ದಾಬಸ್‌ಪೇಟೆ: ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವನ್ನು ಉನ್ನತೀಕರಿಸುವ ನೆಪವೊಡ್ಡಿ ಸದ್ದಿಲ್ಲದೆ ನೆಲಮಂಗಲ ಪಟ್ಟಣಕ್ಕೆ ವರ್ಗಾವಣೆ ಮಾಡುವ ಹುನ್ನಾರ ನಡೆಯುತ್ತಿರುವ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ಕನ್ನಡಪ್ರಭ ಪತ್ರಿಕೆಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಪಟ್ಟಣದಲ್ಲಿರುವ ಹಾಸ್ಟೆಲ್‌ನಲ್ಲಿ 5ನೇ ತರಗತಿಯಿಂದ 10ನೇ ತರಗತಿವರೆಗೂ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ 30 ವಿದ್ಯಾರ್ಥಿಗಳು 2023-24ನೇ ಸಾಲಿನಲ್ಲಿ ಆಶ್ರಯ ಪಡೆದಿದ್ದರು. ಈಗ ಹತ್ತನೇ ತರಗತಿ ಮಕ್ಕಳು ಹೊರತುಪಡಿಸಿ ಉಳಿದವರು ಇಲ್ಲಿಯೇ ವಾಸ್ತವ್ಯ ಹೂಡಲಿದ್ದು ಅವರಿಗೆ ಮುಂದೇನು ಎಂಬ ಚಿಂತೆ ಕಾಡತೊಡಗಿದೆ.
ಮುಚ್ಚುವ ಹುನ್ನಾರ:ವಿದ್ಯಾರ್ಥಿ ನಿಲಯ ದಾಬಸ್‌ಪೇಟೆ ಮುಖೇನ ದೊಡ್ಡಬಳ್ಳಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-648ರ ರಸ್ತೆ ಅಗಲೀಕರಣಕ್ಕಾಗಿ ಸ್ವಲ್ಪ ಕಟ್ಟಡವನ್ನು ಸ್ವಾಧೀನ ಪಡಿಸಿಕೊಂಡು ಇಲಾಖೆಗೆ ಹಣ ನೀಡಿದ್ದು ಕಳೆದ ವರ್ಷ ಉಳಿದಿರುವ ೩-೪ ಕೊಠಡಿಗಳ ಮೇಲೆ ಮತ್ತೊಂದು ಕೊಠಡಿ ನಿರ್ಮಿಸಿದ್ದು 40 ವಿದ್ಯಾರ್ಥಿಗಳು ಆಶ್ರಯ ಪಡೆಯಬಹುದಾಗಿದೆ. ಸರ್ಕಾರ ಖಾಸಗಿ ಕಟ್ಟಡವನ್ನಾದರೂ ಬಾಡಿಗೆಗೆ ತೆಗೆದುಕೊಂಡು ಬಡ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಬಹುದು. ಆದರೂ ಅಧಿಕಾರಿಗಳು ವಿದ್ಯಾರ್ಥಿಗಳ ಹಿತದೃಷ್ಟಿ ಕೈಬಿಟ್ಟು ಹಾಸ್ಟೆಲ್ ಮುಚ್ಚುವ ಹುನ್ನಾರ ನಡೆಸಿರುವುದು ಎಂಬುದೇ ಪೋಷಕರ ಚಿಂತೆಗೆ ಕಾರಣವಾಗಿದೆ.ಬಾಕ್ಸ್.............ಮುಚ್ಚುವ ನಿರ್ಧಾರ ಮಾಡಬೇಡಿ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಫೌಢಶಾಲಾ ಮುಖ್ಯಶಿಕ್ಷಕರ ಹಾಗೂ ಉಪಪ್ರಾಂಶುಪಾಲರ ಸಂಘದ ಅಧ್ಯಕ್ಷ ರವಿಕುಮಾರ್.ಟಿ.ಕೆ ಮಾತನಾಡಿ, ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ದೇಶದ ವಿವಿಧ ಭಾಗಗಳಿಂದ ಕಾರ್ಮಿಕರು ವಲಸೆ ಬಂದು ದುಡಿಯುತ್ತಿದ್ದಾರೆ. ಅಂತಹವರ ಮಕ್ಕಳು ಒಂದೇ ಕಡೆ ನೆಲೆನಿಂತು ಶಿಕ್ಷಣ ಪಡೆಯಲು ಹಾಗೂ ಬಡತನದ ಕಾರಣ ಸರ್ಕಾರಿ ಹಾಸ್ಟೆಲ್‌ನಲ್ಲಿದ್ದುಕೊಂಡು ಉಚಿತ ವ್ಯಾಸಂಗ ಮುಂದುವರೆಸಲು ಅನೇಕ ವಿದ್ಯಾರ್ಥಿಗಳು ಇಲ್ಲಿ ಸೇರಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಹಾಸ್ಟೆಲ್ ಮುಚ್ಚುವ ನಿರ್ಧಾರ ಕೈಗೊಳ್ಳಬಾರದು. ಪರ್ಯಾಯವಾಗಿ ಇನ್ನಷ್ಟು ಮಕ್ಕಳಿಗೆ ಅನುಕೂಲವಾಗುವಂತೆ ಖಾಸಗಿ ಕಟ್ಟಡ ಬಾಡಿಗೆಗೆ ಪಡೆದು ಶಿಕ್ಷಣಕ್ಕೆ ಪ್ರೇರೇಪಣೆ ನೀಡಬೇಕು ಎಂದು ಹೇಳಿದರು.ಕೋಟ್ ..............ನಾನು ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿ ಇಲ್ಲಿನ ವಸ್ತುಸ್ಥಿತಿಯನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ. ರಾಷ್ಟ್ರೀಯ ಹೆದ್ದಾರಿಗೆ ಹಾಸ್ಟೆಲ್ ಕಟ್ಟಡ ಭಾಗಶಃ ಹೋಗಿರುವುದರಿಂದ ಸರ್ಕಾರದ ಮಾನದಂಡಕ್ಕೆ ಅನುಗುಣವಾಗಿ ಸ್ಥಳಾವಕಾಶದ ಕೊರತೆಯಿದೆ. ಹಾಸ್ಟೆಲ್ ಮುಚ್ಚುವ ಇಲ್ಲವೇ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮಾತುಕತೆ ನಡೆದಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.
-ಅನುಪಮ, ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂ.ಗ್ರಾ. ಜಿಲ್ಲೆಕೋಟ್...........ಯಾವುದೇ ಕಾರಣಕ್ಕೂ ಹಾಸ್ಟೆಲ್ ಮುಚ್ಚವ ಪ್ರಶ್ನೆಯೇ ಇಲ್ಲ. ಬಡ ವಿದ್ಯಾರ್ಥಿಗಳಿಗಾಗಿಯೇ ಇರುವ ಬಿಸಿಎಂ ಹಾಸ್ಟೆಲ್ ಅನ್ನು ಸದ್ಯ ಯತಾಸ್ಥಿತಿ ಕಾಪಾಡಿಕೊಳ್ಳುತ್ತೇವೆ. ಇಲ್ಲವೇ ಅತೀ ಶೀಘ್ರದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಟ್ಟು ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ.
-ಎನ್.ಶ್ರೀನಿವಾಸ್, ಶಾಸಕರು, ನೆಲಮಂಗಲ ವಿಧಾನ ಸಭಾ ಕ್ಷೇತ್ರಪೋಟೋ 11 :
ದಾಬಸ್ ಪೇಟೆ ಪಟ್ಟಣದಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯ.