ಕಾರ್ಖಾನೆಗಳು ಬಂದ್ ಹೋರಾಟಕ್ಕೆ ಜಿಟಿಡಿ ಬೆಂಬಲ

KannadaprabhaNewsNetwork |  
Published : Sep 16, 2025, 12:03 AM IST
41 | Kannada Prabha

ಸಾರಾಂಶ

Mysore-, three-day walking march from Kannadambé Rakshana Vedike

ಕನ್ನಡಪ್ರಭ ವಾರ್ತೆ ಮೈಸೂರುಖಾಸಗಿ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದಿದ್ದರೆ ಅಂತಹ ಕಾರ್ಖಾನೆಗಳನ್ನು ಬಂದ್ ಮಾಡಿಸಲಾಗುವುದು ಎಂಬ ಧ್ಯೇಯದೊಂದಿಗೆ ಹೋರಾಟ ಮತ್ತು ಕೈಗಾರಿಕೆಗಳಿಗೆ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥಾ ನಡೆಸುತ್ತಿರುವ ಕನ್ನಡಾಂಬೆ ರಕ್ಷಣಾ ವೇದಿಕೆಗೆ ನಮ್ಮ ಬೆಂಬಲವಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕನ್ನಡ ನಾಮಫಲಕ ಅಳವಡಿಕೆ, ಕನ್ನಡಿಗರಿಗೆ ಉದ್ಯೋಗ ನೀಡುವುದು, ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಕೈಗಾರಿಕೆಗಳಿಗೆ ಜಾಗೃತಿ ಮೂಡಿಸಲು, ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಏರ್ಪಡಿಸಿದ್ದ ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕಾರ್ಮಿಕರ ಎಲ್ಲ ರೀತಿಯ ಹಿತರಕ್ಷಣೆ, ಪರಿಸರ ರಕ್ಷಣೆ, ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಥಮ ಆದ್ಯತೆ ನೀಡುವುದು, ಕನ್ನಡದಲ್ಲಿ ವ್ಯವಹರಿಸುವುದು, ಕಾರ್ಮಿಕರ ಸುರಕ್ಷತೆ ಮತ್ತು ಅವರ ಉದ್ಯೋಗ ಭದ್ರತೆ ಬಗ್ಗೆ ಇಂದು ಯಾವ ಸಂಘಟನೆಗಳೂ ಮತ್ತು ಸರ್ಕಾರಗಳು ಮಾತನಾಡುತ್ತಿಲ್ಲ ಎಂದರು.ಅಲ್ಲದೇ ಕಾರ್ಮಿಕರ ಪರವಾಗಿ ಹೋರಾಟ ಮಾಡಲು ಯಾವುದೇ ಸಂಘಟನೆಗಳು ಮುಂದೆ ಬರುವುದಿಲ್ಲ. ಅಂತಹದರಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜಶೇಖರ್ ಅವರು ಕಾರ್ಮಿಕರ ಪರವಾಗಿ ದನಿ ಎತ್ತಿದ್ದಾರೆ. ಅವರ ದನಿಯನ್ನು ದುರ್ಬಲಗೊಳಿಸುವ ಶಕ್ತಿಗಳೂ ಕೂಡ ಒಂದು ಕಡೆ ಕೆಲಸ ಮಾಡುತ್ತಿವೆ. ಇಂತಹದರಲ್ಲಿ ಕಾರ್ಮಿಕರು ಕನ್ನಡಾಂಬೆ ರಕ್ಷಣಾ ವೇದಿಕೆಗೆ ಬೆಂಬಲ ನೀಡಿ, ಜಾಥಾದಲ್ಲಿ ಪಾಲ್ಗೊಂಡು ನಿಮ್ಮ ಹಕ್ಕನ್ನು ಪಡೆದುಕೊಳ್ಳಿ ಎಂದು ಅವರು ಸಲಹೆ ನೀಡಿದರು.