ಘರ್ಜಿಸುವ ಹುಲಿಗಳ ಮೇಲೆ ಹನಿಟ್ರ್ಯಾಪ್‌ ಟಾರ್ಗೆಟ್‌ : ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ

KannadaprabhaNewsNetwork | Updated : Mar 23 2025, 08:02 AM IST

ಸಾರಾಂಶ

ಪರಿಶಿಷ್ಟ ಸಮುದಾಯದವರಂತಲ್ಲ, ಘರ್ಜಿಸುವ ಹುಲಿಗಳ ಮೇಲೆ ಹನಿಟ್ರ್ಯಾಪ್‌ ಟಾರ್ಗೆಟ್‌ ಮಾಡಲಾಗುತ್ತಿದೆ. ಘರ್ಜಿಸುವವರಿಗೆ ಸಿಡಿ ತೋರಿಸುವ ಕೆಲಸ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು.

  ಬೆಳಗಾವಿ : ಪರಿಶಿಷ್ಟ ಸಮುದಾಯದವರಂತಲ್ಲ, ಘರ್ಜಿಸುವ ಹುಲಿಗಳ ಮೇಲೆ ಹನಿಟ್ರ್ಯಾಪ್‌ ಟಾರ್ಗೆಟ್‌ ಮಾಡಲಾಗುತ್ತಿದೆ. ಘರ್ಜಿಸುವವರಿಗೆ ಸಿಡಿ ತೋರಿಸುವ ಕೆಲಸ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು.

ಕಾಂಗ್ರೆಸ್‌ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣ ಸಂಬಂಧ ಸಚಿವ ಕೆ.ಎನ್‌.ರಾಜಣ್ಣ ಅವರು ಕಾನೂನು ತಜ್ಞರ ಜೊತೆಗೆ ಚರ್ಚಿಸಿ ದೂರು ನೀಡಬೇಕು. ಈಗಾಗಲೇ ನಾನು ಅವರಿಗೆ ದೂರು ನೀಡುವಂತೆ ಸಲಹೆ ನೀಡಿದ್ದೇನೆ. ದೂರು ದಾಖಲಾದ ಬಳಿಕ ತನಿಖೆ ಆರಂಭವಾಗಲಿದೆ. ಈ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವ ಅಗತ್ಯವಿಲ್ಲ. ಇದರ ಹಿಂದೆ ಸೂತ್ರದಾರ ಯಾರಿದ್ದಾರೆ ಎಂಬುವುದನ್ನು ಬಹಿರಂಗವಾಗಬೇಕಿದೆ ಎಂದು ಆಗ್ರಹಿಸಿದರು. 

ಹಾಯ್ ಅಂದ್ರೆ ನೀವು ಯಾಕೆ ಹಲೋ ಅಂತೀರಾ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಲ್‌ ಪವರ್, ಅನುಭವ ಬದ್ಧತೆ ಮೇಲೆ ಇದು ನಿರ್ಧಾರ ಆಗಲಿದೆ. ಒಂದು ಸಲ ಹಾಯ್ ಅಂದರೆ ಅಟ್ರ್ಯಾಕ್ಟ್ ಆಗಿತ್ತು, ‌ಎರಡನೇ ಸಲಕ್ಕೆ ಆಗುತ್ತಾ? ಗಟ್ಟಿ ಇದ್ದರೆ ಆಗಲ್ಲ, ಸ್ವಲ್ಪ ವೀಕ್ನೆಸ್ ಇದ್ದರೆ ಒಂದೇ ಸಲಕ್ಕೆ ಮೊಬೈಲ್ ರಿಂಗ್ ಆಗುವುದಕ್ಕೆ ಶುರು ಆಗುತ್ತದೆ. ಮೊದಲೇ ಹೆದರಿಕೆ ಇದ್ದರೆ 10 ಸಲ ಹಾಯ್ ಅಂದರೂ ಹಲೋ ಎನ್ನುವುದಿಲ್ಲ. ಹಾಯ್ ಅಂದರೆ ಹಾಯ್ ಅಂತಾರಾ ಎನ್ನುವುದು ಯಾವ ದೃಷ್ಟಿಯಿಲ್ಲಿ‌ ಹೇಳಿದ್ದಾರೆ ಗೊತ್ತಾಗಲ್ಲ ಎಂದರು.

