ಮೇಕೆದಾಟು ಯೋಜನೆಗೆ ತಮಿಳುನಾಡು ರೈತರಿಂದ ವಿರೋಧ

KannadaprabhaNewsNetwork | Updated : Oct 23 2024, 12:39 AM IST

ಸಾರಾಂಶ

ಮೇಕೆದಾಟು ಯೋಜನೆಯಿಂದ ಸಂಗಮ ಸ್ಥಳವು ಸಂಪೂರ್ಣ ಮುಳಗಡೆ

ಕನ್ನಡಪ್ರಭ ವಾರ್ತೆ ಮೈಸೂರುಕಾವೇರಿ ಅಚ್ಚುಕಟ್ಟು ಭಾಗದ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಕೇರಳ ರಾಜ್ಯಗಳ ರೈತ ಮುಖಂಡರ ಕಾವೇರಿ ಸಮನ್ವಯ ಸಭೆಯಲ್ಲಿ ಮೇಕೆದಾಟು ಯೋಜನೆಗೆ ತಮಿಳುನಾಡು ರೈತರಿಂದ ವಿರೋಧ ವ್ಯಕ್ತಪಡಿಸಿದರು.ನಗರದ ತೋಟಗಾರಿಕೆ ಇಲಾಖೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾವೇರಿ ಕುಟುಂಬ ಸಮನ್ವಯ ಸಭೆಯಲ್ಲಿ ತಮಿಳುನಾಡು ಹಿರಿಯ ರೈತ ಮುಖಂಡ ಪಾಂಡಿಯನ್ ಮಾತನಾಡಿ, ಬೆಂಗಳೂರಿಗೆ ಕುಡಿಯುವ ನೀರು ಕಲ್ಪಿಸುವ ಉದ್ದೇಶ ಮೇಕೆದಾಟು ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ, ತಮಿಳುನಾಡಿನ ರೈತರ ಬಗ್ಗೆಯೂ ನೀವು ಯೋಚಿಸಬೇಕಲ್ಲವೆ ಎಂದು ಪ್ರಶ್ನಿಸಿದರು.ಮೇಕೆದಾಟು ಯೋಜನೆಯಿಂದ ಸಂಗಮ ಸ್ಥಳವು ಸಂಪೂರ್ಣ ಮುಳಗಡೆ ಆಲಿದೆ. ಇದರಿಂದ ಅರಣ್ಯ ನಾಶದ ಜೊತೆಗೆ ಅಲ್ಲಿನ ಅಕ್ಕಪಕ್ಕದ ಹಳ್ಳಿಗಳಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕಾವೇರಿ ಜಲಾನಯನ ಪ್ರದೇಶವನ್ನು ಅವಲಂಬಿಸಿ ಕೃಷಿ ಚಟುವಟಿಕೆಗಳು ನಡೆಸುತ್ತಿರುವ ತಮಿಳುನಾಡಿನ ರೈತರಿಗೆ ನೀರಿನ ಅಭಾವ ಎದುರಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ತಮಿಳುನಾಡಿನ ಐದು ಜಿಲ್ಲೆಗಳ ಅಧಿಕ ರೈತರು 25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಅವಲಂಬಿಸಿ ಬದುಕುತ್ತಿದ್ದಾರೆ. 1 ಕೋಟಿ ಜನರಿಗೆ ಕಾವೇರಿಯೇ ಜೀವನಾಡಿಯಾಗಿದೆ. ಹೀಗಾಗಿ ಮೇಕೆದಾಟು ಯೋಜನೆಯನ್ನು ಕೈಬಿಟ್ಟು, ಅಲ್ಲಿಂದ 40 ಕಿ.ಮೀ. ದೂರದಲ್ಲಿರುವ ಪ್ರದೇಶದಲ್ಲಿ ಅಣೆಕಟ್ಟೆ ನಿರ್ಮಿಸಿದರೆ ಎರಡು ರಾಜ್ಯದ ರೈತರಿಗೂ ಅನುಕೂಲವಾಗಲಿದೆ ಎಂದರು. ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ ಶೇಖರಿಸಿದ ನೀರನ್ನು ಸಮುದ್ರಕ್ಕೆ ಹರಿಸದಂತೆ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸುತ್ತಿದ್ದೇವೆ. ಮೇಕೆದಾಟು ಯೋಜನೆ ಮುಂದಿಟ್ಟು ವಿವಾದ ಸೃಷ್ಟಿಸಿ ರೈತರಲ್ಲಿ ಜಗಳ ಉಂಟು ಮಾಡಲು ಯತ್ನಿಸುತ್ತಿವೆ. ಹೀಗಾಗಿ, ಸರ್ಕಾರಗಳ ಮಾತಿಗೆ ರೈತರು ಕಿವಿಗೊಡಬಾರದು. ತಮಿಳುನಾಡಿನ ಬಗ್ಗೆಯೂ ನೀವು ಯೋಚಿಸಬೇಕು ಎಂದು ಅವರು ಹೇಳಿದರು. ಜೀವ ವಿರೋಧಿ ನಿಲುವಲ್ಲವೇರೈತ ಮುಖಂಡ ಕೆ. ಬೋರಯ್ಯ ಮಾತನಾಡಿ, ಕರ್ನಾಟಕ ರಾಜ್ಯ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ ಮೇಕೆದಾಟು ಯೋಜನೆ ರೂಪಿಸಿದ್ದು, ನಂತರ ಕೃಷಿಗೆ ಆದ್ಯತೆ ನೀಡುತ್ತಿದೆ. ಆದ್ದರಿಂದ ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಸಕಾರಾತ್ಮಕ ಪ್ರತಿಕ್ರಿಯೆ ನೀಡಬೇಕು ಎಂದು ಮನವಿ ಮಾಡಿದರು.ಗ್ರೌಂಡ್ ಲೆವಲ್ ವಾಟರ್ ನಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಮೆಟ್ಟೂರು ಡ್ಯಾಂನಲ್ಲಿ 164 ಅಡಿ ಗ್ರೌಂಡ್ ಲೆವಲ್ ವಾಟರ್ ಇದೆ ಎಂದು ವಿಶ್ವಸಂಸ್ಥೆಯೇ ಹೇಳಿದೆ. ಹೀಗಿದ್ದರೂ ಕರ್ನಾಟಕದಲ್ಲಿ ನೀರು ಇಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸಬೇಕು ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಕುಡಿಯುವ ನೀರಿನ ಆದ್ಯತೆಯನ್ನು ತಮಿಳುನಾಡು ರೈತರು ಪರಿಗಣಿಸದಿರುವುದು ಜೀವ ವಿರೋಧಿ ನಿಲುವಲ್ಲವೇ ಎಂದು ಅವರು ಪ್ರಶ್ನಿಸಿದರು.ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ, ಚೆನ್ನೈನ ಎಂಐಡಿಎ ಮುಖ್ಯಸ್ಥ ಡಾ. ಜನಕರಾಜ್, ತಮಿಳುನಾಡಿನ ರೈತ ಮುಖಂಡರಾದ ರಾಮನಗೌಂಡರ್, ಸುಧಾ ಧರ್ಮಲಿಂಗಂ, ಪಾಂಡಿಚೇರಿಯ ಸೋಮುಪಿಳ್ಳೈ, ಕೇರಳದ ಕೆ.ವಿ. ಬಿಜು, ಬಿನಯ್ ಥಾಮಸ್, ರೈತ ಮುಖಂಡರಾದ ಪ್ರೊ.ಕೆ.ಸಿ. ಬಸವರಾಜ್, ಪ್ರೊ. ಶಿವಲಿಂಗಯ್ಯ, ಸುನಂದಾ ಜಯರಾಮ್, ನದೀಮ್, ಗಜೇಂದ್ರ, ಹೊನ್ನೂರು ಪ್ರಕಾಶ್, ನಾಗಾರ್ಜುನ್, ಧರ್ಮರಾಜ್, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಸುರೇಶಗೌಡ, ಮಹೇಶ, ನೀಲಕಂಠಪ್ಪ, ಮಂಜುನಾಥ್, ಕಿರಗಸೂರು ಶಂಕರ ಮೊದಲಾದವರು ಇದ್ದರು.