ಸಿಎಂ ಗಾದಿಗಾಗಿ ಕಾಂಗ್ರೆಸ್ ನಲ್ಲಿ ಕುದುರೆ ವ್ಯಾಪಾರ: ಬಿ.ವೈ.ವಿಜಯೇಂದ್ರ

KannadaprabhaNewsNetwork |  
Published : Jul 20, 2025, 01:18 AM IST
ಫೋಟೋ- ವಿಜು ಪ್ರೆಸಕಲಬುರಗಿಗೆ್‌ ಆಗಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಮಾಜಿ ಮೇಯರ್‌ ವಿಶಾಲ ಧರ್ಗಿ, ಒಬಿಸಿ ಮೋರ್ಚಾ ನಗರಾಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ್‌ ಸೇರಿದಂತೆ ಹಲವರು ಹೂವಿನ ಹಾರ ಹಾಕಿ ಸ್ವಾಗತಿಸಿದರು. ವಿಕಸಿತ ಭಾರತದ ಅಮೃತ ಕಾಲ, ಸೇವಾ ಸುಶಾಸನ, ಬಡವರ ಕಲ್ಯಾಣದ ಮೋದಿ ಸರಕಾರಕ್ಕೆ 11 ವರ್ಷದ ಅಭಿಯಾನದಲ್ಲಿ ಪಾಲ್ಗೊಳ್ಳಲು ವಿಜಯೇಂದ್ರ ಕಲಬುರಗಿಗೆ ಆಗಮಿಸಿದ್ದಾರೆ. | Kannada Prabha

ಸಾರಾಂಶ

ರಾಜ್ಯದಲ್ಲಿ ಮುಂದಿನ ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯದಲ್ಲಿ ಮುಂದಿನ ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ನಾನಾಗಬೇಕು ಎನ್ನುವ ಪೈಪೋಟಿ ನಡೆಯುತ್ತಿದೆ. ಸರ್ಕಾರದಲ್ಲಿ ಎಲ್ಲವೂ ಕೂಡ ರೇಟ್ ಫಿಕ್ಸಿಂಗ್ ನಡೆಯುತ್ತಿದೆ. ಹಾಗಾಗಿ, ಸಿದ್ದರಾಮಯ್ಯ ಅವರ ಕುರ್ಚಿ ಯಾವಾಗ ಅಲ್ಲಾಡುತ್ತದೋ ಯಾವಾಗ ಅವರಿಗೆ ಅಸ್ಥಿರತೆ ಕಾಡುತ್ತದೋ ಅವಾಗೆಲ್ಲಾ ಅವರು ಸಮಾವೇಶ ಮಾಡಿಕೊಂಡು ಬಂದಿದ್ದಾರೆ. ಈಗ ಮೈಸೂರಿನಲ್ಲೂ ಕಾಂಗ್ರೆಸ್ ಸಮಾವೇಶ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಅವರ ಕುರ್ಚಿ ಯಾವಾಗ ಅಲ್ಲಾಡುತ್ತದೋ ಯಾವಾಗ ಅವರಿಗೆ ಅಸ್ಥಿರತೆ ಕಾಡುತ್ತದೋ ಅವಾಗೆಲ್ಲಾ ಅವರು ಸಮಾವೇಶ ಮಾಡಿಕೊಂಡು ಬಂದಿದ್ದಾರೆ, ಸಿದ್ದರಾಮಯ್ಯ ಅಂದ್ರೆ ಸಮಾವೇಶ, ಸಮಾವೇಶ ಅಂದ್ರೆ ಸಿದ್ದರಾಮಯ್ಯ ಆಗಿದೆ. ಅವರು ತಮ್ಮ ರಾಜಕೀಯ ಅಸ್ಥಿತ್ವಕ್ಕಾಗಿ ಅಹಿಂದ ಸಮಾಜವನ್ನು ಮುಂದೆ ಇಟ್ಟುಕೊಂಡು ಹೈಕಮಾಂಡ್ ಗೆ ಬೆದರಿಸುವ ಕುತಂತ್ರ ಮಾಡು‌ತ್ತಿದ್ದಾರೆ. ಕಳೆದ ಎರಡೂವರೆ ವರ್ಷದಲ್ಲಿ ಸಿದ್ದರಾಮಯ್ಯ ಸರ್ಕಾರದ ಸಾಧನೆ ಶೂನ್ಯ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದ ಸಾಧನೆ ನಿಜವೇ ಆಗಿದ್ದರೆ ರಣದೀಪ್ ಸುರ್ಜೆವಾಲ ಅವರು ಪದೇ ಪದೇ ಶಾಸಕರ ಅಸಮಾಧಾನ ಹೋಗಲಾಡಿಸುವ ಪ್ರಮೇಯ ಇರುತ್ತಿರಲಿಲ್ಲ. ಶಾಸಕರ ಅಸಮಾಧಾನ ಎಷ್ಟಿದೆ ಎಂದು ಅರ್ಥ ಮಾಡಿಕೊಳ್ಳಲು ಮತ್ತು ಸಿಎಂ ಬದಲಾವಣೆ ಆದರೆ ಯಾರನ್ನು ಮಾಡಬೇಕು ಎನ್ನುವ ಬಗ್ಗೆ ಶಾಸಕರ ಮನಸ್ಥಿತಿ ಅರ್ಥ ಮಾಡಿಕೊಳ್ಳಲು ಸುರ್ಜೆವಾಲಾ ಮೇಲಿಂದ ಮೇಲೆ ರಾಜ್ಯಕ್ಕೆ ಬರುತ್ತಿದ್ದಾರೆ ಎಂದರು.

