ರಾಮನಗರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕನಸು ನನಸಾಗಿಸಲು ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಶ್ರಮಿಸುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಗಾಂಧೀಜಿ ಅವರಿಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗೌರವ ಸಲ್ಲಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಜಾತಿ, ಮತ, ಧರ್ಮ, ಭಾಷೆ ಆಧಾರದ ಭೇದ-ಭಾವವಿಲ್ಲದೆ ದೇಶದ ವೈವಿಧ್ಯತೆ ಗೌರವಿಸಿ, ಅಖಂಡತೆಯನ್ನು ಪಾಲಿಸುತ್ತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕಾಗಿದೆ. ಎಲ್ಲರಿಗೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ‍್ಯ ದೊರಕಿಸುವ ಮೂಲಕ ರಾಜಕೀಯ ಸ್ವಾತಂತ್ರ‍್ಯ ಅಬಾಧಿತವಾಗುವಂತೆ ಶ್ರಮಿಸಬೇಕಾಗಿದೆ. ಈ ಗುರಿ ಸಾಧನೆಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ. ಸ್ವಸ್ಥ, ಸಮೃದ್ಧ, ಸಮ-ಸಮಾಜದ ನಾಡು ಕಟ್ಟೋಣ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿ ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಆರಿಸಿಕೊಂಡ ವಿಶ್ವದ ಏಕೈಕ ಹೋರಾಟಗಾರ. ಇಂದು ದೇಶಾದ್ಯಂತ ಪ್ರಚಲಿತವಿರುವ “ಆತ್ಮ-ನಿರ್ಭರ ಭಾರತ” ಎಂಬ ಪದವನ್ನು ಗಾಂಧೀಜಿಯವರು 100 ವರ್ಷಗಳ ಹಿಂದೆಯೇ “ಸ್ವದೇಶಿ” ಎಂಬುದಾಗಿ ವ್ಯಾಖ್ಯಾನ ಮಾಡಿ ಬ್ರಿಟೀಷ್‌ರ ವಿರುದ್ಧ ಆರ್ಥಿಕ ಕ್ರಾಂತಿ ಮಾಡಿದ್ದರು ಎಂದರು.ಶಾಂತಿ ಮಾರ್ಗದಿಂದ ಸ್ವಾತಂತ್ರ‍್ಯಗಳಿಸಿದ ಅಪರೂಪದ ಕೀರ್ತಿ ನಮ್ಮ ಭಾರತಕ್ಕೆ ಸಲ್ಲಬೇಕು. ಏಕೆಂದರೆ, ವಿಶ್ವದ ಕೈಗಾರಿಕಾ ಕ್ರಾಂತಿಯ ನಂತರ ಬ್ರಿಟನ್ ಅಗಾಧ ರೀತಿಯಲ್ಲಿ ಸನ್ನದ್ಧಗೊಂಡು, ತನ್ನ ಸೇನಾ ಬಲ ಹಾಗೂ ನೌಕಾ ಬಲದಿಂದಾಗಿ ಅದು ಶಕ್ತಿವಂತ ದೇಶವಾಗಿತ್ತು. ಬ್ರಿಟನ್ ಸೇನೆ ಭಾಗವಹಿಸಿದ ಯಾವುದೇ ಯುದ್ಧಗಳಲ್ಲಿ ಅದು ಸೋತಿದ್ದೇ ಇಲ್ಲ ಎಂಬಂತಿತ್ತು. ಗಾಂಧೀಜಿ ಹುಟ್ಟುವ ಮೊದಲೇ ಭಾರತದಲ್ಲಿ ನಡೆದ ಶಸಸ್ತ್ರ ಹೋರಾಟಗಳನ್ನು ಬ್ರಿಟಿಷರು ದಮನಿಸಿದ್ದರು. ಶಸಸ್ತ್ರ ಯುದ್ಧದ ಮೂಲಕ ಬ್ರಿಟಿಷರನ್ನು ಹಿಮ್ಮೆಟ್ಟಿಸಲು ವ್ಯವಸ್ಥೆಗಳು ಇರಲಿಲ್ಲ. ಗಾಂಧೀಜಿ ಒಬ್ಬ ಮಹಾನ್ ವಾಸ್ತವವಾದಿ. ಬ್ರಿಟಿಷರನ್ನು ಎದುರಿಸಲು ಅಹಿಂಸಾತ್ಮಕ ಹೋರಾಟ ಎಂಬ ಪ್ರಬಲ ಅಸ್ತ್ರವನ್ನು ಬಳಸಿದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನಕ್ಕೆ ರಾಮಲಿಂಗಾರೆಡ್ಡಿ ಗೌರವ ಸಲ್ಲಿಸಿದರು. ವಿವಿಧ ಶಾಲೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡಿತು. ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೂರು ಶಾಲಾ ತಂಡಗಳಿಗೆ ಪ್ರಥಮ ಬಹುಮಾನ ಹಾಗೂ ಪ್ರಶಸ್ತಿ ಪತ್ರ , ಅಂಗಾಗ ದಾನಕ್ಕೆ ಸಮ್ಮತಿಸಿದ ಕುಟುಂಬದವರನ್ನು ಸಚಿವ ರಾಮಲಿಂಗಾರೆಡ್ಡಿ ಸನ್ಮಾನಿಸಿದರು.
-------------------------------
1.ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಧ್ವಜಾರೋಹಣ ನೆರವೇರಿಸಿದರು.
---------------------------