----ಕೋಟ್...ಮೇಕೆದಾಟು ಹಾಗೂ ರಾಶಿಮನರ್ ನಿರ್ಮಾಣದ ಬಗ್ಗೆ ತಜ್ಞರ ಜೊತೆ ಚರ್ಚಸಲು ಕಾವೇರಿ ಕುಟುಂಬ ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಕ್ತ ಮನಸ್ಸಿನ ಚರ್ಚೆ ನಡೆಸಿದರೆ ಯಾವುದೇ ಸಮಸ್ಯೆಗೂ ಖಂಡಿತ ಪರಿಹಾರ ಸಿಗುತ್ತದೆ.- ಪ್ರೊ. ಜನಕರಾಜ್, ಸಂಚಾಲಕ, ಕಾವೇರಿ ಕುಟುಂಬ----ಜನತಂತ್ರ ವ್ಯವಸ್ಥೆ, ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾದ ಕಾರಣ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿ ಆದೇಶ ಹೊರಡಿಸಿದೆ. ನಾವು ಕಾವೇರಿ ಕುಟುಂಬದ ಸಭೆಗಳ ಮೂಲಕ ಜನತಂತ್ರ ವ್ಯವಸ್ಥೆಯನ್ನು ಗೆಲ್ಲಬೇಕು ಎಂದು ಪ್ರಯತ್ನ ಮಾಡಿದರೂ ಕೆಲವು ಕಾರಣಗಳಿಂದ ವಿಫಲವಾದೆವು. ರಾಶಿ ಮನರ ಡ್ಯಾಮ್ ನಿರ್ಮಾಣ ಪರಿಣಿತರ ವರದಿಯನ್ನು ಗಮನಿಸಬೇಕು. ಸಾಧಕ ಬಾದಕ ಚರ್ಚಿಸಬೇಕು.- ಪ್ರೊ.ಕೆ.ಸಿ. ಬಸವರಾಜ್, ರೈತ ಮುಖಂಡ----ಹೆಚ್ಚುವರಿ ಮಳೆಯ ನೀರು ಸಮುದ್ರಕ್ಕೆ ಸೇರುವ ಬದಲು ರೈತರು ಸದ್ಬಳಕೆ ಮಾಡಿಕೊಳ್ಳಲು ವಿಶಾಲ ಚಿಂತನೆ ನಡೆಸಬೇಕು. ಎಲ್ಲಾ ಸರ್ಕಾರಗಳು ರೈತರನ್ನ ತುಳಿಯುತ್ತಿವೆ. ನಾವು ರೈತ ಕುಟುಂಬದ ಸದಸ್ಯರಾಗಿ ಚಿಂತನೆ ನಡೆಸಬೇಕಾಗಿದೆ. ಅದಕ್ಕಾಗಿ ಕಾವೇರಿ ಕುಟುಂಬದ ಸಭೆಯ ನಡೆಸಿ ಎರಡು ರಾಜ್ಯಗಳ ನಡುವೆ ಸಮನ್ವಯ ಕಾಯ್ದುಕೊಂಡಿದ್ದೇವೆ.- ಕುರುಬೂರು ಶಾಂತಕುಮಾರ್, ರೈತ ಮುಖಂಡ----ಕಾವೇರಿ ನೀರಿನ ಸಮಸ್ಯೆಗೆ ಕಾವೇರಿ ಕುಟುಂಬದ ಮೂಲಕ ಪರಿಹಾರ ಕಂಡುಕೊಂಡರೆ ದೇಶವೇ ಅಚ್ಚರಿಯಾಗಿ ನೋಡುತ್ತದೆ. ರೈತರ ಒಗ್ಗಟ್ಟಿನ ಶಕ್ತಿ ಬಲವಾಗುತ್ತದೆ. 2 ರಾಜ್ಯಗಳು ಒಮ್ಮತ ತೀರ್ಮಾನ ಕೈಗೊಂಡರೆ ಕಾವೇರಿ ಪ್ರಾಧಿಕಾರದ ಮುಂದೆ ನಾವೇ ಅಪೀಲು ಮಾಡೋಣ. ಕರ್ನಾಟಕದ ರೈತ ಮುಖಂಡರು ರಾಶಿ ಮನರ್ ಸ್ಥಳ ವೀಕ್ಷಣೆಗೆ ಬಂದರೆ ನಾವು ಸ್ವಾಗತಿಸುತ್ತೇವೆ.- ಪಿ.ಆರ್. ಪಾಂಡಿಯನ್, ತಮಿಳುನಾಡು ರೈತ ಮುಖಂಡ

Share this article