ಐದು ವರ್ಷ ನಾನೇ ಸಿಎಂ ಅಂತ ಸಿದ್ದರಾಮಯ್ಯ ಅವರು ಹೆಮ್ಮೆಯಿಂದ ಹೇಳಿದ್ದಲ್ಲ, ಬದಲಾಗಿ ಹಾಗೆ ಹೇಳುವ ಮೂಲಕ ಅವರು ಹೈಕಮಾಂಡ್ ಗೆ ನೇರ ಸವಾಲು ಹಾಕಿದ್ದಾರೆ. ರಾಹುಲ್ ಗಾಂಧಿ ಈ ಹಿಂದೆಲ್ಲಾ ಸಿದ್ದರಾಮಯ್ಯ ಅವರಿಗೆ ಬಹಳ ಪ್ರಾಮುಖ್ಯತೆ ಕೊಡುತ್ತಿದ್ದರು. ಆದರೆ, ಮೊನ್ನೆ ದೆಹಲಿಗೆ ಹೋದ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಅಪಾಯಿಂಟಮೆಂಟ್ ಸಹ ಕೊಡಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಇದೇ ಕನ್ನಡಿ ಎಂದರು.

ದಲಿತರಿಗೆ ಸಿಎಂ ಕುರ್ಚಿ ನೀಡಬೇಕು ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಹೇಳಿದ್ರೆ ಸಿದ್ದರಾಮಯ್ಯ ಅವರಿಗೆ ಕೋಪ ಬರುತ್ತದೆ.‌ ಜಿ. ಪರಮೇಶ್ವರರಿಗೆ ಅನ್ಯಾಯ ಮಾಡಿದರು. ಈಗಾಗಲೇ ಜಿ.ಪರಮೇಶ್ವರ ಅವರಿಗೆ ಹೇಗೆ ಅನ್ಯಾಯ ಆಗಿದೆ ಅಂತ ಚರ್ಚೆ ಆಗಿದೆ ಎಂದರು.

