ಹೊಸದುರ್ಗ ಪುರಸಭೆ ಬಿಜೆಪಿ ತೆಕ್ಕೆಗೆ

KannadaprabhaNewsNetwork | Published : Aug 23, 2024 1:23 AM

ಸಾರಾಂಶ

ಹೊಸದುರ್ಗ ಪುರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಅವರನ್ನು ಬಿಜೆಪಿ ಮುಖಂಡರು ಅಭಿನಂದಿಸಿದರು

ಕನ್ನಡಪ್ರಭ ವಾರ್ತೆ ಹೊಸದುರ್ಗ

ಪಟ್ಟಣದ ಪುರಸಭೆಗೆ ಗುರುವಾರ ನಡೆದ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿಯ ರಾಜೇಶ್ವರಿ ಆನಂದ್, ಉಪಾಧ್ಯಕ್ಷರಾಗಿ ಗೀತಾ ಅಸಂದಿ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಪ.ಪಂಗಡಕ್ಕೆ, ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾಗಿತ್ತು. ಎರಡು ಸ್ಥಾನಗಳಿಗೆ ಒಬ್ಬೊಬ್ಬರೇ ನಾಮ ಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ತಹಸೀಲ್ದಾರ್ ತಿರುಪತಿ ಪಾಟೀಲ್ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳನ್ನು ಅವಿರೋಧವಾಗಿ ಘೋಷಣೆ ಮಾಡಿದರು.

ಚುನಾವಣಾ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಸೇರಿದಂತೆ ಬಿಜೆಪಿ 14 ಹಾಗೂ ಪಕ್ಷೇತರ 5 ಜನ ಸದಸ್ಯರು ಹಾಜರಿದ್ದರು. ಶಾಸಕ ಬಿಜಿ ಗೋವಿಂದಪ್ಪ ಸೇರಿದಂತೆ ಕಾಂಗ್ರೇಸ್‌ ಸದಸ್ಯರು ಸಭೆಗೆ ಗೈರಾಗಿದ್ದರು.

ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ: ಹೊಸದುರ್ಗ ಪುರಸಭೆಯ ಅಧಿಕಾರ ಮತ್ತೆ ಬಿಜೆಪಿಗೆ ಒಲಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪುರಸಭೆ ಮುಂಬಾಗ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಜಿಲ್ಲಾಧ್ಯಕ್ಷ ಮುರುಳಿ, ಬಿಜೆಪಿ ಮುಖಂಡ ಎಸ್‌.ಲಿಂಗಮೂರ್ತಿ, ಮಂಡಲದ ಪದಾಧಿಕಾರಿಗಳು ಸೇರಿ ನೂರಾರು ಬಿಜೆಪಿ ಕಾರ್ಯಕರ್ತರು ಪಕ್ಷದ ಪರ ಘೋಷಣೆ ಕೂಗಿದರು. ನಂತರ ಪುರಸಭೆ ಕಚೇರಿಗೆ ತೆರಳಿ ಸಂಸದ ಗೋವಿಂದ ಕಾರಜೋಳ ಅವರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಗೂಳೀಹಟ್ಟಿ ಪರ ಘೋಷಣೆ: ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಹೊರಗಡೆಯಲ್ಲಿ ಗೂಳಿಹಟ್ಟಿ ಪರ ಘೋಷಣೆಗಳು ಮೊಳಗಿದವು. ಅಧ್ಯಕ್ಷೆ ರಾಜೇಶ್ವರಿ ಆನಂದ ಗೂಳಿಹಟ್ಟಿ ಅಭಿಮಾನಿಯಾಗಿದ್ದು, ಅಣ್ಣನ ಬೆಂಬಲದಿಂದ ಅಧ್ಯಕ್ಷ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಸಂಸದರ ಎದುರಿನಲ್ಲಿಯೇ ಗೂಳಿಹಟ್ಟಿ ಪರ ಜೈಕಾರ ಕೂಗುತ್ತಾ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು

