ತಂಬಾಕು ಸೇವನೆಯಿಂದಲೇ ಹೆಚ್ಚಾದ ಭಯಾನಕ ರೋಗಗಳು

KannadaprabhaNewsNetwork |  
Published : Jul 23, 2024, 12:39 AM IST
ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಜಾಗೃತಿ ಮತ್ತು ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ತಂಬಾಕು ಸೇವನೆ ಪಿಡುಗು ಹೆಚ್ಚಾಗುತ್ತಿದ್ದು, ಬಾಯಿ ಹುಣ್ಣು, ಅನ್ನನಾಳ, ಶ್ವಾಸಕೊಶ, ಮೂತ್ರಕೋಶ, ಗಂಟಲು ಕ್ಯಾನ್ಸರ್ ನಂತಹ ಭಯಾನಕ ರೋಗಗಳು ತಂಬಾಕು ಸೇವನೆಯಿಂದಲೇ ಹೆಚ್ಚಾಗಿ ಬರುತ್ತಿವೆ. ಇದರ ಅರಿವು ಸಾಮಾನ್ಯ ಜನರಿಗೆ ಗೊತ್ತಿಲ್ಲ, ಗೊತ್ತಿದ್ದರೂ ಸಹ ನಿರ್ಲಕ್ಷ್ಯ ಮಾಡುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ವಿಜಯಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ಪರಶುರಾಮ ಹಿಟ್ನಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಇತ್ತೀಚಿನ ದಿನಗಳಲ್ಲಿ ತಂಬಾಕು ಸೇವನೆ ಪಿಡುಗು ಹೆಚ್ಚಾಗುತ್ತಿದ್ದು, ಬಾಯಿ ಹುಣ್ಣು, ಅನ್ನನಾಳ, ಶ್ವಾಸಕೊಶ, ಮೂತ್ರಕೋಶ, ಗಂಟಲು ಕ್ಯಾನ್ಸರ್ ನಂತಹ ಭಯಾನಕ ರೋಗಗಳು ತಂಬಾಕು ಸೇವನೆಯಿಂದಲೇ ಹೆಚ್ಚಾಗಿ ಬರುತ್ತಿವೆ. ಇದರ ಅರಿವು ಸಾಮಾನ್ಯ ಜನರಿಗೆ ಗೊತ್ತಿಲ್ಲ, ಗೊತ್ತಿದ್ದರೂ ಸಹ ನಿರ್ಲಕ್ಷ್ಯ ಮಾಡುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ವಿಜಯಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ಪರಶುರಾಮ ಹಿಟ್ನಳ್ಳಿ ಹೇಳಿದರು.

ರಾಜ್ಯ, ಜಿಲ್ಲಾ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಹಾಗೂ ಹೊನಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜುಮನಾಳ ಗ್ರಾಮ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ನಡೆದ ಪಿ.ಜಿ.ಡಿ.ಎಚ್.ಪಿ.ಇ ವಿಭಾಗದ ಮೇಲ್ವಿಚಾರಣೆ ಆಧಾರಿತ ಕ್ಷೇತ್ರ ತರಬೇತಿ 2024ರ ಅಡಿಯಲ್ಲಿ ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಜಾಗೃತಿ ಮತ್ತು ಆರೋಗ್ಯ ಉಚಿತ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿ ತಮ್ಮ ಜೀವನದಲ್ಲಿ ನಿಲುವು ಮತ್ತು ಸರಿಯಾದ ಜೀವನಶೈಲಿ ಬದಲಾವಣೆ ಮಾಡಿಕೊಂಡರೇ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.ಜುಮನಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮುಕ್ಕಣ್ಣ ನಾಯಕ ಮಾತನಾಡಿ, ಸಾರ್ವಜನಿಕ ಆರೋಗ್ಯ ಕುರಿತು ಹಲವಾರು ಯೋಜನೆಗಳು ಸರ್ಕಾರದಿಂದ ಲಭ್ಯವಿದ್ದು, ಆ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ವಿಶೇಷವಾಗಿ ಯುವಕರು, ಯುವತಿಯರು ಹೆಚ್ಚಾಗಿ ಭಾಗವಹಿಸಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಮಾಹಿತಿ ಪಡೆದುಕೊಂಡು ತಮ್ಮ ತಮ್ಮ ಮನೆಯ ಹಿರಿಯರಿಗೆ ಕಿರಿಯರಿಗೆ ಮಾಹಿತಿ ತಿಳಿಸಿಕೊಡಬೇಕು ಎಂದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ.