ಹಾಸ್ಟೆಲ್ ಮಕ್ಕಳು ಅಸ್ವಸ್ಥ ಪ್ರಕರಣ: ತಪ್ಪಿಸ್ಥರ ವಿರುದ್ಧ ಕ್ರಮ

KannadaprabhaNewsNetwork | Published : Aug 11, 2024 1:36 AM

ಸಾರಾಂಶ

ಬಡವರು, ದಲಿತರ ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳುವುದಕ್ಕೆ ಆಗದಿದ್ದರೆ ನಿಮಗೆ ಅಧಿಕಾರಿಯಾಗಿರುವ ಅರ್ಹತೆ ಇಲ್ಲ. ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್ ಹಾಗೂ ತಾಲೂಕು ಸಹಾಯಕ ನಿರ್ದೇಶಕ ಚನ್ನಬಸಪ್ಪ ಅವರನ್ನು ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರತಾಲೂಕಿನ ಅಮ್ಮನಲ್ಲೂರು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಸ್ಟೆಲ್‌ನಲ್ಲಿ ಊಟ ಸೇವಿಸಿ ೧೮ ಮಂದಿ ಅಸ್ವಸ್ಥರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಶಾಸಕ ಕೊತ್ತೂರು ಮಂಜುನಾಥ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ತಪ್ಪಿಸ್ಥರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಹಾಸ್ಟೆಲ್‌ನಲ್ಲಿ ಶುಕ್ರವಾರ ದೋಸೆ ಸೇವಿಸಿ ಅಸ್ವಸ್ಥಗೊಂಡಿದ್ದ ೧೮ ಮಕ್ಕಳು ಚಿಂತಾಮಣಿ ಸರಕಾರಿ ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿ, ಚೇತರಿಕೊಂಡ ಬಳಿಕ ಮನೆಗಳಿಗೆ ತೆರಳಿದ್ದರು. ಐವರು ಮಕ್ಕಳು ಮಾತ್ರ ಚಿಂತಾಮಣಿಯ ಆಸ್ಪತ್ರೆಯಲ್ಲಿ ಶನಿವಾರವೂ ಚಿಕಿತ್ಸೆ ಪಡೆಯುತ್ತಿದ್ದ ಶಾಸಕರು ಆಸ್ಪತ್ರೆಗೆ ತೆರಳಿ ಮಕ್ಕಳ ಆರೋಗ್ಯ ವಿಚಾರಿಸಿದ ಬಳಿಕ ಹಾಸ್ಟೆಲ್‌ಗೆ ಭೇಟಿ ನೀಡಿದರು.ಆಹಾರ ಪದಾರ್ಥದಲ್ಲಿ ಹುಳು ಹಾಸ್ಟೆಲ್ ಆವರಣಕ್ಕೆ ಬರುತ್ತಿದ್ದಂತೆಯೇ ಸ್ವಚ್ಛತೆಯನ್ನು ಗಮನಿಸಿದ ಕೊತ್ತೂರು ಮಂಜುನಾಥ್, ಹಾಸ್ಟೆಲ್‌ ಅನ್ನು ಇವತ್ತು ನಾವು ಬರತ್ತೇವೆ ಅಂತ ಸ್ವಚ್ಛವಾಗಿ ಇಟ್ಟುಕೊಂಡಿದ್ದೀರಿ, ಇದು ಇವತ್ತು ಮಾಡಿರುವ ಕೆಲಸವಲ್ಲವೇ ಎಂದು ಪ್ರಶ್ನಿಸಿದರು. ಹಾಸ್ಟೆಲ್‌ನ ಅಡುಗೆ ಕೋಣೆಗೆ ತೆರಳಿ ನೀರು ಕುಡಿದರು. ಅದೂ ಸರಿಯಾಗಿ ಫಿಲ್ಟರ್ ಆಗಿರಲಿಲ್ಲ. ಬಳಿಕ ದಾಸ್ತಾನು ಕೊಠಡಿಗೆ ತೆರಳಿದಾಗ ವಿವಿಧ ಆಹಾರ ಪದಾರ್ಥಗಳಲ್ಲಿ ಹುಳ ಇದ್ದುದು ಕಂಡುಬಂದಿತು. ಈ ವೇಳೆ ಸುತ್ತಮುತ್ತಲಿನ ಗ್ರಾಮಸ್ಥರು ಮುಖಂಡರು ಹಾಸ್ಟೆಲ್ ಅವ್ಯವಸ್ಥೆಗಳ ಬಗ್ಗೆ ದೂರುಗಳ ಸುರಿಮಳೆಗೈದರು. ಈ ವೇಳೆ ಅಸಮಧಾನಗೊಂಡ ಶಾಸಕರು, ಘಟನೆಯ ವಿಚಾರವಾಗಿ ಇಲ್ಲಿನ ವಾರ್ಡನ್ ಹಾಗೂ ಅಡುಗೆ ಸಹಾಯಕನನ್ನು ಅಮಾನತುಗೊಳಿಸಿ. ನಿಮ್ಮ ವಿರುದ್ಧ ಕ್ರಮಕೈಗೊಳ್ಳಲು ಸಚಿವರು, ಸಿಎಂ ಬಳಿ ನಾನು ಚರ್ಚೆ ನಡೆಸುವುದಾಗಿ ಅಲ್ಲಿಯೇ ಇದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್ ಹಾಗೂ ತಾಲೂಕು ಸಹಾಯಕ ನಿರ್ದೇಶಕ ಚನ್ನಬಸಪ್ಪರಿಗೆ ಎಚ್ಚರಿಸಿದರು.

ಆಹಾರ ಪೂರೈಕೆದಾರನ ಬದಲಾವಣೆ

ಹಾಸ್ಟೆಲ್‌ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಹಾಸ್ಟೆಲ್‌ನಲ್ಲಿ ಕೆಲ ಆಹಾರ ಪದಾರ್ಥಗಳಲ್ಲಿ ಹುಳ ಕಂಡುಬಂದಿದ್ದು, ಆಹಾರ ಸರಬರಾಜುದಾರರನ್ನು ಕೂಡಲೇ ಬದಲಾಯಿಸುತ್ತೇವೆ. ಇಲಾಖೆಯ ತಾಲೂಕು, ಜಿಲ್ಲಾ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಸಚಿವರ ಗಮನಕ್ಕೆ ದಾಖಲೆ ಸಮೇತ ದೂರು ನೀಡುವುದಾಗಿ ಹೇಳಿದರು.

ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಬಡವರು, ದಲಿತರ ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳುವುದಕ್ಕೆ ಆಗದಿದ್ದರೆ ನಿಮಗೆ ಅಧಿಕಾರಿಯಾಗಿರುವ ಅರ್ಹತೆ ಇಲ್ಲ ಎಂದು ಎಚ್ಚರಿಸಿದರು.

Share this article