ಸೆಳೆದಿದ್ದಳು.
ಸಂತ್ರಸ್ತ ಯುವತಿಯರು ನೀಡಿರುವ ದೂರನ್ನಾಧರಿಸಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ರಾಜು ಲೆಂಗಟಿ, ಪ್ರಭು ಹಿರೇಮಠ, ಮಂಜು ಬಂಢಾರಿ, ಶ್ರೀಕಾಂತ ರೆಡ್ಡಿ, ಸಂತೋಷ ಸೇರಿದಂತೆ ಎಂಟು ಜನರ ವಿರುದ್ದ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಏತನ್ಮಧ್ಯೆ ಅಕ್ಕಲಕೋಟೆ ಮೂಲದ ಸಂತ್ರಸ್ತ ಯುವತಿ ತನನ್ನು ಮದುವೆಯಾಗೋದಾಗಿ ನಂಬಿಸಿ ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂದು ಸುಶೀಲ್ ಮತ್ತವನ ಗೆಳೆಯರ ವಿರುದ್ಧ ನೀಡಿದ್ದ ದೂರಿನನ್ವಯ ಅಫಜಲ್ಪುರ ಠಾಣೆಯಲ್ಲಿ ದಾಖಲಾಗಿದ್ದ ಗುನ್ನೇ 160, 2024ರ ಪ್ರಕರಣವನ್ನು ಅಲ್ಲಿಂದ ಕಲಬುರಗಿ ಸ್ಟೇಷನ್ ಬಜಾರ್ ಠಾಣೆಗೆ ವರ್ಗ ಮಾಡಲಾಗಿದೆ. ಈ ಪ್ರಕರಣ ಅಲ್ಲಿಂದ ಕಲಬುರಗಿಗೆ ವರ್ಗವಾದ ನಂತರ ಈ ಪ್ರಕರಣದಲ್ಲಿ ಎಲ್ಲವನ್ನು ಬಗೆಹರಿಸೋದಾಗಿ ಶ್ರೀಕಾಂತ ರೆಡ್ಡಿ, ಮಂಜುನಾಥ ಭಂಡಾರಿ, ರಾಜು ಲೇಂಗಟಿ ಸೇರಿದಂತೆ ಹಲವರು ಮಧ್ಯಸ್ಥಿಕೆ ವಹಿಸಿದ್ದರು. ಸಮಸ್ಯೆಗಳನ್ನು ಬಗೆಹರಿಸದೆ ಇಡೀ ಪ್ರಕರಣದಲ್ಲಿ ಆರೋಪಿ ಪರವಾಗಿ ನಿಲ್ಲುವ ಮೂಲಕ ಗರ್ಭಪಾತ ಮಾಡಿಸಿದ್ದಾರೆಂದು ಅಕ್ಕಲಕೋಟೆ ಮೂಲದ ಯುವತಿ ದೂರಿದ್ದಾಳೆ. ಈ ಪ್ರಕರಣದಲ್ಲಿ ದಲಿತ ಸೇನೆಯವರೆಂದು ಹೇಳಿಕೊಂಡ ಅನೇಕರು ತನ್ನನ್ನು ಹೆದರಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ಯುವತಿ ದೂರಿದ್ದು ತನಗೆ ನ್ಯಾಯ ಕೊಡುವಂತೆ ಕೋರಿ ಸುದ್ದಿಗೋಷ್ಠಿ ನಡೆಸಿದ್ದಾಳೆ. ಸದರಿ ಪ್ರಕರಣದಲ್ಲಿ ಪೊಲೀಸರು ಇನ್ನೂ ಕಾರ್ಯಾಚರಣೆಗೆ ಮುಂದಾಗಿಲ್ಲ.
ಕಲಬುರಗಿ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಹನಿಟ್ರ್ಯಾಪ್ ಮಾಡಿ ಹಣ ತೆಗೆದುಕೊಂಡಿದ್ದರ ಬಗ್ಗೆ ಪ್ರಕರಣದಲ್ಲಿನ ಆರೋಪಿ ಪ್ರಭು ಹಿರೇಮಠ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಉದ್ಯಮಿ ವಿನೋದ್ ಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ್ದು ನಿಜ. ಅವರು 6 ಲಕ್ಷ ನನ್ನ ಅಕೌಂಟ್ ಗೆ ಆರ್‌ಟಿಜಿಎಸ್ ಮಾಡಿದ್ದಾರೆ. ಅದಾದ ಬಳಿಕ ನಮ್ಮ ಮಾವನ ಅಕೌಂಟ್ ಗೆ 8 ಲಕ್ಷ ಹಣ ಹಾಕಲಾಗಿದೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನೀವು ಎಲ್ಲರು ಪಾಪಿಗಳು... ನನಗೆ ಬಲಿಪಶು ಮಾಡಿದ್ದೀರಿ...
ಇವರಿಬ್ಬರ ಸಂಭಾಷಣೆಯಲ್ಲಿ ರಾಜು ಲೇಂಗಟಿ ಯುವತಿಗೆ ಅನೇಕ ಸಂಗತಿಗಳನ್ನು ಹೇಳಲು ಯತ್ನಿಸಿದಾಗ ಆ ಯುವತಿ ಇವನ ಯಾವ ಮಾತಿಗೂ ಆಸ್ಪದ ಕೊಡದೆ ನೀವು ಪಾಪಿಗಳಿದ್ದೀರಿ, ವಿನೋದ ಅಮಾಯಕ, ಆತನನ್ನೇ ಬಲೆಗೆ ಹಾಕಿದ್ದೀರಿ. ಲಕ್ಷಾಂತರ ಹಣ ವಸೂಲಿ ಮಾಡಿ ನನಗೆ ಬಲಿಪಶು ಮಾಡಿದ್ದೀರಿ. ನಾನು ಇದರಿಂದ ತುಂಬ ನೊಂದಿರುವೆ. ನೀವು ಪಾಪಿಗಳು, ದೇವರು ನಿಮಗೆ ಕ್ಷಮಿಸೋದಿಲ್ಲ ಎಂದು ನೊಂದು ಆಡಿದ ಮಾತುಗಳು ಸ್ಪಷ್ಟವಾಗಿವೆ.
ಸಂಭಾಷಣೆಯುದ್ದಕ್ಕೂ ರಾಜು ಲೆಂಗಟಿ ಯುವತಿಗೆ ನಿಂದಿಸಲು ಯತ್ನಿಸಿದ್ದಾನೆ. ಆದರೆ ಯುವತಿ ಈತನ ಪ್ರತಿ ಮಾತಿಗೂ ಸಿಡಿದೆದ್ದಿದ್ದಾಳೆ. ನಿಮ್ಮ ಮಾತು ನಂಬಿ ಕೆಟ್ಟೆ ಎಂದು ಹೇಳಿ ನಂತರ ತಾನೀಗ ತುಂಬ ಬ್ಯೂಸಿ ಇರೋದಾಗಿ ಹೇಳಿ ಸಂಭಾಷೆ ನಿಲ್ಲಿಸಿದ್ದಾಳೆ.