ಹೊರಟ್ಟಿಯವರ ಜೀವಮಾನದ ಸಾಧನೆ ಬೆರಗುಗೊಳಿಸುವಂತದ್ದು: ತೋಂಟದ ಶ್ರೀಗಳು

KannadaprabhaNewsNetwork |  
Published : Jul 10, 2025, 01:46 AM IST
ಕಾರ್ಯಕ್ರಮದಲ್ಲಿ ವಿಪ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಿದರು. | Kannada Prabha

ಸಾರಾಂಶ

5 ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿದ್ದು, ವಿಪ ಸದಸ್ಯರಾಗಿ 45 ವರ್ಷಗಳನ್ನು ಪೂರೈಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರ ಜೀವಮಾನದ ಸಾಧನೆಗಳು ಬೆರಗುಗೊಳಿಸುವಂತದ್ದು. ಬಹುಶಃ ಇಂತಹ ಸಾಧನೆಯನ್ನು ದೇಶದ ರಾಜಕೀಯ ಇತಿಹಾಸದಲ್ಲಿ ಹಿಂದೆ ಯಾರೂ ಮಾಡಿಲ್ಲ, ಮುಂದೆಯೂ ಯಾರೂ ಮಾಡಲಾರರು ಎಂದು ಜ. ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

ಗದಗ: 5 ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿದ್ದು, ವಿಪ ಸದಸ್ಯರಾಗಿ 45 ವರ್ಷಗಳನ್ನು ಪೂರೈಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರ ಜೀವಮಾನದ ಸಾಧನೆಗಳು ಬೆರಗುಗೊಳಿಸುವಂತದ್ದು. ಬಹುಶಃ ಇಂತಹ ಸಾಧನೆಯನ್ನು ದೇಶದ ರಾಜಕೀಯ ಇತಿಹಾಸದಲ್ಲಿ ಹಿಂದೆ ಯಾರೂ ಮಾಡಿಲ್ಲ, ಮುಂದೆಯೂ ಯಾರೂ ಮಾಡಲಾರರು ಎಂದು ಜ. ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.ನಗರದ ಜ. ತೋಂಟದಾರ್ಯ ಸಂಸ್ಥಾನಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ 2753ನೇ ಶಿವಾನುಭವದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಯಡಹಳ್ಳಿ ಎಂಬ ಸಣ್ಣ ಗ್ರಾಮದಿಂದ ಬಂದ ಹೊರಟ್ಟಿಯವರು 8 ಬಾರಿ ಶಾಸಕರಾಗಿ, ಸಚಿವರಾಗಿ, ಸಭಾಪತಿಗಳಾಗಿ ಕಾರ್ಯನಿರ್ವಹಿಸುತ್ತಿರುವುದು ದೇಶದ ಇತಿಹಾಸದಲ್ಲಿ ಮೊದಲು ಹಾಗೂ ಏಕೈಕ ಕನ್ನಡಿಗ ಎಂಬ ಹೆಮ್ಮೆ ಸಹ ನಮಗಿದೆ ಎಂದರು.

ಶಿಕ್ಷಕರೊಬ್ಬರು ಇಷ್ಟೊಂದು ಜೀವಮಾನದ ಸಾಧನೆ ಮಾಡಿದ್ದು, ಶಿಕ್ಷಕ ಸಮೂಹಕ್ಕೆ ಗೌರವ ತಂದಿದೆ. ಶಿಕ್ಷಕರ ಪ್ರಾಣವೇ ಹೊರಟ್ಟಿಯವರಾಗಿದ್ದಾರೆ. ಸಾವಿರಾರು ಶಿಕ್ಷಕರ ಬದುಕಿಗೆ ಬೆಳಕು ತಂದು ಅವರ ಬದುಕನ್ನು ಹಸನು ಮಾಡಿದ್ದಾರೆ. ಇವರು ಶ್ರೀಮಠದೊಂದಿಗೆ ಕಳೆದ 5 ದಶಕಗಳಿಂದ ಒಡನಾಟವನ್ನು ಇಟ್ಟುಕೊಂಡು ಬಂದು ಹಿಂದಿನ ಶ್ರೀಗಳ ಆಶೀರ್ವಾದವಿಲ್ಲದೆ ಯಾವೊಂದು ಕೆಲಸ ಮಾಡಿದ ನಿದರ್ಶನವಿಲ್ಲ. ಇಂದಿಗೂ ಅದೇ ವಿಶ್ವಾಸ, ಪ್ರೀತಿ, ಗೌರವವನ್ನು ನಮ್ಮ ಜೊತೆ ಹಾಗೂ ಶ್ರೀಮಠದ ಜೊತೆ ಇಟ್ಟುಕೊಂಡು ಬಂದಿದ್ದಾರೆ ಎಂದರು.

