ಹುಬ್ಬಳ್ಳಿ: ಅಲ್ಲಿ ಪಕ್ಷಗಳ ಹಂಗು ಇರಲಿಲ್ಲ. ಬದಲಾಗಿ ಗೆಳೆತನ ಗುಂಗು ಮೇಳೈಸಿತ್ತು. ನೆನಪುಗಳ ಮೆರವಣಿಗೆ, ರಾಜಕೀಯ ಘಳಿಗೆಗಳ ಕಚಗುಳಿಯ ಮಧ್ಯೆ ಆಪ್ತ ಅಭಿಮಾನದ ಹೊನಲು ಹೊಳೆಯಾಗಿ ಹರಿಯಿತು...
ಸತತ 8 ಬಾರಿ ಗೆಲುವು ಸಾಧಿಸುವ ಮೂಲಕ 45 ವರ್ಷಗಳಿಂದ ಮೇಲ್ಮನೆ ಸದಸ್ಯರಾಗಿ ದಾಖಲೆ ಬರೆದ ಬಸವರಾಜ ಹೊರಟ್ಟಿ ಅವರಿಗೆ ಪಕ್ಷಾತೀತವಾಗಿ ಸನ್ಮಾನ ಇದಾಗಿದ್ದರಿಂದ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೆಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಚಿವರಾದ ಎಚ್.ಕೆ.ಪಾಟೀಲ್, ಸಂತೋಷ ಲಾಡ್ ಸೇರಿದಂತೆ ಮಾತನಾಡಿದ ಮಹನೀಯರೆಲ್ಲ ತಮ್ಮ ಮತ್ತು ಹೊರಟ್ಟಿ ಸಂಬಂಧಗಳನ್ನು ಮೆಲಕು ಹಾಕುತ್ತ ರಾಜಕೀಯದಲ್ಲಿ ಹೊರಟ್ಟಿ ಅಜಾತಶತ್ರು ಎಂದು ಅಭಿಮಾನದಿಂದ ಬಣ್ಣಿಸಿದರು.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ "ಹೊರಟ್ಟಿ-ನನ್ನ ಗೆಳೆತನ, ಆತ್ಮೀಯತೆ ದೊಡ್ಡದು. ಆದರೆ ಕಳೆದ ಬಾರಿ ಹೊರಟ್ಟಿ ಸೋಲಿಸಲು ಕ್ಯಾಂಪೆನ್ ಮಾಡಿದೆ. ಆದರೆ, ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿಲ್ಲ. ವೈಯಕ್ತಿಕವಾಗಿ ಹೊರಟ್ಟಿ ಗೆಲ್ಲಲಿ ಎಂದು ಹಾರೈಸುತ್ತಿದ್ದೆ " ಎಂದು ತಮ್ಮದೇಯಾದ ವಿನೋದ ಶೈಲಿಯಲ್ಲಿ ಒಳಗುಟ್ಟು ಬಿಚ್ಚಿಟ್ಟಾಗ ತುಂಬಿದ ಸಭೆಯ ಕರತಾಡಣ ಪ್ರತಿಧ್ವನಿಸಿತು.ಶೆಟ್ಟರ್ ಮತ್ತು ಜೋಶಿ ಕೂಡ ಇದೇ ದಾಟಿಯಲ್ಲಿ "ನಮ್ಮ ಬಿಜೆಪಿ ಎಲ್ಲ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ಪಶ್ಚಿಮ ಪದವೀಧರ ಕ್ಷೇತ್ರ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳನ್ನು ಗೆಲ್ಲುವುದು ಸಾಧ್ಯವಾಗಿರಲಿಲ್ಲ. ಪ್ರಯತ್ನ ಮಾಡಿ ಪದವೀಧರ ಕ್ಷೇತ್ರದಲ್ಲಿ ಎಚ್.ಕೆ.ಪಾಟೀಲರನ್ನು ಸೋಲಿಸಿದೆವು. ಹೊರಟ್ಟಿಯವರನ್ನು ಸೋಲಿಸುವಲ್ಲಿ ನಾವೇ ಸೋತಿದ್ದೆವು. ಕೊನೆಗೆ ಹೊರಟ್ಟಿಯವರೇ ನಮ್ಮಲ್ಲಿಗೆ ಬಂದು ಮತ್ತೆ ಗೆಲುವು ಸಾಧಿಸಿದರು " ಎಂದಾಗಲೂ ದೊಡ್ಡ ಚಪ್ಪಾಳೆ ಕೇಳಿಬಂತು.