ಕೈಗಾರಿಕೆಗಳು ಇಂದು ಕಾಯಂ ನೇಮಕಾತಿ ಮಾಡಿಕೊಳ್ಳುತ್ತಿಲ್ಲ, ಎಜೆನ್ಸಿ ಮೂಲಕ ಗುತ್ತಿಗೆ ಆಧಾರದಲ್ಲಿ ಕಡಿಮೆ ಸಂಬಳಕ್ಕೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ, ದೂರದ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಿಂದ ಕಾರ್ಮಿಕರನ್ನು ಕರೆಸಿಕೊಂಡು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿದ್ದಾರೆ. ಸ್ಥಳೀಯರಿಗೆ ಕೆಲಸವನ್ನೇ ನೀಡುತ್ತಿಲ್ಲ, ಇದರಿಂದ ಉದ್ಯೋಗವಿಲ್ಲದೆ ಸ್ಥಳೀಯರು ಸಾಕಷ್ಟು ಸಂಕಟದಲ್ಲಿದ್ದಾರೆ. ಕೈಗಾರಿಕೆಗಳಿಗೆ ಭೂಮಿ ನೀಡಿದವರಿಗೂ ಉದ್ಯೋಗ ನೀಡುತ್ತಿಲ್ಲ. ಸರೋಜಿನಿ ಮಹಿಷಿ ವರದಿಯೂ ಜಾರಿಗೆ ಬಂದಿಲ್ಲ, ಇವರ ಪರವಾಗಿ ಕನ್ನಡಾಂಬೆ ರಕ್ಷಣಾ ವೇದಿಕೆಯವರು ಹೋರಾಟಕ್ಕೆ ಇಳಿದಿರುವುದು ಶ್ಲಾಘನೀಯ, ಇವರನ್ನು ಬೆಂಬಲಿಸಿ ಎಂದರು.ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ. ರಾಜಶೇಖರ್ ಮಾತನಾಡಿ, ಕನ್ನಡ ನೆಲ, ಜಲ ಮತ್ತಿತರ ಸೌಲಭ್ಯ ಬಳಸಿಕೊಂಡಿರುವ ಕಾರ್ಖಾನೆಗಳು ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ. ಕಾರ್ಖಾನೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುತ್ತಿಲ್ಲ. ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಥಮ ಆದ್ಯತೆ ನೀಡುತ್ತಿಲ್ಲ. ಇದರ ವಿರುದ್ಧ ಕನ್ನಡಾಂಬೆ ರಕ್ಷಣಾ ವೇದಿಕೆ ಇಂದಿನಿಂದ ನಾಲ್ಕು ದಿನಗಳ ಕಾಲ ಹೂಟಗಳ್ಳಿ, ಕೂರ್ಗಳ್ಳಿ, ಹೆಬ್ಬಾಳ್ ಮತ್ತು ಮೇಟಗಳಿ ಕೈಗಾರಿಕಾ ಪ್ರದೇಶಗಳಲ್ಲಿರುವ ಕೈಗಾರಿಕೆಗಳಿಗೆ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥ ಹಮ್ಮಿಕೊಂಡಿದೆ ಎಂದರು.ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದ ಜಾಥ ಸಂಜೆಯವರೆಗೂ ನಡೆಯಿತು.ಈ ವೇಳೆ ಕನ್ನಡಾಂಬೆ ರಕ್ಷಣಾ ವೇದಿಕೆಯ ಡಿಪಿಕೆ ಪರಮೇಶ್, ರಾಜ್ಯ ಖಜಾಂಚಿ ನಂಜುಂಡ, ಮೈಸೂರು ಜಿಲ್ಲಾ ಅಧ್ಯಕ್ಷ ಸಂತೋಷ್, ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷೆ ಮಂಜುಳಾ, ಪದಾಧಿಕಾರಿಗಳಾದ ಸಿಂಧುವಳ್ಳಿ ಶಿವಕುಮಾರ್, ಮನುಗೌಡ, ಸೋಮಶೇಖರ, ಗೌತಮ್, ಅನುರಾಜ್ ಗೌಡ, ಕರಿಗೌಡ್ರು, ಸಿಂಗ್ರಿ ಗೌಡ, ಕುಮಾರ, ಶಿವಲಿಂಗಯ್ಯ ಮಂಜುನಾಥ್, ಸಿದ್ದೇಗೌಡ ಮೊದಲಾದವರು ಇದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