ಅಕಾಲಿಕ ಮಳೆಗೆ ತತ್ತರಿಸಿದ ತೋಟಗಾರಿಕೆ ಬೆಳೆಗಾರರು

KannadaprabhaNewsNetwork |  
Published : Apr 06, 2026, 02:15 AM IST
ಆಲಿಕಲ್ಲು ಮಳೆಯಿಂದಾಗಿ ರಾಣಿಬೆನ್ನೂರು ತಾಲೂಕು ಲಿಂಗದಹಳ್ಳಿಯಲ್ಲಿ ಸೇವಂತಿ ಹೂವಿನ ತೋಟ ಕಪ್ಪು ಬಣ್ಣಕ್ಕೆ ತಿರುಗಿರುವುದು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬೀಳುತ್ತಿರುವ ಅಕಾಲಿಕ ಮಳೆ ತೋಟಗಾರಿಕಾ ಬೆಳೆಗಾರರು ತತ್ತರಿಸುವಂತೆ ಮಾಡಿದೆ. ಆಲಿಕಲ್ಲು, ಗಾಳಿ ರಭಸಕ್ಕೆ ಬಾಳೆ, ಮಾವು, ಹೂವು ಬೆಳೆ ನೆಲಕಚ್ಚುತ್ತಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ, ಹಾವೇರಿ

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬೀಳುತ್ತಿರುವ ಅಕಾಲಿಕ ಮಳೆ ತೋಟಗಾರಿಕಾ ಬೆಳೆಗಾರರು ತತ್ತರಿಸುವಂತೆ ಮಾಡಿದೆ. ಆಲಿಕಲ್ಲು, ಗಾಳಿ ರಭಸಕ್ಕೆ ಬಾಳೆ, ಮಾವು, ಹೂವು ಬೆಳೆ ನೆಲಕಚ್ಚುತ್ತಿದೆ.

ಅಕಾಲಿಕ ಮಳೆಗೆ ಜಿಲ್ಲೆಯಲ್ಲಿ 13 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ ಸುಮಾರು 26.9 ಲಕ್ಷ ರು. ಮೊತ್ತದ ಮೂಲಭೂತ ಸೌಕರ್ಯಕ್ಕೆ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಂಜೆ ವೇಳೆ ಗಾಳಿ, ಆಲಿಕಲ್ಲು ಸಹಿತವಾಗಿ ಮಳೆಯಾಗುತ್ತಿದೆ. ಒಂದೆರಡು ದಿನ ಆಲಿಕಲ್ಲು ಮಳೆ ಬಿದ್ದಿದ್ದರಿಂದ ಮಾವು, ಬಾಳೆ ತೋಟಗಳಿಗೆ ಅಪಾರ ಹಾನಿಯಾಗಿದೆ. ಜತೆೆಗೆ ಕಟಾವಿಗೆ ಬಂದಿದ್ದ ಹೂವು ಬೆಳೆಯೂ ಮಳೆಗೆ ಸಿಲುಕಿ ಹಾನಿಯಾಗಿದೆ.