ಕೊಲೂರ ಮಾತನಾಡಿ, ಯಾವುದೇ ಲಿಂಗ ಭೇದವಿಲ್ಲದೇ ಪುರುಷರು, ಮಹಿಳೆಯರು, ಯುವಕ, ಯುವತಿಯರು ಎಲ್ಲರಲ್ಲೂ ತಂಬಾಕು ಸೇವನೆ ಒಂದು ಚಟವಾಗಿದೆ. ಈ ಚಟದಿಂದ ಪಾರಾಗಲು ಆರೋಗ್ಯ ಇಲಾಖೆ ವತಿಯಿಂದ ಹಲವಾರು (ಐ.ಇ.ಸಿ.-ಬಿ.ಸಿ.ಸಿ) ಜಾಗೃತಿ, ಜ್ಞಾನ, ಅರಿವು ಮತ್ತು ವರ್ತನೆಗಳ ಬದಲಾವಣೆಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾಮಟ್ಟದಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ವಿಭಾಗದಿಂದ ಕರಪತ್ರಗಳು, ಬಿತ್ತಿಪತ್ರಗಳು, ಬೀದಿ ನಾಟಕ, ವಿವಿಧ ಜನಪದ ಕಲೆಗಳ ಮುಖಾಂತರ ಆರೋಗ್ಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಪಿ.ಜಿ.ಡಿ.ಎಚ್.ಪಿ.ಇ ವಿಭಾಗದ ಉಪನ್ಯಾಸಕ ಡಾ.ಮಂಜುನಾಥ.ಟಿ.ಎ ಮಾತನಾಡಿ, ಉಸಿರು ಜೀವನಕ್ಕೆ ಅವಶ್ಯಕ. ಉಸಿರಾಡುವ ಗಾಳಿ ಸ್ವಚ್ಛವಾಗಿರುವುದು ಅತ್ಯಂತ ಅವಶ್ಯಕವಾಗಿದೆ. ಆದರೆ, ಧೂಮಪಾನಿಗಳು ತಾವು ಕೆಡುವುದಲ್ಲದೆ ಧೂಮಪಾನ ಮಾಡದೇ ಇರುವ ಅಮಾಯಕ ಮಕ್ಕಳು, ಕುಟುಂಬಸ್ಥರು ತಂಬಾಕು ಹೊಗೆ ಮಿಶ್ರಿತ ಗಾಳಿ ಸೇವಿಸಲು ಪರೋಕ್ಷವಾಗಿ ಕಾರಣರಾಗಿದ್ದಾರೆ. ಆದ್ದರಿಂದ ಮಕ್ಕಳಲ್ಲೂ ಸಹ ಕ್ಯಾನ್ಸರ್‌ ಅಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.ಜಿಲ್ಲಾ ಉಪಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ಮಾತನಾಡಿ, ತಂಬಾಕಿನಲ್ಲಿರುವ ಸುಮಾರು 6 ಸಾವಿರ ರಸಾಯನಿಕಗಳು ಹಲವಾರು ಭಯಂಕರ ರೋಗಗಳಿಗೆ ಕಾರಣವಾಗಿವೆ. ಅದರಲ್ಲೂ ಕೂದಲು ಉದರುವುದು, ಕಣ್ಣಿನ ಪೊರೆ, ನರದೌರ್ಬಲ್ಯ, ದಂತಕ್ಷಯ, ಶ್ವಾಸಕೊಶ ಕ್ಯಾನ್ಸರ್, ಹೃದಯಾಘಾತ, ಹೊಟ್ಟೆ ಅಲ್ಸರ್, ಪಾರ್ಶ್ವವಾಯುದಂತಹ ಭಯಾನಕ ರೋಗಗಳು ಸಂಭವಿಸುತ್ತವೆ. ಧೂಮಪಾನಿಗಳಲ್ಲಿ ಕ್ಷಯರೋಗ ಬರುವ ಅಪಾಯ ಮೂರು ಪಟ್ಟು ಇತರರಿಗಿಂತ ಹೆಚ್ಚಿದೆ. ಅಂದರೆ ಮರಣ ಪ್ರಮಾಣ 3 ರಿಂದ 4 ಪಟ್ಟು ಹೆಚ್ಚಿದೆ ಎಂದು ಎಚ್ಚರಿಕೆ ಸಂದೇಶ ನೀಡಿದರು.ಕಾರ್ಯಕ್ರಮದಲ್ಲಿ ಜುಮನಾಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಫಿರ್ದೋಶ ಮೆಹಬೂಬಸಾಬ್‌, ಸದಸ್ಯರಾದ ಸುರೇಶ ಕೊಲಕಾರ, ದಿನೇಶ ಕೋರಿ, ಶಂಕರಪ್ಪ ಚಲವಾದಿ, ಎನ್.ಆರ್.ಬಾಗವಾನ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಶಶಿಕಲಾ ಹೊನಕಟ್ಟಿ, ಶ್ರೀಕಾಂತ ಪೂಜಾರಿ, ಸಮುದಾಯ ಆರೋಗ್ಯ ಅಧಿಕಾರಿ ಬಸವರಾಜ ಬಿರಾದಾರ, ಕೆ.ಸಿ.ಇಂಡಿಕರ, ಆಶಾ ಬಿದರಿ, ಪಂಚಾಯತಿ ಸದಸ್ಯರು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