ಎರಡು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರನ್ನು ಬೆದರಿಸುವ ಕೆಲಸ ಮಾಡುತ್ತಿದೆ. ದಕ್ಷಿಣಕನ್ನಡದಲ್ಲಿ ನಮ್ಮ ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸೋ ಪ್ರಯತ್ನ ಮಾಡಿದ್ದರೂ ಅದು ಸಫಲವಾಗಲಿಲ್ಲ. ನಂತರ ಭರತ್ ಶೆಟ್ಟಿ ಮೇಲೆ ಎಫ್ ಐಆರ್ ಮಾಡಿದ್ರು. ಇದೇ ರೀತಿ ಬೇರೆ ಬೇರೆ ಶಾಸಕರ ಮೇಲೆ ಎಫ್ಐಆರ್ ಮಾಡಿ ಹೆದರಿಸುವ ಕೆಲಸ ಮಾಡ್ತಿದ್ದಾರೆ.

ಹಿಂದುಳಿದ ನಾಯಕ ಭೈರತಿ ಬಸವರಾಜ ಅವರನ್ನ ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ. ಬಸವರಾಜ ಅವರು ತಮ್ಮದೇನು ತಪ್ಪಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ, ದೂರು ಕೊಟ್ಟ ಆ ತಾಯಿಯೇ ಭೈರತಿ ಹೆಸರನ್ನೇ ಹೇಳಿಲ್ಲ ಎಂದಿದ್ದಾರೆ.

ಸಂಘಟನಾತ್ಮಕ ಸಭೆ‌: ಕಲಬುರಗಿ ವಿಭಾಗದ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳ ಸಂಘಟನಾತ್ಮಕ ಸಭೆ‌ ಮಾಡುತ್ತಿದ್ದೇವೆ, ಈ ಮೂರು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಪಕ್ಷ ಬಲಪಡಿಸಲು ಸಭೆ, ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತಿ, ತಾಪಂ ಚುನಾವಣೆಗಳು ಬರಲಿವೆ. ಪಕ್ಷ ಬಲಪಡಿಸಲು ಮುಖಂಡರು, ಕಾರ್ಯಕರ್ತರ ಸಭೆ ಮಾಡುತ್ತಿದ್ದೇವೆ.

ಕಲಬುರಗಿ ಸೇರಿ ಮೂರು ಜಿಲ್ಲೆಗಳನ್ನೊಳಗೊಂಡು ಬಿಜೆಪಿ ಸಂಘಟನಾತ್ಮಕ ಸಭೆ ಜೊತೆಗೆ ಮೋದಿ ಸರ್ಕಾರದ 11 ವರ್ಷಗಳ ಸಾಧನೆ ಬಗ್ಗೆಯೂ ಸಂವಾದ ಮಾಡುತ್ತಿದ್ದೇವೆ ಎಂದರು. ಶಾಸಕ ಬಸವರಾಜ ಮತ್ತಿಮಡು, ಮಾಜಿ ಸಚಿವ ಬಾಬುರಾವ್ ಚವ್ಹಣ, ಚಂದು ಪಾಟೀಲ್ ಇದ್ದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರೆಂಟಿ ಯೋಜನೆಗಳಿಗೆ ಹಣ ಕ್ರೂಢಿಕರಿಸಲು ಆಗುತ್ತಿಲ್ಲ

ಇದೇ ನೇಪದಲ್ಲಿ ತೆರಿಗೆ ಇಲಾಖೆ ಮೂಲಕ ಬೀದಿ ವ್ಯಾಪಾರಿಗಳಿಗೆ ನೋಟಿಸ್ ಕೊಡ್ತಿದ್ದಾರೆ, ಆ ಮೂಲಕ ಬೀದಿ ವ್ಯಾಪಾರಿಗಳಿಗೆ ಹೆದರಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ದೇಶದ ಯಾವುದೇ ರಾಜ್ಯದಲ್ಲಿ ಈ ರೀತಿಯ ಬೆಳವಣಿಗೆ ಆಗಿಲ್ಲ. ಕರ್ನಾಟಕದಲ್ಲಿ ಮಾತ್ರ ಗ್ಯಾರೆಂಟಿ ಗಳಿಗೆ ಹಣ ಹೊಂದಿಸಲು ಆಗದೆ ಈ ರೀತಿ ಮಾಡುತ್ತಿದ್ದಾರೆ. ಇದನ್ನೆ ನೇಪ ಮಾಡಿಕೊಂಡು ಮುಖ್ಯಮಂತ್ರಿ ಆದೇಶದ ಮೇರೆಗೆ ಸಣ್ಣ ಸಣ್ಣ ವ್ಯಾಪಾರಿಗಳು,ಚ ಬೀದಿ ವ್ಯಾಪಾರಿಗಳನ್ನ ಬೆದರಿಸುವ ಕೆಲಸ ಆಗುತ್ತಿದೆ ಎಂದು ವಿಜಯೇಂದ್ರ ದೂರಿದರು.

ಅನುದಾನದ ಕಪಟ ನಾಟಕ: ಕಾಂಗ್ರೆಸ್ ಶಾಸಕರಿಗೆ ಐವತ್ತು ಕೋಟಿ ರೂಪಾಯಿ ಅನುದಾನ ನೀಡಿರುವ ವಿಚಾರವಾಗಿ ಹೇಳಿಕೆ ನೀಡಿದ ವಿಜಯೇಂದ್ರ , ಸಿಎಂ ಈ ವಿಚಾರದಲ್ಲಿ ಬಹಳ ಕೃಪೆ ತೋರಿಸಿದ್ದಾರೆ . ಅನುದಾನ, ಅಭಿವೃದ್ದಿ ಇಲ್ಲದಕ್ಕಾಗಿ ಕಾಂಗ್ರೆಸ್ ಶಾಸಕರಿಗೂ ಜನ ಛೀಮಾರಿ ಹಾಕ್ತಿದಾರೆ. ಎರಡುವರೆ ವರ್ಷ ಆಯ್ತು ನಮಗೆ ಬಿಡಿಗಾಸು ನೀಡುತ್ತಿಲ್ಲ ಅಂತ ಸಿಎಂ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ. ಇದೀಗ ಸಿಎಂ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಅನುದಾನದ ಕಪಟ ನಾಟಕ ಮಾಡುತ್ತಿದ್ದಾರೆಂದು ಟೀಕಿಸಿದರು.

50 ಕೋಟಿ ಬಿಡುಗಡೆಯ ಬಗ್ಗೆ ಸಿಎಂ ಏನೋ ಮಾತನಾಡಿದ್ದಾರೆ, ಆದರೆ ಯಾವಾಗ ಬಿಡುಗಡೆ ಆಗುತ್ತೆ ? ಯಾವಾಗ ಶಾಸಕರ ಕೈ ಸೇರುತ್ತೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಆಡಳಿತ ಪಕ್ಷದ ಶಾಸಕರ ಕಣ್ಣಿಗೆ ಬೆಣ್ಣೆ, ನಮ್ಮ ಪಕ್ಷದ ಶಾಸಕರ ಕಣ್ಣಿಗೆ ಸುಣ್ಣ ಹಚ್ಚೋದು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆಂದು ತಿವಿದರು.

PREV

Latest Stories

ಸಂಕಷ್ಟಗಳಿವೆ ಆದರೆ ಸೇವಾ ಸಂತೃಪ್ತಿ ನಮಗಿದೆ: ದಶರಥ ಸಾವೂರ
ರೈತರನ್ನು ಸ್ಮರಿಸುವ, ನೋವಿಗೆ ಸ್ಪಂದಿಸುವ ಕಾರ್ಯವಾಗಲಿ
ಮಳೆಯ ರಭಸಕ್ಕೆ ಮನೆಗಳಿಗೆ ನುಗ್ಗಿದ ನೀರು: ಪರಿಶೀಲನೆ