ಕನ್ನಡಪ್ರಭ ವಾರ್ತೆ ಮೈಸೂರು
ಪೂರ್ವದ ಹಳಗನ್ನಡ, ಹಳಗನ್ನಡ ವಸ್ತು ಮತ್ತು ಆಶಯ ರಾಜಮಹಾರಾಜರ ಪ್ರಭುತ್ವದ ಮಹತ್ವವನ್ನು ಸಾರಿದರೆ ಹೊಸಗನ್ನಡ ಸಾಹಿತ್ಯವೂ ಜನ ಸಾಮಾನ್ಯರ ಧ್ವನಿಯಾಗಿ ನೆಲೆ ನಿಂತಿದೆ ಎಂದು ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ತಿಳಿಸಿದರು.ಮೈಸೂರು ವಿವಿ ಮಾನಸಗಂಗೋತ್ರಿಯ ಪ್ರಸಾರಾಂಗದ ಕುವೆಂಪು ಸಭಾಂಗಣದಲ್ಲಿ ಪ್ರಸಾರಾಂಗ ಹಾಗೂ ಕರ್ನಾಟಕ ಜಾನಪದ ಸಂಶೋಧಕರ ಒಕ್ಕೂಟ ಸಂಯುಕ್ತವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಹೊಂಬಯ್ಯ ಹೊನ್ನಲಗೆರೆ, ಶ್ರೀನಾಥ ಬಿ. ಕಾಂಬಳೆ ಅವರ ‘ಹೊಸಗನ್ನಡ ಸಾಹಿತ್ಯ ಚರಿತ್ರೆ: ಪಂಥಗಳು’ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಸಾಮಾನ್ಯ ಜನರು ಬರೆಯುವ ಹಾಗೂ ಓದುವ ಸಾಹಿತ್ಯವೆಂದರೆ ಅದು ಹೊಸಗನ್ನಡ ಸಾಹಿತ್ಯ. ಇಲ್ಲಿ ದಲಿತ ಹಿಂದುಳಿದ ಆದಿವಾಸಿ ಮತ್ತು ಮಹಿಳಾ ಸಂವೇದನೆ ಜೀವಂತವಾಗಿ ಹರಿದು ಬಂದಿದೆ. ದನಿ ಇಲ್ಲದ ಅಲಕ್ಷಿತ ಹಾಗೂ ಎಲ್ಲ ಸ್ತರದ ಜನರನ್ನು ಹೊಸಗನ್ನಡ ಸಾಹಿತ್ಯ ಮುಖಾಮುಖಿಯಾಗಿಸಿದೆ. ತಳಸ್ತರದ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ. ನಾಡು- ನುಡಿಯ ಅಭಿಮಾನ, ದೇಶಾಭಿಮಾನ, ಚಳವಳಿ, ಪ್ರತಿಭಟನೆ, ವೈಜ್ಞಾನಿಕ, ರಾಜಕೀಯ ಮತ್ತು ಸಾಮಾಜಿಕ ಕೊಡುಗೆಗಳನ್ನು ಕೃತಿಯಲ್ಲಿ ದಾಖಲಿಸಲಾಗಿದೆ ಎಂದರು.ಹೊಸಗನ್ನಡ ಸಾಹಿತ್ಯ ವಿವಿಧ ಸಾಹಿತ್ಯ ಪ್ರಕಾರದ ಮಜಲನ್ನು ಹೊಂದಿದ್ದು, ಸಮೃದ್ಧ ಅಭಿವ್ಯಕ್ತಿಯಾಗಿ ಬೆಳೆದಿದೆ. ಅತ್ಯಂತ ವಿಸ್ತಾರವೂ ಸಮೃದ್ಧವೂ ಆದ ಹೊಸ ಕನ್ನಡ ಸಾಹಿತ್ಯವನ್ನು 270 ಪುಟಗಳಲ್ಲಿ ಲೇಖಕರು ಸಂಕ್ಷಿಪ್ತವಾಗಿ ದಾಖಲಿಸಿದ್ದಾರೆ. ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಉತ್ತಮ ಕೈಪಿಡಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪಠ್ಯಕ್ರಮವಾಗಿದೆ:ಲೇಖಕ ಡಾ. ಹೊಂಬಯ್ಯ ಹೊನ್ನಲಗೆರೆ ಮಾತನಾಡಿ, ಹೊಸಗನ್ನಡ ಸಾಹಿತ್ಯವು 19ನೇ ಶತಮಾನದ ಅರುಣೋದಯ ಕಾಲದಿಂದ ಪ್ರಾರಂಭಗೊಂಡು 21ನೇ ಶತಮಾನದ ಇಂದಿನವರೆಗೂ ಬೆಳೆದು ಬಂದಿದೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಹಾಗೂ ಮಹಿಳಾ ಸಾಹಿತ್ಯದ ಪ್ರೇರಣೆ ಧೋರಣೆ ಮತ್ತು ಸ್ವರೂಪ ಲಕ್ಷಣಗಳನ್ನು ಈ ಕೃತಿ ಒಳಗೊಂಡಿದೆ. ಇದರೊಂದಿಗೆ 5 ಪಂಥಗಳ ಪ್ರಮುಖ 50 ಹೆಚ್ಚು ಕವಿಗಳ ಲೇಖಕರ ಕೃತಿಗಳನ್ನು ಕೇಂದ್ರವಾಗಿಟ್ಟುಕೊಂಡು ವಿಶ್ಲೇಷಣೆ ಮಾಡಲಾಗಿದೆ. ಈ ಕೃತಿಯು ಕರ್ನಾಟಕ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳ ಪಠ್ಯಕ್ರಮವಾಗಿದೆ. ಇದಲ್ಲದೆ ಎಸ್ ಡಿಎ, ಎಫ್ ಡಿಎ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಹಾಗೂ ಕನ್ನಡ ಉಪನ್ಯಾಸಕರ ನೇಮಕಾತಿಗೆ ಉಪಯುಕ್ತವಾಗುವ ರೀತಿಯಲ್ಲಿ ಸಿದ್ಧಗೊಂಡಿದೆ ಎಂದರು.