ನಾನು ಪುರಸಭೆಯ ಸದಸ್ಯ ಸಭೆಗೆ ಕರೆಯಿರಿ: ಸಂಸದ ಕಾರಜೋಳ:

ಹೊಸದುರ್ಗ: ಪುರಸಭೆಯ 2ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಕಾರಜೋಳ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ, ನಾನು ಕೂಡ ಪುರಸಭೆಯ ಸಾಂವಿಧಾನಿಕ ಸದಸ್ಯನಿದ್ದೇನೆ. ನನಗೂ ಸಭೆಯಲ್ಲಿ ಭಾಗವಹಿಸಲು ಅಧಿಕಾರವಿದೆ. ಅವಶ್ಯಕತೆ ಇದ್ದಾಗ ಸಭೆಗೆ ನನ್ನನ್ನೂ ಆಹ್ವಾನಿಸಿ ಬರುತ್ತೇನೆ ಎಂದು ಸದಸ್ಯರಿಗೆ ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇರಬಹುದು. ಹೊಸದುರ್ಗ ಪಟ್ಟಣಕ್ಕೆ ನಮ್ಮದೇ ಸರ್ಕಾರ. ಪಟ್ಟಣದ ಅಭಿವೃದ್ಧಿಗೆ ಪುರಸಭೆಯ ಸದಸ್ಯರು ಶ್ರಮಿಸಬೇಕು. ಪ್ರತಿದಿನ ಬೆಳಗ್ಗೆ ಪುರಸಭಾ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಸಂಚರಿಸಿ ನೀರು ಹಾಗೂ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಉಳಿದ 14 ತಿಂಗಳು ಶ್ರಮವಹಿಸಿ ಕೆಲಸ ಮಾಡಿ, ಮತ್ತೆ ಹೊಸದುರ್ಗ ಪುರಸಭೆಯಲ್ಲಿ ಬಿಜೆಪಿ ಬಾವುಟ ಹಾರಿಸಿ ಎಂದು ಕರೆ ನೀಡಿದರು.

ಮುಂದಿನ ಬಿಜೆಪಿ ಅಭ್ಯರ್ಥಿ ನಾನೆ: ಎಸ್‌.ಲಿಂಗಮೂರ್ತಿ: ಮುಂಬರುವ 2028ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸುತ್ತೇನೆ ಎಂದು ಬಿಜೆಪಿ ಎಸ್‌.ಲಿಂಗಮೂರ್ತಿ ತಿಳಿಸಿದರು. ಹೊಸದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ ಬಿಜೆಪಿ ಬಹುಮತ ಹೊಂದಿದ್ದರಿಂದ ಪುರಸಭೆಯಲ್ಲಿ 2ನೇ ಅವಧಿಗೂ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮುಂದೆಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ನಾನು ಕ್ಷೇತ್ರದಲ್ಲಿಯೇ ಮುಂದಿನ ನಾಲ್ಕು ವರ್ಷ ಇದ್ದು ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ ಅಲ್ಲದೆ ಕಾರ್ಯಕರ್ತರ ಕಷ್ಠ ಸುಖಗಳಲ್ಲಿ ಭಾಗಿಯಾಗುತ್ತೇನೆ ಎಂದರು. ಮುಂದಿನ ಚುನಾವಣೆಯ ಟಿಕೆಟ್‌ ವಿಚಾರದಲ್ಲಿ ಕಾರ್ಯಕರ್ತರಿಗೆ ಯಾವುದೇ ಗೊಂದಲ ಬೇಡ. ನೂರಕ್ಕೆ ನೂರು ಟಿಕೆಟ್‌ ನನಗೆ ಸಿಗಲಿದ್ದು 3 ಬಾರಿ ಸೋತಿರುವ ನನಗೆ ನಾಲ್ಕನೇ ಬಾರಿಗೆ ತಾಲೂಕಿನ ಜನರು ಕೈ ಹಿಡಿಯುವ ವಿಶ್ವಾಸವಿದೆ ಎಂದರು.

Share this article