ಪ್ರಾ. ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿ, ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯವರೆಗಿನ ಎಲ್ಲ ಶಿಕ್ಷಕರ ಹಿತ ಕಾಯ್ದುಕೊಂಡು ಬಂದವರು ಹೊರಟ್ಟಿಯವರು. ಅಲ್ಲದೇ ಶ್ರೀಮಠದ ಅಭಿವೃದ್ಧಿಯಲ್ಲಿಯೂ ಹೊರಟ್ಟಿಯವರ ಮಾರ್ಗದರ್ಶನ ಪಾತ್ರ ಇದೆ. ಹೀಗಾಗಿ ಶ್ರೀಮಠ ಅವರನ್ನು ಸದಾಕಾಲ ಗೌರವಿಸುತ್ತಾ ಬಂದಿದೆ ಎಂದರು.ಪ್ರಾ. ರಮೇಶ ಕಲ್ಲನಗೌಡ್ರ ಉಪನ್ಯಾಸ ನೀಡಿ, ವಚನ ಸಾಹಿತ್ಯ ಇಂದು ಜೀವಂತವಾಗಿ ಉಳಿದಿದ್ದರೆ ಅದಕ್ಕೆ ಕಾರಣೀಭೂತರು ಫ.ಗು.ಹಳಕಟ್ಟಿಯವರು ತಮ್ಮ ಎಲ್ಲ ಆಸ್ತಿಯನ್ನು ಮಾರಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ, ವಚನ ಸಾಹಿತ್ಯವನ್ನು ಮುದ್ರಣ ಮಾಡುವ ಮೂಲಕ ನಾಡಿಗೆ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೆ, ಪೂಜ್ಯ ಲಿಂಗಾನಂದರು ಕೂಡಾ ವಚನ ಸಾಹಿತ್ಯ, ಶರಣ ಸಾಹಿತ್ಯಕ್ಕೆ ಹೊಸತನ ತರುವ ಮೂಲಕ ಈ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಇವರು ಸದಾಕಾಲ ಸ್ಮರಣೀಯರೆಂದರು.

ಸನ್ಮಾನ ಸ್ವೀಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನನ್ನೆಲ್ಲ ಶ್ರೇಯಸ್ಸು ನಾನು ನಂಬಿಕೊಂಡು ಬಂದ ಶಿಕ್ಷಕರ ಸಮೂಹಕ್ಕೆ ಸಲ್ಲಬೇಕು. ನಾ ಇಂದು ಏನೇ ಆಗಿದ್ದರೂ ಅದಕ್ಕೆ ಕಾರಣ ಶಿಕ್ಷಕರು, ನನ್ನ ತಂದೆ-ತಾಯಿಯ ಆಶೀರ್ವಾದ, ಶ್ರೀಮಠದ ಸಹಕಾರದಿಂದ ಸಾಧ್ಯವಾಗಿದೆ. ತಮ್ಮ ಪ್ರೀತಿಯ ಸನ್ಮಾನವನ್ನು ಅತ್ಯಂತ ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆಂದರು.

ಇದೇ ಸಂದರ್ಭದಲ್ಲಿ ಶ್ರೀಮಠಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದ ಬಸವಣ್ಣನವರ ಅನುಭವ ಮಂಟಪದ ಅಪರೂಪದ ಭಾವಚಿತ್ರವನ್ನು ಅರ್ಪಿಸಿದರು. ಡಾ. ಬಸವರಾಜ ಧಾರವಾಡ ಮಾತನಾಡಿದರು.ಧರ್ಮಗ್ರಂಥ ಪಠಣವನ್ನು ಅಪೇಕ್ಷಾ ಎಸ್. ಹೊನಗಣ್ಣವರ, ವಚನ ಚಿಂತನೆಯನ್ನು ಸೃಷ್ಟಿ ವಿ.ಪೂಜಾರ ಮಾಡಿದರು. ದಾಸೋಹ ಸೇವೆಯನ್ನು ನಿವೃತ್ತ ಶಿಕ್ಷಕ ಮಹಾಂತೇಶ ಗಂಗಾಧರ ಹೂಗಾರ ಮತ್ತು ಕುಟುಂಬದವರು ಕೈ ಗೊಂಡಿದ್ದರು. ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ನಡೆಸಿಕೊಟ್ಟರು.

ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ರವಿ ದಂಡಿನ, ಉದ್ದಿಮೆದಾರ ಅಶೋಕ ಜೈನ, ಎಸ್.ಎಂ.ಅಗಡಿ, ಕೊಟ್ರೇಶ ಅಂಗಡಿ, ಎಸ್.ಎಸ್.ಗಡ್ಡದ, ಎಚ್.ಡಿ.ಪೂಜಾರ, ರವಿ ಕೊಣ್ಣೂರು, ಎಂ.ಎಚ್.ಪೂಜಾರ, ಎಸ್.ಜಿ. ಕೋಲ್ಮಿ, ಬಾಲಚಂದ್ರ ಭರಮಗೌಡರ, ಉಮೇಶ ಪುರದ, ವೀರಣ್ಣ ಗೋಟಡಕಿ, ಬಸವರಾಜ ಸಿ. ಕಾಡಪ್ಪನವರ, ಸೋಮಶೇಖರ ಪುರಾಣಿಕ, ಮಹೇಶ ಗಾಣಿಗೇರ, ನಾಗರಾಜ ಹಿರೇಮಠ, ಆಯ್.ಬಿ. ಬೆನಕೊಪ್ಪ, ಶಿವಾನಂದ ಫ.ಹೊಂಬಳ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.

PREV