ಮಳೆಯಿಂದ ಜಿಲ್ಲೆಯಲ್ಲಿ 8 ಮನೆಗಳಿಗೆ ಹಾನಿ ಉಂಟಾಗಿದೆ. ಬ್ಯಾಡಗಿ ತಾಲೂಕಿನಲ್ಲಿ 4, ಹಾನಗಲ್ಲನಲ್ಲಿ 3, ಸವಣೂರಲ್ಲಿ 1 ಮನೆ ಹಾನಿಗೀಡಾಗಿದೆ. 26.9 ಲಕ್ಷ ರು. ಮೌಲ್ಯದ ಮೂಲ ಸೌಕರ್ಯಕ್ಕೆ ನಷ್ಟ ಉಂಟಾಗಿದೆ. ಅಂಗನವಾಡಿ ಕಟ್ಟಡ, 169 ವಿದ್ಯುತ್ ಕಂಬಗಳು, 2 ವಿದ್ಯುತ್ ಟ್ರಾನ್ಸಫಾರ್ಮರ್‌ಗೆ ಹಾನಿ ಸಂಭವಿಸಿದೆ. ಮಳೆಗೆ ಯಾವುದೇ ಜೀವ ಮತ್ತು ಪ್ರಾಣಿಗಳು ಹಾನಿಯಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.ಈ ಬಾರಿ ಬೇಸಿಗೆಯ ಸಂದರ್ಭದಲ್ಲಿ ಸುರಿದ ಅಕಾಲಿಕ ಮಳೆಗೆ ಜಿಲ್ಲೆಯಲ್ಲಿ 13 ಹೆಕ್ಟೇರ್ ಬೆಳೆ ಹಾನಿಗೀಡಾಗಿದೆ. ಆಲಿಕಲ್ಲು ಸಹಿತ, ಭಾರಿ ಮಳೆ, ಗಾಳಿಗೆ ಹಾನಗಲ್ಲ ತಾಲೂಕಿನಲ್ಲಿ 1 ಹೆಕ್ಟೇರ್ ಮೆಕ್ಕೆಜೋಳ ಹಾನಿಗೀಡಾಗಿದೆ. ತೋಟಗಾರಿಕೆ ಬೆಳೆಗಳಲ್ಲಿ ಹಾನಗಲ್ಲ ತಾಲೂಕಿನಲ್ಲಿ 1.6 ಹೆಕ್ಟೇರ್ ಬಾಳೆ, ರಾಣಿಬೆನ್ನೂರ ತಾಲೂಕಿನಲ್ಲಿ 8.90 ಹೆಕ್ಟೇರ್ ಕಲ್ಲಂಗಡಿ, 0.40 ಹೆಕ್ಟೇರ್ ಪಪ್ಪಾಯ, 0.81 ಹೆಕ್ಟೇರ್ ಟೊಮೆಟೋ, 0.20 ಹೆಕ್ಟೇರ್ ಎಲಿ ಬಳ್ಳಿ, ಬ್ಯಾಡಗಿ ತಾಲೂಕಿನಲ್ಲಿ 0.4 ಹೆಕ್ಟೇರ್ ಕಲ್ಲಂಗಡಿ ಬೆಳೆ ಹಾನಿಗೀಡಾಗಿದೆ.ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ದೊರೆತಿರುವ ಮಾಹಿತಿ ಹೊರತುಪಡಿಸಿ ಇನ್ನೂ ಅನೇಕ ರೈತರ ಬೆಳೆ ಹಾನಿಗೀಡಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗಮಹರಿಸಬೇಕು. ಹಾನಿಗೀಡಾದ ರೈತರ ಜಮೀನು, ತೋಟಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ನಷ್ಟದ ಕುರಿತು ವರದಿ ಮಾಡಬೇಕು. ಸೂಕ್ತ ಪರಿಹಾರ ಕೊಡಿಸಬೇಕು ಎಂಬ ಆಗ್ರಹ ಜಿಲ್ಲೆಯ ರೈತರಿಂದ ಕೇಳಿ ಬಂದಿದೆ.ಹೂವು ಬೆಳೆಗಾರರಿಗೆ ನಷ್ಟ: ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಗೆ ರಾಣಿಬೆನ್ನೂರು ತಾಲೂಕು ಲಿಂಗದಳ್ಳಿ ಗ್ರಾಮದಲ್ಲಿ ಹೂದೋಟಗಳು ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಸೇವಂತಿ ಹೂವು ಬೆಳೆಗೆ ಪ್ರಸಿದ್ಧಿ ಪಡೆದಿರುವ ಲಿಂಗದಹಳ್ಳಿಯಲ್ಲಿ ಹಳದಿ ಮತ್ತು ಬಿಳಿ ಸೇವಂತಿ ಹೂವುಗಳು ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಗ್ರಾಮದ ರೈತ ಫಕ್ಕೀರಪ್ಪ ಎಂಬುವರು 2 ಲಕ್ಷ ಖರ್ಚು ಮಾಡಿ 4 ಗುಂಟೆಯಲ್ಲಿ ಹೂವಿನ ಗಿಡ ಬೆಳೆಸಿದ್ದರು. ಇನ್ನೇನು ಬೆಳೆ ಕೈಗೆ ಬರಬೇಕು ಎನ್ನುವಷ್ಟರಲ್ಲಿ ಆಲಿಕಲ್ಲು ಮಳೆಗೆ ಹೂವುಗಳು ಆಹುತಿಯಾಗಿವೆ.ಅಕಾಲಿಕ ಮಳೆಗೆ ನೆಲಕಚ್ಚಿದ ಬಾಳೆ: ಅಕಾಲಿಕವಾಗಿ ಸುರಿದ ಆಲಿಕಲ್ಲು ಸಹಿತ ಮಳೆಗೆ ಹಾವೇರಿ ತಾಲೂಕಿನ ಗೌರಾಪುರ ಗ್ರಾಮದ ಅರ್ಜನಪ್ಪ ತಿಮ್ಮಣ್ಣನವರ ಎಂಬುವರಿಗೆ ಸೇರಿದ 2 ಎಕರೆ ಬಾಳೆ ನಾಶವಾಗಿದೆ. ಆಲಿಕಲ್ಲು ಹೊಡೆತ ಮತ್ತು ಗಾಳಿಯ ರಬಸಕ್ಕೆ ಲಕ್ಷಾಂತರ ರು. ಬೆಲೆಬಾಳುವ ಕಟಾವಿಗೆ ಬಂದಿದ್ದ ಬಾಳೆ ಸಂಪೂರ್ಣ ನೆಲಕಚ್ಚಿಸಿದ್ದು, ರೈತನ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಂದಾಜು 26.9 ಲಕ್ಷ ರು. ಮೂಲಭೂತ ಸೌಕರ್ಯಕ್ಕೆ ಹಾನಿ ಸಂಭವಿಸಿದೆ. ಪಿಡಿ ಖಾತೆಯಲ್ಲಿ 15.53 ಕೋಟಿ ರು. ಇದ್ದು, ತಹಸೀಲ್ದಾರ್ ಅವರ ಖಾತೆಗಳೂ ಸೇರಿದಂತೆ ಒಟ್ಟು 18.87ಕೋಟಿ ರು. ವಿಪತ್ತು ನಿರ್ವಹಣೆಗಾಗಿ ಜಿಲ್ಲಾಡಳಿತ ಹಣ ಮೀಸಲು ಇಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.ಬೇಸಿಗೆ ಸಂದರ್ಭದಲ್ಲಿ ಭಾರೀ ಬೆಳೆ ಬಂದಿದೆ ಎಂದು ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರು ಮಾರುಕಟ್ಟೆಗೆ ಮಾರಾಟ ಮಾಡಲು ಸಿದ್ಧತೆ ಮಾಡಿದ್ದೆವು. ಆಲಿಕಲ್ಲು ಮಳೆಗೆ ಸೇವಂತಿ ಹೂವಿನ ಗಿಡಗಳು ಬಾಗಿವೆ, ಹೂವು ಕಪ್ಪು ಬಣ್ಣಕ್ಕೆ ತಿರುಗಿ ಹಾಳಾಗುತ್ತಿವೆ. ಈ ಸ್ಥಿತಿಯಲ್ಲಿ ಯಾರೂ ಇದನ್ನು ಖರೀದಿಸುವುದಿಲ್ಲ. ಇದರಿಂದ ನಷ್ಟ ಉಂಟಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಲಿಂಗದಹಳ್ಳಿ ರೈತ ಹನುಮಂತಪ್ಪ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಬೂಜೀ, ಅಂಬೇಡ್ಕರ್‌ ಸಮಾಜದ ಎರಡು ಕಣ್ಣುಗಳಿದ್ದಂತೆ
ದಲಿತೋದ್ಧಾರಕ ಬಾಬು ಜಗಜೀವನರಾಮ್