ಮತ್ತೊಬ್ಬ ಲೇಖಕ ಶ್ರೀನಾಥ್ ಬಿ. ಕಾಂಬಳೆ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪೂರಕವಾದ ಅಂಶಗಳನ್ನು ಅಡಕ ಗೊಳಿಸಲಾಗಿದೆ. ಈ ಕೃತಿಯು ಹೊಸಗನ್ನಡ ಕವಿಗಳ ಕುರಿತು ಹೇಳಲಾಗಿದೆ ಎಂದು ತಿಳಿಸಿದರು.ಎಸ್ಐ ಟಿ.ಎಸ್. ಮಹೇಂದ್ರ, ಪತ್ರಕರ್ತ ವಿನೋದ್ ಮಹದೇವಪುರ, ಕಾರ್ಯಕ್ರಮದ ಸಂಚಾಲಕ ಡಾ.ಎಚ್.ಪಿ. ಮಂಜು, ಪ್ರಸಾರಾಂಗದ ಅಧೀಕ್ಷಕ ಚನ್ನಬಸಪ್ಪ, ಸಹಾಯ ನಿರ್ದೇಶಕ ಅನಿಲ್ ಕುಮಾರ್, ಮುದ್ರಣಾಲಯದ ನಿರ್ದೇಶಕ ಸತೀಶ್, ಶಿವಲಿಂಗೇಗೌಡ, ತಲಕಾಡು ನಾಗರಾಜ್ ಮೊದಲಾದವರು ಇದ್ದರು. ಜಾನಪದ ಗಾಯಕ ವಿಶ್ವನಾಥ್ ಪ್ರಾರ್ಥಿಸಿದರು. ಸೋಮಶೇಖರ್ ಮೆಣಸಗಿ ನಿರೂಪಿಸಿದರು.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಕಷ್ಟಪಟ್ಟು ತಯಾರಿ ನಡೆಸುತ್ತಾರೆ. ತರಬೇತಿ ಪಡೆಯುತ್ತಾರೆ. ಲೇಖಕರು, ಪ್ರಾಧ್ಯಾಪಕರು ಅಗತ್ಯ ಸಂಪನ್ಮೂಲ ಸಿದ್ಧಪಡಿಸುತ್ತಾರೆ. ಆದರೆ, ಸರ್ಕಾರಗಳು ನೇಮಕಾತಿ ಮಾಡದಿದ್ದರೆ ಏನು ಮಾಡಬೇಕು. ಮೈಸೂರು ವಿವಿಯಲ್ಲಿ ಶೇ.70 ಕಾಯಂ ಹುದ್ದೆಗಳು ಖಾಲಿ ಇವೆ. ಸರ್ಕಾರಗಳು ಕಾಲ ಕಾಲಕ್ಕೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿದ್ದರೆ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ.
- ವಿನೋದ್ ಮಹದೇವಪುರ, ಪತ್ರಕರ್ತನಾನು ಮೈಸೂರು ವಿವಿ ವಿದ್ಯಾರ್ಥಿಯಾಗಿದ್ದೇನೆ. ಇಲ್ಲಿನ ಗ್ರಂಥಾಲಯದಲ್ಲಿ ಹಗಲು ರಾತ್ರಿ ಓದಿ ಪೊಲೀಸ್ ಹುದ್ದೆಯನ್ನು ಪಡೆದಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಯಾವ ಸಂದರ್ಭದಲ್ಲೂ ನಿರುತ್ಸಾಹರಾಗದೇ ಪ್ರಯತ್ನ ಮಾಡಿ ಫಲ ಸಿಗುತ್ತದೆ. ಪುಸ್ತಕ ಮೇಲೆ ನಂಬಿಕೆಯಿಟ್ಟರೆ ಹೊಸದಾರಿ ತೋರಿಸುತ್ತದೆ. ಮೊಬೈಲ್ ಬಳಕೆ ಕಡಿಮೆ ಮಾಡಿ ಯಶಸ್ಸನ್ನು ದಕ್ಕಿಸಿಕೊಳ್ಳಿ.- ಟಿ.ಎಸ್.ಮಹೇಂದ್ರ, ಎಸ್ಐ