ಲೀಡ್‌.. ಹೃದಯ ಶ್ರೀಮಂತಿಕೆ ಇರುವ ನಾಗರಾಜ ಬೈರಿ

KannadaprabhaNewsNetwork |  
Published : Aug 23, 2025, 02:00 AM IST
8 | Kannada Prabha

ಸಾರಾಂಶ

ಬೈರಿ ಅವರು ಒಂದು ರೀತಿಯಲ್ಲಿ ಕಲಾಪ್ರಪಂಚದ ಭೋಜರಾಜ ಇದ್ದಂತೆ. ಕಲಾ ತಪಸ್ವಿ, ಕಾಯಕ ತಪಸ್ವಿ, ಕ್ರಿಯಾಶೀಲವಾಗಿ ಕೆಲಸ ಮಾಡಿ,

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ರಾಜ್ಯ ಮಟ್ಟದ 19ನೇ ಸುಗಮ ಸಂಗೀತ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ವಿ. ಬೈರಿ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕದಂಬ ರಂಗ ವೇದಿಕೆ ವತಿಯಿಂದ ಸಾಂಸ್ಕೃತಿಕ ಚಿಂತಕ, ಸಂಘಟಕ ಬಿರುದು ನೀಡಿ ಸನ್ಮಾನಿಸಲಾಯಿತು.

ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬೈರಿ ಅವರನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಸನ್ಮಾನಿಸಿದರು. ನಂತರ ಅವರು ಮಾತನಾಡಿ, ಸಾಮಾನ್ಯವಾಗಿ ಸಿರಿವಂತಿಕೆ ಇರುವವರಿಗೆ ಹೃದಯ ಶ್ರೀಮಂತಿಕೆ ಇರುವುದಿಲ್ಲ. ಆದರೆ ಬೈರಿ ಅವರು ಇದಕ್ಕೆ ತದ್ವಿರುದ್ಧ. ಜಿಲ್ಲಾ ಘಟಕದ ಅಧ್ಯಕ್ಷರಾದ ಒಂದೂವರೆ ವರ್ಷಗಳಲ್ಲಿ ಸುಗಮ ಸಂಗೀತ ಕ್ಷೇತ್ರದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಅಭಿನಂದನಾ ಭಾಷಣ ಮಾಡಿದ ಕವಿ ಜಯಪ್ಪ ಹೊನ್ನಾಳಿ ಅವರು, ನಾಗರಾಜ ವಿ. ಬೈರಿ ಅವರು ಭಾವಗೀತೆಗಳ ಪ್ರಿಯ. ಸಾಂಸ್ಕೃತಿಕ, ಸಾರಸ್ವತ, ಗಾಯನ ಲೋಕ ಬೆರಗಾಗುವಂತೆ ಸುಗಮ ಸಂಗೀತ ಸಮ್ಮೇಳನವನ್ನು ನಡೆಸಿದ್ದಾರೆ ಎಂದು ಶ್ಲಾಘಿಸಿದರು.

ಬೈರಿ ಅವರು ಒಂದು ರೀತಿಯಲ್ಲಿ ಕಲಾಪ್ರಪಂಚದ ಭೋಜರಾಜ ಇದ್ದಂತೆ. ಕಲಾ ತಪಸ್ವಿ, ಕಾಯಕ ತಪಸ್ವಿ, ಕ್ರಿಯಾಶೀಲವಾಗಿ ಕೆಲಸ ಮಾಡಿ, ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಕಿರೀಟಪ್ರಾಯರಾಗಿದ್ದಾರೆ. ಬೈರಿ ಅವರದು ಕೊಡುವ ಕೈ ಹಾಗೂ ಅವರ ಪತ್ನಿ ಶಾಲಿನಿ ಅವರದು ತಾಯ್ತನದ ಪ್ರೀತಿ ಎಂದರು.

ಚಲನಚಿತ್ರ ಹಾಗೂ ಕಿರುತೆರೆ ನಟ ಶಂಕರ್‌ ಅಶ್ವತ್ಥ್‌ ಮಾತನಾಡಿ, ಮಾಯಾಬಜಾರ್‌ನಲ್ಲಿ ಎಸ್‌.ವಿ. ರಂಗರಾವ್‌ ಅವರು ಮಾಡಿರುವ ಪಾತ್ರವನ್ನು ಹೋಲುವ ಬೈರಿ ಅವರು ಒಳ್ಳೆಯ ಹೃದಯವಂತರು, ನಡತೆ, ಮಾತು ಎಲ್ಲವೂ ಚೆನ್ನ. ಹಿಂದೆ ಮೈಸೂರಿನ ಮಹಾರಾಜರು ನೀಡಿದಂತೆ ಈಗ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆ ಮೂಲಕ ಬೈರಿ ಅವರು ಜಯಭೇರಿ ಆಗಿದ್ದಾರೆ ಎಂದರು.

ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ನಾಗರಾಜ ವಿ. ಬೈರಿ ಅವರು, ಎಲ್ಲರ ಸಹಕಾರದಿಂದ ಇಷ್ಟೊಂದು ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗಿದೆ. ಸಮ್ಮೇಳನ ಯಶಸ್ವಿಗೆ ಪ್ರತಿಯೊಬ್ಬರೂ ಕಾರಣಕರ್ತರಾಗಿದ್ದಾರೆ ಎಂದು ವಿನಮ್ರತೆಯಿಂದ ಸ್ಮರಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ಕದಂಬ ರಂಗ ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಸ್ವಾಗತಿಸಿದರು. ಕಸಾಪ ಗೌ. ಕಾರ್ಯದರ್ಶಿ ಮ.ನ. ಲತಾ ಮೋಹನ್‌ ನಿರೂಪಿಸಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಮೂಗೂರು ನಂಜುಂಡಸ್ವಾಮಿ, ಎಡೆಯೂರು ಸಮೀವುಲ್ಲಾ, ಡೇವಿಡ್‌, ಸಿರಿಬಾಲು, ಕೆ.ಟಿ. ಹನುಮಂತು, ಎನ್‌. ಬೆಟ್ಟೇಗೌಡ, ಕಾರ್ಪೋರೇಷನ್‌ ಮಂಜುನಾಥ್‌, ಜಿ. ಪ್ರಕಾಶ್‌, ಟಿ. ತ್ಯಾಗರಾಜು, ಮೈಸೂರು ರಂಗನಾಥ್‌, ಹಲವಾರು ಗಾಯಕ- ಗಾಯಕಿಯರು ಇದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?