ಹೈಕಮಾಂಡ್‌ಗೆ ದೂರು ಕೊಡುವಂತಹದ್ದು ಏನಿದೆ? ಸಿಡಿ ಫ್ಯಾಕ್ಟರಿ ಎಲ್ಲಿದೆ ಎಂದು ಪೊಲೀಸರೇ ಪತ್ತೆ ಹಚ್ಚಬೇಕು. ಹನಿಟ್ರ್ಯಾಪ್‌ ವಿಚಾರದಲ್ಲಿ ದೂರು ಕೊಟ್ಟ ಮೇಲೆಯೇ ಮುಂದಿನ ದಾರಿ. ರಾಜ್ಯ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲು ಸಮರ್ಥರಿದ್ದಾರೆ ಎಂದ ಅವರು, ಹನಿಟ್ರ್ಯಾಪ್‌ ಬಗ್ಗೆ ಮೊದಲು ಮಾತನಾಡಿದ್ದು ನಾನೇ. ಬಿಜೆಪಿಯವರಲ್ಲ. ಚೀಟಿ ಕೊಟ್ಟರೆ ಯತ್ನಾಳ ಮಾತನಾಡುತ್ತಾರಾ ಎಂದು ಮಾಧ್ಯಮದವರ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದರು.

ಮುನಿರತ್ನ ಅವರು ಡಿಸಿಎಂ ಡಿ.ಕೆ.ಶಿವಕುಮಾರ ವಿರುದ್ಧ ನೇರವಾಗಿ ಆರೋಪ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುನಿರತ್ನ ಆರೋಪ ಮಾಡಿದ್ದಾರೆಂದು ನಾವು ಮಾಡಲು ಆಗುವುದಿಲ್ಲ. ಪೊಲೀಸ್‌ ತನಿಖೆಯಾಗಬೇಕು. 40 ಜನ ಇರಬಹುದು ಎಂದು ಅಷ್ಟೇ ರಾಜಣ್ಣ ಹೇಳಿದ್ದಾರೆ. ಅದರ ಸಂಖ್ಯೆ 400 ಕೂಡ ಇರಬಹುದು ಎಂದಿದ್ದಾರೆ ಎಂದರು.

ಮಹಾನ್ ನಾಯಕರ ಹೆಸರು ಪದೇ ಪದೇ ಪ್ರಸ್ತಾಪವಾಗುತ್ತಿದೆ. ಈ ಕುರಿತು ಯಾವ ತನಿಖೆ ಆಗಬೇಕು ಎನ್ನುವುದನ್ನು ಮುಖ್ಯಮಂತ್ರಿ, ಗೃಹ ಸಚಿವರು ತೀರ್ಮಾನ ಮಾಡುತ್ತಾರೆ. ಕೆಲವು ಕಡೆ ರಾಜಕೀಯ ಇದೆ. ಬ್ಯುಸಿನೆಸ್‌, ಬ್ಲ್ಯಾಕ್ ಮೇಲ್ ಉದ್ದೇಶವೂ ಇದೆ. ತನಿಖೆ ಆಗುವವರೆಗೂ ನಾವು ಕಾಯಬೇಕು ಎಂದು ಸಚಿವರು ಹೇಳಿದರು.

ಎಂಇಎಸ್‌ ನಿಷೇಧದಿಂದ ಪರಿಹಾರ ಸಿಗಲ್ಲ

ಗಡಿ, ಭಾಷಾ ವಿವಾದ ಸಂಬಂಧ ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟನೆ ನಿಷೇಧಿಸುವುದರಿಂದ ಪರಿಹಾರ ಸಿಗದು. ಅಧಿಕೃತವಾಗಿ ನೋಂದಣಿಯಾಗಿಲ್ಲ ಎಂದ ಮೇಲೆ ಎಂಇಎಸ್‌ ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕಾಂಗ್ರೆಸ್‌ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್‌ ಸಂಘಟನೆ ನಿಷೇಧಿಸಿದರೆ, ಬೇರೆ ಹೆಸರಿನಲ್ಲಿ ಮತ್ತೆ ಸಂಘಟನೆ ಮಾಡುತ್ತಾರೆ ಎಂದರು.

