- ಎಂ.ಎಸ್. ಪ್ರಸನ್ನ ಕುಮಾರ್ ಶ್ಲಾಘನೆ । "ಅಪರಂಜಿ " ಅಭಿನಂದನಾ ಗ್ರಂಥ ಬಿಡುಗಡೆ
ಕನ್ನಡಪ್ರಭ ವಾರ್ತೆ ಹರಿಹರ
ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಅಲ್ಪಾವಧಿಯಲ್ಲಿಯೇ ಬೆಂಗಳೂರು ವಿಭಾಗ ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಸ್ತಿ ಪಡೆದ ಯಾರಾದರೂ ಇದ್ದರೆ ಅದು ಹೊರಪೇಟಿ ಮಲ್ಲೇಶಪ್ಪ ಎಂದು ವಿಶ್ರಾಂತ ನಿರ್ದೇಶಕ ಎಂ.ಎಸ್. ಪ್ರಸನ್ನ ಕುಮಾರ್ ಎಂದು ಪ್ರಶಂಸಿಸಿದರು.ಹರಿಹರದ ಗುರುಭವನದಲ್ಲಿ ಹೊರಪೇಟಿ ಮಲ್ಲೇಶಪ್ಪ ಅವರಿಗೆ ಅವರ ಅಭಿನಂದನಾ ಬಳಗ ವತಿಯಿಂದ ಶನಿವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹರಿಹರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆಗಿದ್ದ ಸಂದರ್ಭ ಮಲ್ಲೇಶಪ್ಪ ಅಳವಡಿಸಿಕೊಂಡ ಅನೇಕ ಕಾರ್ಯಕ್ರಮಗಳು ರಾಜ್ಯಕ್ಕೆ ಮಾದರಿಯಾಗಿವೆ. ಅಂತಹ ಎಷ್ಟೋ ಕಾರ್ಯಕ್ರಮಗಳನ್ನು ಇಲಾಖೆ ರಾಜ್ಯಾದ್ಯಂತ ಜಾರಿಗೆ ತಂದಿದ್ದು ಹೆಮ್ಮೆಪಡುವ ವಿಷಯ ಎಂದರು.
ಇಂತಹ ಜನಪ್ರಿಯ, ಅರ್ಥಪೂರ್ಣ ಕಾರ್ಯಕ್ರಮಗಳ ಜಾರಿ ಮೂಲಕ ಉತ್ತಮ ಕೆಲಸವನ್ನು ನಿರ್ವಹಿಸಿದ ಮಲ್ಲೇಶಪ್ಪ ಉಪನಿರ್ದೇಶಕರಾಗಿ ಬಡ್ತಿ ಹೊಂದಿದರಲ್ಲದೇ, ಕಾಗಿನೆಲೆ ಹಾಗೂ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರಾಗಿಯೂ ಗಮನೀಯ ಕೆಲಸಗಳನ್ನು ನಿರ್ವಹಿಸಿದ್ದಾರೆ. ಕರ್ನಾಟಕ ಸರ್ಕಾರದ ಸಚಿವರ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಹಾಗೂ ವಿಶೇಷ ಕರ್ತವ್ಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.
"ಅಪರಂಜಿ " ಅಭಿನಂದನಾ ಹೊತ್ತಿಗೆಯನ್ನು ನಿವೃತ್ತ ಬಿಇಒ ಕೆ.ಸಿ. ಮಲ್ಲಿಕಾರ್ಜುನ್ ಬಿಡುಗಡೆ ಮಾಡಿದರು. ಹೊರಪೇಟಿ ಮಲ್ಲೇಶಪ್ಪ ಅವರು ಶಿಕ್ಷಕ ರೇವಣಸಿದ್ದಪ್ಪ ಅಂಗಡಿ ರಚಿಸಿದ ಪ್ಯಾಕೆಟ್ ಕ್ಯಾಲೆಂಡರನ್ನು ಬಿಡುಗಡೆ ಮಾಡಿದರು.
ಹರಿಹರದ ಹಾಲಿ ಶಿಕ್ಷಣಾಧಿಕಾರಿ ಡಿ.ದುರ್ಗಪ್ಪ ಅಧ್ಯಕ್ಷತೆ ವಹಿಸಿದ್ದರು. ಬಳಗದ ಸಂಚಾಲಕರಾದ ಎಸ್. ಎಚ್. ಹೂಗಾರ್, ಡಿ.ಎಂ. ಮಂಜುನಾಥಯ್ಯ, ಸದಸ್ಯರಾದ ಗದಿಗೆಪ್ಪ ವೈ. ಹಳೇಮನಿ, ಆರ್.ಆರ್. ಮಠ, ಕುಬೇಂದ್ರಪ್ಪ ಮೆಕ್ಕಪ್ಪನವರ್, ಅಶ್ಫಾಕ್ ಅಹಮದ್. ಬಿ.ತಿಪ್ಪೇಸ್ವಾಮಿ. ಸಿ.ಜಯಣ್ಣ ಕೊಕ್ಕನೂರು. ಎಸ್.ಹನುಮಂತಪ್ಪ, ಈಶಪ್ಪ ಬೂದಿಹಾಳ್. ಎನ್.ಡಿ.ಧನ್ಯಕುಮಾರ್, ಅಭಿಮಾನಿಗಳಾದ ವಿವೇಕಾನಂದ ಸ್ವಾಮಿ, ಸಿ.ಎನ್. ಹುಲಿಗೇಶ್, ಬಿ.ರೇವಣಸಿದ್ದಪ್ಪ, ಪೈಸಾ ನಾಗರಾಜ್, ಬಿ.ಮಗ್ದುಮ್, ಕೆ.ಬಿ. ರಾಜಶೇಖರ್ ಮುಂತಾದವರು ಭಾಗವಹಿಸಿದ್ದರು.
- - -
ಹರಿಹರ ನಗರದ ಗುರುಭವನದಲ್ಲಿ ಹೊರಪೇಟಿ ಮಲ್ಲೇಶಪ್ಪ ಅವರಮ್ಮಿ ಅಭಿನಂದಿಸಲಾಯಿತು.