ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಬುಧವಾರ ಉಡುಪಿಯಲ್ಲಿ ಬಿರುಸಿನ ಮತಪ್ರಚಾರ ನಡೆಸಿದರು. ನಗರದ ಆಭರಣ ಡೈಮಂಡ್ಸ್, ಮಲಬಾಲ್ ಗೋಲ್ಡ್, ಸಾಯಿರಾಧ ಟಿವಿಎಸ್ ಮೋಟಾರ್ಸ್, ಬಾಳಿಗಾ ಪಿಷ್ ನೆಟ್ ಇತ್ಯಾದಿ ಸಂಸ್ಥೆಗಳಿಗೆ ತೆರಳಿ ಮತ ಯಾಚಿಸಿದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರನ್ನು ಭೇಟಿಯಾದಷ್ಟು ಗೆಲವಿನ ಸಾಧ್ಯತೆಗಳು ಹೆಚ್ಚು ಕಂಡು ಬರುತ್ತಿದೆ ಎಂದು ಹೇಳಿದರು.
ಪ್ರಚಾರ ಆರಂಭದ ದಿನಗಳಲ್ಲಿ 60- 40 ಎಂಬ ಅಭಿಪ್ರಾಯ ಇತ್ತು, ಈಗ ಜನರು ಸಮಬಲದ ಭರವಸೆ ನೀಡಿದ್ದಾರೆ, ಜನರ ರಿಯಾಕ್ಷನ್ ನೋಡುವಾಗ ಖುಷಿಯಾಗುತ್ತದೆ, ಜನರ ಅಭಿಪ್ರಾಯ ಮತಕ್ಕೆ ಪರಿವರ್ತನೆ ಆಗಿ ಗೆಲ್ಲಲಿದ್ದೇನೆ ಎಂದರು.ಗ್ಯಾರೆಂಟಿ ಯೋಜನೆ ಬಗ್ಗೆ ಭರವಸೆ ಮೂಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಗೆ ಮುಂಚೆ ಗ್ಯಾರೆಂಟಿಗಳ ಬಗ್ಗೆ ಹೇಳಿದ್ದೆವು, ಆದರೆ ಕೊಟ್ಟಿರಲಿಲ್ಲ. ಹಾಗಾಗಿ ಈ ಭಾಗದ ಜನ ಅದನ್ನು ನಂಬಿರಲಿಲ್ಲ, ಈಗ ಸೌಲಭ್ಯಗಳು ಸಿಕ್ಕಿವೆ, ಹಾಗಾಗಿ ಮತ ಹಾಕುವ ಭರವಸೆ ನೀಡಿದ್ದಾರೆ ಎಂದರು.
ಉಡುಪಿ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು, ಗಾರ್ಮೆಂಟ್ ಇಂಡಸ್ಟ್ರಿ, ಮೆಡಿಕಲ್ ಕಾಲೇಜ್ ಬೇಕು, ಉದ್ಯೋಗ ನಿರ್ಮಾಣ ಮಾಡುವ ಕೈಗಾರಿಕೆಗಳು ಬೇಕು, ಜಿಲ್ಲೆಯಲ್ಲಿ ಐಟಿ ಮತ್ತು ಬ್ಯಾಂಕಿಂಗ್ ಕ್ಷೇತ್ರ ಅಭಿವೃದ್ಧಿಯಾಗಬೇಕು, ಕರಾವಳಿಯಲ್ಲಿ ಹುಟ್ಟಿದ ಬ್ಯಾಂಕುಗಳನ್ನು ಮರ್ಜ್ ಮಾಡಿದ್ದಾರೆ. ಮಕ್ಕಳಿಗೆ ಉದ್ಯೋಗ ಸಿಕ್ತಾ ಇಲ್ಲ, ಸ್ಥಳೀಯ ಉದ್ಯೋಗ ಸೃಷ್ಟಿಯಾಗಬೇಕು. ಇದೆಲ್ಲಾ ಸಂಸದನಾಗಿ ತಮ್ಮ ಆದ್ಯತೆಗಳಾಗಿವೆ ಎಂದರು.ಜಿಲ್ಲಾ ಕಾಂಗ್ರೆಸ್ ಕಾರ್ಯಾದ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕೃಷ್ಣಮೂರ್ತಿ ಆಚಾರ್ಯ, ಪ್ರಖ್ಯಾತ್ ಶೆಟ್ಟಿ ಮುಂತಾದವರು ಹೆಗ್ಡೆ ಜೊತೆಗಿದ್ದರು. -------------
ಅಡಕೆ ದರ ರು. 70 - 80 ಸಾವಿರಕ್ಕೆ ಏರಿತ್ತು...ಅಡಕೆಗೆ ರೋಗ ಬಂದಾಗ ಧಾರಣೆ 10,000 ಇಳಿದಿತ್ತು, ಈ ಬಗ್ಗೆ ನಾನು ಅಧಿಕಾರಿ, ಸಚಿವರ ಜೊತೆ ಮಾತನಾಡಿ ದರ ರು. 70 - 80 ಸಾವಿರದವರೆಗೆ ಹೋಗಿತ್ತು, ಇದಕ್ಕೆ ನನ್ನಲ್ಲಿ ದಾಖಲೆ ಇದೆ. ಆದರೆ ನೀವು ಮಾಡಿದ್ದಲ್ಲ, ಬಿಜೆಪಿ ಸರ್ಕಾರ ಮಾಡಿದ್ದು ಎಂದು ಸುದ್ದಿ ಹಬ್ಬಿಸಲಾಗುತ್ತಿದೆ
ಅಡಕೆ ಕ್ಯಾನ್ಸರ್ ಕಾರಕ ಎಂದು ಕಾಂಗ್ರೆಸ್ ಸರ್ಕಾರ ಇದ್ದಾಗ ಹೇಳಿದ್ದು ಎಂದೂ ಸುದ್ದಿ ಹಬ್ಬಿಸಲಾಗುತ್ತಿದೆ, ಆದರೆ ವಾಜಪೇಯಿ ಸರಕಾರ ಇದ್ದಾಗ ಆಗಿನ ಅಧಿಕಾರಿಗಳೇ ಹಾಗೇ ಬರೆದಿದ್ದರು. ಅಡಕೆಯ ಬಗ್ಗೆ ನಾನು ಮರು ಅಧ್ಯಯನಕ್ಕೆ ಪ್ರಯತ್ನಿಸಿದ್ದೆ. ಈ ಎಲ್ಲಾ ವಿಚಾರಗಳು ಶೃಂಗೇರಿ ಕಡೆ ಅಡಿಕೆ ಬೆಳೆಗಾರರಿಗೆ ಚೆನ್ನಾಗಿ ಗೊತ್ತಿದೆ ಎಂದು ಸುಳ್ಳು ಸುದ್ದಿಗೆ ಪ್ರತಿಕ್ರಿಯಿಸಿದರು.