ಕಾಗಿನೆಲೆ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ, ಸಾವಿರಾರು ಭಕ್ತರಿಂದ ಕೆಂಡಾದರ್ಚನೆ
ಪಟ್ಟಣದ ದೊಡ್ಡಕೇರಿಯ ಶ್ರೀ ಬೀರಲಿಂಗೇಶ್ವರ ದೇವರ ಕಾರ್ತಿಕೋತ್ಸವ ಅಂಗವಾಗಿ ಮಂಗಳವಾರ ದೇವರ ಕೆಂಡಾದರ್ಚನೆ ಹಾಗೂ ಮುಳ್ಳುಗದ್ದುಗೆ ಉತ್ಸವ ಮತ್ತು ಗುಗ್ಗಳ ಮಹೋತ್ಸವ ಸಾವಿರಾರು ಭಕ್ತರ ನಡುವೆ ಸಡಗರ ಹಾಗೂ ಸಂಭ್ರಮದಿಂದ ಜರುಗಿತು.
ಭಾನುವಾರ ಬೀರಪ್ಪ ದೇವರ ಕದಳಿ ಮಹೋತ್ಸವ, ಸೋಮವಾರ ಬೀರಪ್ಪ ದೇವರ ಪವಾಡ ಕಾರ್ಯಕ್ರಮಗಳು ಜರುಗಿದವು. ಮಂಗಳವಾರ ಬೆಳಿಗ್ಗೆ ಶ್ರೀ ಬೀರಲಿಂಗೇಶ್ವರ ದೇವರು, ಸುಡುಗಾಡು ಸಿದ್ದಪ್ಪ ದೇವರು, ವೀರಭದ್ರ ದೇವರು, ಹಳದಮ್ಮ ದೇವಿ ಹಾಗೂ ಗೋಪಗೊಂಡನಹಳ್ಳಿ ಬೀರಪ್ಪ ದೇವರ ಮೂರ್ತಿಗಳ ಹೂವುಗಳಿಂದ ಸಿಂಗರಿಸಿದ ಪಲ್ಲಕ್ಕಿಗಳಲ್ಲಿ ಹೊತ್ತು ತುಂಗಭದ್ರಾ ನದಿಗೆ ಪೂಜೆಗೆ ತೆರಳಿ ಅಲ್ಲಿ ಅಭಿಷೇಕ, ಸಕಲ ಪೂಜಾ ವಿಧಿ ವಿಧಾನಗಳು ನಡೆದವು.ಪೂಜಾ ಸಂದರ್ಭದಲ್ಲಿ ಡೊಳ್ಳುಗಳ ಶಬ್ದಕ್ಕೆ ಬೀರಪ್ಪ ದೇವರ ಗಣಮಕ್ಕಳ ಮೇಲೆ ದೇವರು ಆವಾಹನೆಯಾಗಿ ಗಣಮಕ್ಕಳಾದ ಅಣ್ಣಪ್ಪ ಸ್ವಾಮಿ ಕಬ್ಬಿಣದ ಮೊಳೆ ಪಲ್ಲಕ್ಕಿ ಮೇಲೆ ಹಾಗೂ ಬೀರದೇವರ ಗಣಮಗ ಪ್ರಭುಸ್ವಾಮಿ ಮುಳ್ಳು ಪಲ್ಲಕ್ಕಿ ಮೇಲೆ ಆಸೀನರಾದರು. ನಂತರ ನೂರಾರು ಮುತ್ತೈದೆಯರು, ದೇವರ ಸೇವೆಗಾಗಿ ಮೀಸಲಿದ್ದವರು, ದೇವರ ಹೊತ್ತವರು ಸಾಲಾಗಿ ತುಂಗಭದ್ರಾ ನದಿಯಿಂದ ಪುರಪ್ರವೇಶ ಮಾಡಿದರು.
ಇದಕ್ಕೂ ಮುನ್ನ ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಕಾರ್ಯಕ್ರಮದ ಆರಂಭದಲ್ಲಿ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ನಂತರ ದೇವಸ್ಥಾನಕ್ಕೆ ತೆರಳಿ ಭಕ್ತರಿಗೆ ದರ್ಶನ ನೀಡಿದರು. ಈ ವೇಳೆ ನೆರೆದಿದ್ದ ಸಾವಿರಾರು ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಕಾರ್ತಿಕೋತ್ಸವ ಅಂಗವಾಗಿ ಜ.3ರಿಂದ 5ರವರೆಗೆ ಕುಸ್ತಿ ಪಂದ್ಯಾವಳಿಗಳ ಆಯೋಜಿಸಿದ್ದು, ಜ.3 ರಂದು ಎಚ್.ಬಿ. ಗಿಡ್ಡಪ್ಪ ಕುಸ್ತಿ ಪಂದ್ಯಾವಳಿಗಳಿಗೆ ಚಾಲನೆ ನೀಡುವರು. ಕುಸ್ತಿ ಪಂದ್ಯಾವಳಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೇರಿ ಅನೇಕ ಗಣ್ಯರು ಭಾಗವಹಿಸುವರು. ರಾಜ್ಯದ ವಿವಿಧ ಭಾಗಗಳಿಂದ ಬರುವ ಕುಸ್ತಿಪಟುಗಳಿಗೆ ಮೂರು ದಿನ ಕಾಲ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಪೈಲ್ವಾನರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕುಸ್ತಿ ಪಂದ್ಯಗಳ ಯಶಸ್ವಿಯಾಗಿಸಲು ದೇವಸ್ಥಾನದ ಸಮಿತಿಯವರು ಮನವಿ ಮಾಡಿದ್ದಾರೆ.