ಬೆಳಗಾವಿ ಗಡಿ ವಿವಾದ ಮುಗಿದ ಅಧ್ಯಾಯವಾಗಿದೆ. ಕಳೆದ 30-40 ವರ್ಷಗಳ ಹಿಂದೆ ಇದ್ದ ಕನ್ನಡ- ಮರಾಠಿ ಭಾಷಾ ಸಂಘರ್ಷ ಈಗಿಲ್ಲ. ಕನ್ನಡ- ಮರಾಠಿ ಉಭಯ ಭಾಷಿಕರು ಅನ್ಯೋನ್ಯತೆಯಿಂದ ಸಹಬಾಳ್ವೆ ಮಾಡುತ್ತಾ ಬಂದಿದ್ದಾರೆ. ಎಂಇಎಸ್‌ ಅಸ್ತಿತ್ವವೇ ಇಲ್ಲದಾಗಿದೆ. ಮರಾಠಿ ಭಾಷಿಕರು ಮುಖ್ಯವಾಹಿನಿಗೆ ಬರಬೇಕಿದೆ. ಸರ್ಕಾರದ ಯೋಜನೆಗಳ ಲಾಭ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.

ಮರಾಠಿ ಭಾಷಿಕರಿಗೆ ಮಹಾರಾಷ್ಟ್ರ ಸರ್ಕಾರ ಯೋಜನೆ ಜಾರಿ ಮಾಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಇಲ್ಲಿನ ಮರಾಠಿ ಭಾಷಿಕರಿಗೆ ಪ್ರಯೋಜನಕ್ಕಾಗಿ ಅಲ್ಲ. ಮಹಾರಾಷ್ಟ್ರ ಸರ್ಕಾರ ಯೋಜನೆಗಳನ್ನು ಘೋಷಿಸಿರಬಹುದು. ಆದರೆ, ಎಲ್ಲರಿಗೂ ಅದರ ಸದುಪಯೋಗ ಸಿಗುವುದಿಲ್ಲ. ಆದರೆ ರಾಜ್ಯ ಸರ್ಕಾರದ ಯೋಜನೆಗಳು ಎಲ್ಲ ಭಾಷಿಕರಿಗೂ ತಲುಪುತ್ತಿವೆ. ಗಡಿ ಭಾಗದಲ್ಲಿ ಹೆಚ್ಚಿನ ನರೇಗಾ ಯೋಜನೆ ನೀಡಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬೇರೆ ಭಾಷೆಯಲ್ಲಿ ಕಾಗದ ಪತ್ರಗಳಿದ್ದವು. ಆದರೇ ಈಗ ಕನ್ನಡದಲ್ಲಿಯೇ ನೀಡಲಾಗುತ್ತಿದೆ. ಇದರ ಕುರಿತು ಚರ್ಚಿಸಲಾಗುವುದು ಎಂದರು.

ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿರುವುದು, ಬಂದ್‌ ಮಾಡಿರುವುದು ಇದೇ ಮೊದಲೇನಲ್ಲ. ಪ್ರತಿಭಟನೆ ಮಾಡಲಿ. ಅದು ಅವರ ಹಕ್ಕು. ಆದರೆ ಬಂದ್‌ನಿಂದ ಶಾಲಾ-ಕಾಲೇಜು, ಆಸ್ಪತ್ರೆ, ವ್ಯಾಪಾರ ವಹಿವಾಟಕ್ಕೆ ತೊಂದರೆ ಆಗಬಾರದು ಎಂದು ಹೇಳಿದರು.

Share this article