ಹೊಸಪೇಟೆ: ನಗರದ ಗ್ರಾಮದೇವತೆ ಊರಮ್ಮದೇವಿ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ನಡೆಯಿತು.
ಒಂಬತ್ತು ದಿನಗಳವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ಕೊನೆಯ ಎರಡು ದಿನ ಸಾವಿರಾರು ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು. ಜಾತ್ರೆ ಮಹೋತ್ಸವದ ನಿಮಿತ್ತ ನಗರದ ಏಳುಕೇರಿ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.ಊರಮ್ಮದೇವಿ ಜಾತ್ರೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ದೇವಿಗೆ ಹೂ, ಹಣ್ಣು, ಕಾಯಿ, ಕಂಕಣ, ಉಡಿಯನ್ನು ಭಕ್ತರು ಸಮರ್ಪಿಸಿದರು. ಸಿಹಿ ನೈವೇದ್ಯ ಮಾಡಿ ದೇವಿಗೆ ಅರ್ಪಿಸಿದರು. ರಾಜ್ಯದಲ್ಲಿ ಸಮೃದ್ಧ ಮಳೆ, ಬೆಳೆ ಹಾಗೂ ಊರಿನ ಸುಭಿಕ್ಷೆಗೆ ದೇವಿ ಕರುಣಿಸಲಿ ಎಂದು ಭಕ್ತರು ದೇವಿಗೆ ಭಕ್ತಿ ಸಮರ್ಪಿಸಿದರು.
ಜಾತ್ರೆ ನಿಮಿತ್ತ ಭವ್ಯ ಮೆರವಣಿಗೆ ನಡೆದಿದ್ದು, ಭಕ್ತರು ಜಯಘೋಷ ಮೊಳಗಿಸಿದರು. ಒಂಬತ್ತು ದಿನಗಳವರೆಗೆ ನಡೆದ ಜಾತ್ರೆ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.ವಿವಿಧ ಧಾರ್ಮಿಕ ಕಾರ್ಯಕ್ರಮ:
ಊರಮ್ಮದೇವಿ ಜಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಬೆಳಗ್ಗೆಯಿಂದ ಶ್ರೀ ಉತ್ಸವ ಯಂತ್ರ ಪೂಜೆ, ಶ್ರೀದೇವಿ ಪಾರಾಯಣ, ಶ್ರೀ ಗಣಪತಿ ಪೂಜೆ, ನವಗ್ರಹ ಪೂಜೆ, ಪುಣ್ಯಾಹ ವಾಚನ, ಋತ್ವಿಗ್ವರಣೆ, ಮಹಾಸಂಕಲ್ಪ, ಕಳಶ ಪೂಜೆ, ಚಂಡಿಕಾ ಸೇವೆ, ಚಂಡಿಕಾ ಪಾರಾಯಣ, ಮಂಡಲ ಆರಾಧನೆ, ಚಂಡಿಕಾ ಯಾಗ, ಸುಹಾಸನಿ ಪೂಜೆ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಕನ್ನಿಕಾ ಪೂಜೆ, ಪುರ್ಣಾಹುತಿ, ಮಹಾಮಂಗಳಾರತಿ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆ ಕೂಡ ನಡೆಯಿತು. ಸಂಜೆ ೬ ಗಂಟೆ ನಂತರ ಪ್ರಮುಖ ಕಲಾವಿದರಿಂದ ಸಾಂಸ್ಕೃತಿಕ ವಿಶೇಷ ಕಾರ್ಯಕ್ರಮಗಳಲ್ಲಿ ಭರತನಾಟ್ಯ, ನೃತ್ಯ, ಸಂಗೀತ. ಗಾಯನ ಮತ್ತು ಹಾಸ್ಯ ಕಲಾವಿದರಿಂದ ಕಾರ್ಯಕ್ರಮಗಳು ಕೂಡ ನಡೆದವು.ಟ್ರಾಫಿಕ್ ಜಾಮ್:
ಪ್ರತಿ ಐದು ವರ್ಷಕ್ಕೊಮ್ಮೆ ನಡೆಸುವ ಜಾತ್ರಾ ಮಹೋತ್ಸವ ಕೊರೋನಾ ಹಿನ್ನೆಲೆಯಲ್ಲಿ ಒಂಬತ್ತು ವರ್ಷಗಳ ಬಳಿಕ ನಡೆಸಲಾಗಿದೆ. ಭಾರೀ ಪ್ರಮಾಣದಲ್ಲಿ ಭಕ್ತರ ದಂಡು ಹರಿದು ಬಂದ ಹಿನ್ನೆಲೆಯಲ್ಲಿ ಹೊಸಪೇಟೆಯ ಏಳುಕೇರಿ ಪ್ರದೇಶ ಸೇರಿದಂತೆ ಮೇನ್ ಬಜಾರ್, ವಾಲ್ಮೀಕಿ ವೃತ್ತದ ರಸ್ತೆಯಲ್ಲೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಿರು ಬಿಸಿಲಿನಲ್ಲಿ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕಾಗಿ ಹರಸಾಹಸಪಟ್ಟರು.ಜಾತ್ರೆ ನಿಮಿತ್ತ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಾಸಕ ಎಚ್.ಆರ್. ಗವಿಯಪ್ಪ, ಯುವ ಮುಖಂಡ ಸಿದ್ಧಾರ್ಥ ಸಿಂಗ್, ಮುಖಂಡರಾದ ರಾಣಿ ಸಂಯುಕ್ತಾ ಸಿಂಗ್, ಎಚ್.ಜಿ. ವಿರೂಪಾಕ್ಷಿ, ಎಚ್‌ಎನ್‌ಎಫ್ ಮಹಮ್ಮದ್ ಇಮಾಮ್ ನಿಯಾಜಿ, ದೇವಸ್ಥಾನ ಜೀರ್ಣೋದ್ಧಾರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಂಡೆ ಶ್ರೀನಿವಾಸ್, ಮುಖಂಡರಾದ ಎಸ್.ಗಾಳೆಪ್ಪ, ಆರ್.ಕೊಟ್ರೇಶ್, ಗೋಸಲ ಭರಮಪ್ಪ, ಕಿಚಿಡಿ ಶ್ರೀನಿವಾಸ್, ಮರಡಿ ರಾಮಣ್ಣ, ಜೆ.ವಸಂತ್, ಎಸ್.ಎಸ್,ಚಂದ್ರಶೇಖರ್, ಬಂದಿ ಪಂಪಾಪತಿ, ಕಟಗಿ ವಿಜಯಕುಮಾರ್, ಬಾಣದ ಸುದರ್ಶನ, ತಾರಿಹಳ್ಳಿ ವಾಸಪ್ಪ, ಎಚ್. ಹನುಮಂತಪ್ಪ, ಬಂದಿ ಜಂಬಣ್ಣ, ಬಡಗಿ ಮಂಜುನಾಥ, ರಾಘವೇಂದ್ರ ಗೌಡ, ಜಂಬುನಾಥ ಆಚಾರ್ಯ, ಕೆ.ದಿವಾಕರ್, ಗುಂಡಿ ಪ್ರಶಾಂತ್, ವಿರುಪಾಕ್ಷಿ, ಶಂಕ್ರಾಚಾರಿ, ಲತಾ ಸಂತೋಷ್ ಮತ್ತಿತರರಿದ್ದರು.