ವರುಣನ ಅಬ್ಬರಕ್ಕೆ ನೆಲಕಚ್ಚಿದ ತೋಟಗಾರಿಕಾ ಬೆಳೆ

KannadaprabhaNewsNetwork |  
Published : May 20, 2026, 01:00 AM IST
ಮುಂಗಾರು ಪೂರ್ವ ಸುರಿದ ಗಾಳಿ ಮಳೆಗೆ ಬಾಳೆ ನೆಲಕ್ಕಚ್ಚಿರುವುದು. | Kannada Prabha

ಸಾರಾಂಶ

ಕಳಸಾಪುರ ಗ್ರಾಮದಲ್ಲಿ ಭಾರಿ ಗಾಳಿ ಮಳೆಯ ಆರ್ಭಟಕ್ಕೆ ಲಕ್ಷಾಂತರ ರುಪಾಯಿ ವೆಚ್ಚದ ಬಾಳೆ ತೋಟ ಸಂಪೂರ್ಣ ಸರ್ವನಾಶವಾಗಿದೆ.

​ಗದಗ: ಹತ್ತಾರು ಕನಸುಗಳನ್ನು ಹೊತ್ತು ಹಗಲಿರುಳು ಬೆವರು ಹರಿಸಿ ಬೆಳೆದಿದ್ದ ಬಂಗಾರದಂಥ ತೋಟಗಾರಿಕಾ ಬೆಳೆಗಳು ಏಕಾಏಕಿ ಸುರಿದ ಭಾರೀ ಬಿರುಗಾಳಿ ಸಹಿತ ಮಳೆಗೆ ಸಂಪೂರ್ಣ ನಾಶವಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಜಿಲ್ಲೆಯ ರೈತ ಸಮುದಾಯ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಭಾರಿ ಗಾಳಿ ಮಳೆಯ ಆರ್ಭಟಕ್ಕೆ ಲಕ್ಷಾಂತರ ರುಪಾಯಿ ವೆಚ್ಚದ ಬಾಳೆ ತೋಟ ಸಂಪೂರ್ಣ ಸರ್ವನಾಶವಾಗಿದೆ. ಗ್ರಾಮದ ರೈತ ಸಹೋದರರಾದ ನಜೀರ್ ಅಹ್ಮದ್ ಮತ್ತು ಶೌಕತ್ ಅಲಿ ಪೆಂಡಾರಿ ಎಂಬವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಸುಮಾರು ₹5 ಲಕ್ಷ ಖರ್ಚು ಮಾಡಿ, ಮೊದಲ ಬಾರಿಗೆ ಭರ್ಜರಿ ಬಾಳೆ ಬೆಳೆದಿದ್ದರು. ​ಇನ್ನೇನು ಕಟಾವಿಗೆ ಬಂದು ₹8ರಿಂದ ₹10 ಲಕ್ಷ ಆದಾಯ ತಂದುಕೊಡಬೇಕಾಗಿದ್ದ ದೊಡ್ಡ ದೊಡ್ಡ ಬಾಳೆ ಗೊನೆಗಳು ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಇಡೀ ತೋಟದ ತುಂಬೆಲ್ಲ ನೆಲಕಚ್ಚಿವೆ. ​ನಲುಗಿದ ರೈತರ ಬದುಕು: ​ಇದು ಕೇವಲ ಕಳಸಾಪುರ ಗ್ರಾಮದ ರೈತರ ಸಮಸ್ಯೆ ಮಾತ್ರವಲ್ಲ, ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ಜಿಲ್ಲಾದ್ಯಂತ ರೈತರ ಬದುಕು ನಲುಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೆಳೆದಿದ್ದ ವೀಳ್ಯೆದೆಲೆ ತೋಟ, ಪಪ್ಪಾಯಿ ಹಾಗೂ ಹಸಿ ಮೆಣಸಿನಕಾಯಿ ಬೆಳೆಗಳು ಗಾಳಿಗೆ ಸಿಲುಕಿ ನೆಲಸಮವಾಗಿವೆ. ರೈತರಿಗೆ ದೊಡ್ಡ ಆಸರೆಯಾಗಬೇಕಿದ್ದ ದಾಳಿಂಬೆ ಮತ್ತು ದ್ರಾಕ್ಷಿ ತೋಟಗಳು ಭಾರಿ ಮಳೆಗೆ ತುತ್ತಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.ಬೆಳೆಸಾಲ ಮಾಡಿ, ರಾತ್ರಿ ಹಗಲು ಕಷ್ಟಪಟ್ಟು ಬೆಳೆ ಬೆಳೆದಿದ್ದೆವು. ಆದರೆ ಪ್ರಕೃತಿಯ ವಿಕೋಪಕ್ಕೆ ಎಲ್ಲವೂ ಕೊಚ್ಚಿಹೋಗಿದೆ. ₹8ರಿಂದ ₹10 ಲಕ್ಷ ಬೆಲೆಬಾಳುವ ಬೆಳೆಯೆಲ್ಲ ಸಂಪೂರ್ಣ ಕೊಚ್ಚಿ ಹೋಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಕಳಸಾಪುರ ಗ್ರಾಮದ ರೈತ ನಜೀರ್ ಅಹ್ಮದ‌ ಪೆಂಡಾರಿ ತಿಳಿಸಿದರು.

ಅನ್ನದಾತನ ಕೈ ಹಿಡಿಯಬೇಕು: ​ಪ್ರಕೃತಿಯ ಮುನಿಸಿಗೆ ತುತ್ತಾಗಿ ಬೀದಿಗೆ ಬಿದ್ದಿರುವ ಜಿಲ್ಲೆಯ ರೈತರಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಬೇಕು. ಹಾನಿಯಾದ ಬಾಳೆ ಸೇರಿದಂತೆ ಇತರೆ ಎಲ್ಲ ಬೆಳೆಗಳಿಗೆ ಸೂಕ್ತವಾದ ವೈಜ್ಞಾನಿಕ ಪರಿಹಾರವನ್ನು ಶೀಘ್ರವಾಗಿ ವಿತರಿಸಿ ಅನ್ನದಾತನ ಕೈ ಹಿಡಿಯಬೇಕು ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಮೃತ ೨.೦ ಕುಡಿಯುವ ನೀರಿನ ಕಾಮಗಾರಿ ಅಧ್ವಾನ
ಸ್ಥಳೀಯ ಕಾಂಗ್ರೆಸ್‌ ಮುಖಂಡರ ಕಡೆಗಣನೆ: ಶ್ರೀನಾಥ ಆಕ್ರೋಶ