ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕಿನ ಅರೇಪಾಳ್ಯ ಗ್ರಾಮ ಸಮೀಪದಲ್ಲಿರುವ ಹೊನ್ನಹುಡ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಎರಡು ದಿನಗಳ ಕಾಲ ಯಶಸ್ವಿಯಾಗಿ ಜರುಗಿದ್ದು ಕೊಂಡೋತ್ಸವದ ವೇಳೆ ಇಬ್ಬರು ಭಕ್ತರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.ಗುರುವಾರ ರಾತ್ರಿ ಅನ್ನದಾನ, ವಿಶೇಷ ಪೂಜೆ, ಹುಲಿ ವಾಹನ ಉತ್ಸವ ಸಾಂಘವಾಗಿ ಜರುಗಿತು. ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಜರುಗಿದ ಕೊಂಡೋತ್ಸವ ವೇಳೆ ಕೆಂಪನಪಾಳ್ಯ ಗ್ರಾಮದ ಬಸವನಗುಡಿ ದೇವಸ್ಥಾನ ಅರ್ಚಕ ಯೋಗೇಶ್, ಅರೇಪಾಳ್ಯದ ಭಕ್ತ ಪಾಪಣ್ಣ ಎನ್ನುವರು ಆಯತಪ್ಪಿ ಕೊಂಡೋತ್ಸವದ ವೇಳೆ ಕೊಂಡದ ಗುಳಿಗೆ ಬಿದ್ದು ಗಾಯಗೊಂಡಿದ್ದಾರೆ. ಎರಡು ದಿನ ನಡೆದ ಮಹದೇಶ್ವರಸ್ವಾಮಿ ಜಾತ್ರೋತ್ಸವದಲ್ಲಿ ಗುರುವಾರ ಹಾಲರವಿ ಉತ್ಸವದಲ್ಲಿ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು.ರಾತ್ರಿ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಶುಕ್ರವಾರ ಬೆಳಗ್ಗೆ ದೇವಸ್ಥಾನದ ಮುಂದೆ ಹಾಕಲಾಗಿದ್ದ ಕೊಂಡವನ್ನು ಮೊದಲಿಗೆ ವೀರಭದ್ರೇಶ್ವರ ವೇಷಧಾರಿಗಳು ಹಾಯ್ದರು, ಬಳಿಕ ಮಹದೇಶ್ವರ ದೇವಸ್ಥಾನದ ತಂಬಡಿಗಳು ಕೊಂಡ ಹಾಯ್ದರೇ, ಮೂರನೇಯದಾಗಿ ಬಂದ ಕೆಂಪನಪಾಳ್ಯ ಗ್ರಾಮದ ಬಸವನಗುಡಿ ದೇವಸ್ಥಾನ ತಂಬಡಿ ಯೋಗೇಶ್ ಕೊಂಡವನ್ನು ಹಾಯುವಾಗ ಕೊನೆ ಭಾಗದಲ್ಲಿ ಆಯತಪ್ಪಿ ಮುಗ್ಗರಿಸಿ ಬಿದ್ದ ಪರಿಣಾಮ ಗಾಯವಾಗಿದೆ. ಇವರ ಹಿಂದೆಯೇ ಆರೇಪಾಳ್ಯ ಪಾಪಣ್ಣ ಸಹಾ ಪ್ರಾರಂಭದಲ್ಲಿ ಬಿದ್ದು ಪುನಃ ಎದ್ದು ಕೊಂಡೋತ್ಸವದಲ್ಲಿ ಓಡಿ ಬಂದ ಪರಿಣಾಮ ಜಾರಿ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡ ಒಬ್ಬರನ್ನು ಖಾಸಗಿ ಆಸ್ಪತ್ರೆಗೂ, ಮತ್ತೊಬ್ಬರನ್ನು ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ.2 ದಿನದ ಜಾತ್ರೋತ್ಸವದಲ್ಲಿ ಗಣ್ಯರ ಭಾಗಿ:
2 ದಿನಗಳ ಕಾಲ ನಡೆದ ಹಾಲರವೆ ಉತ್ಸವ, ಪೂಜಾ ಕೈಂಕರ್ಯ ಮತ್ತು ಕೊಂಡೋತ್ಸವ ವೇಳೆ ಹಲವು ಗಣ್ಯರು ಭೇಟಿ ನೀಡಿ ಮಹದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ತಮ್ಮ ಹರಕೆ ಸಮರ್ಪಿಸಿದ್ದಾರೆ. ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ಆರ್ ನರೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಸೇರಿದಂತೆ ಅನೇಕ ಗಣ್ಯರು, ದಾನಿಗಳು, ಭಕ್ತಾದಿಗಳು ಭೇಟಿ ನೀಡಿ ಪೂಜೆ ಸಲ್ಲಿಸಿ ನಿರ್ಗಮಿಸಿದರು.ಕಾಡಂಚಿನ ಗ್ರಾಮದಲ್ಲಿ ಜಾತ್ರೆ ನಡೆದ ಹಿನ್ನೆಲೆ ಅರಣ್ಯ ಇಲಾಖೆ ಮತ್ತು ಗ್ರಾಮಾಂತರ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ನೂರಾರು ಭಕ್ತರು ಗುರುವಾರ ರಾತ್ರಿ ಮಹದೇಶ್ವರ ದೇವಾಲಯದ ಸುತ್ತಲಿನ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿ ಬೆಳಗ್ಗೆ 5ಗಂಟೆಗೆ ಮಹದೇಶ್ವರ ದರ್ಶನ ಪಡೆದರು. ಕೊಂಡೋತ್ಸವದ ದೃಶ್ಯ ಕಣ್ ತುಂಬಿಕೊಂಡರು.ವೀರಶೈವ ಮಹಾಸಭೆ ತಾಲೂಕು ಉಪಾಧ್ಯಕ್ಷ ತಿಮ್ಮರಾಜಿಪುರ ರಾಜು, ಕಾರ್ಯದರ್ಶಿ ಕೆಂಪನಪಾಳ್ಯ ಮಹೇಶ್, ಗ್ರಾಪಂನ ಮಾಜಿ ಸದಸ್ಯ ಮಂಜು, ಪಿಎಸ್ಸೈ ಸುಪ್ರೀತ್, ಬಿಜೆಪಿ ಮುಖಂಡ ಕುಣಗಳ್ಳಿ ರವಿ ಸೇರಿದಂತೆ ಆರೇಪಾಳ್ಯ ಹಿತ್ತಲದೊಡ್ಡಿ, ಜಕ್ಕಳ್ಳಿ, ಕೆಂಪನಪಾಳ್ಯ ಗ್ರಾಮಗಳಿಂದ ನಾರೂರು ಮಂದಿ ಭಕ್ತರು ಪಾಲ್ಗೊಂಡು ಮಹದೇಶ್ವರನ ದರ್ಶನ ಪಡೆದರು.