ಇನ್ನಷ್ಟು ಕಾಲ ಮೇಲ್ಮನೆಯಲ್ಲಿಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಪೀಕರ್ ಯು.ಟಿ.ಖಾದರ್ ಸೆರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಸನ್ಮಾನ ಸಮಿತಿ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ ಬಿನ್ನವತ್ತಳೆ ಓದಿದರು. ಸಿಎಂ ಸಿದ್ದರಾಮಯ್ಯ ಸುಮಾರು ಒಂದೂವರೆ ಗಂಟೆಗಳ ಕಾಲ ವೇದಿಕೆಯಲ್ಲಿದ್ದರು. ಎಲ್ಲರೂ ಮಾತನಾಡುವಾಗಲೂ ಇನ್ನೂ ಹೆಚ್ಚುಕಾಲ ಶಿಕ್ಷಕರ ಪ್ರತಿನಿಧಿಯಾಗಿ ಹೊರಟ್ಟಿಯವರು ಮೇಲ್ಮನೆಯಲ್ಲಿ ಇರಬೇಕು ಎನ್ನುವ ಆಶಯ ವ್ಯಕ್ತಪಡಿಸುತ್ತ ಹಾರೈಸಿದ್ದು ವಿಶೇಷವಾಗಿತ್ತು. ಎಲ್ಲ ಪಕ್ಷದವರು ಇದ್ದರೂ ಯಾರು ಯಾರಿಗೂ ಬೊಟ್ಟು ಮಾಡದೇ, ನಮ್ಮೆಲ್ಲರ ಆಪ್ತ ಹೊರಟ್ಟಿ ಎನ್ನುವ ಬಂಧುತ್ವವನ್ನು ಸಾರುವ ಮೂಲಕ ಒಂದಾಗಿ ಸನ್ಮಾನಿಸಿ ಸಮಾರಂಭದ ಹಿರಿಮೆ ಎತ್ತಿ ಹಿಡಿದರು.
ಪಶ್ಚಿಮ ಶಿಕ್ಷಕರ ಕ್ಷೇತ್ರದ ಧಾರವಾಡ, ಹಾವೇರಿ, ಗದಗ, ಕಾರವಾರ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಶಿಕ್ಷಕರು, ನಿವೃತ್ತ ಶಿಕ್ಷಕರು ಹಾಗೂ ರಾಜ್ಯ ವಿವಿಧ ಜಿಲ್ಲೆಗಳ ಹೊರಟ್ಟಿ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಸನ್ಮಾನ ಇನ್ನಷ್ಟು ಅದ್ದೂರಿ ಮತ್ತು ಅರ್ಥಪೂರ್ಣ ಎನಿಸಿತು.ಹುಬ್ಬಳ್ಳಿ ನೆಲದಲ್ಲಿ ಹೀಗೆ ಪಕ್ಷಾತೀತವಾಗಿ ಓರ್ವ ರಾಜಕಾರಣಿಯನ್ನು ಗೌರವಿಸಿದ್ದು ಇದೇ ಮೋದಲು ಆಗಿದ್ದರಿಂದ, ಹೊರಟ್ಟಿ ಸನ್ಮಾನ ರಾಜ್ಯ ರಾಜಕೀಯಕ್ಕೆ ಹೊಸ ಭಾಷ್ಯ ಬರೆದಂತಾಯಿತು.
ಕಾರ್ಯಕ್ರಮಕ್ಕೂ ಮೊದಲು ಲ್ಯಾಮಿಂಗ್ಟನ್ ಸ್ಕೂಲ್‌ನಿಂದ ತೆರೆದ ವಾಹನದಲ್ಲಿ ಬಸವರಾಜ ಹೊರಟ್ಟಿ ಅವರನ್ನು ಮೆರವಣಿಗೆ ಮೂಲಕ ನೆಹರು ಮೈದಾನದ ವೇದಿಕೆಗೆ ಕರೆತರಲಾಯಿತು.