ಹಾಸ್ಟೆಲ್‌ ಸಿಬ್ಬಂದಿ ಕೆಲಸಕ್ಕೆ ತನ್ನದೇ ಹಿರಿಮೆ ಇದೆ: ಡಾ.ಬಿ.ಗೋಪಾಲಕೃಷ್ಣ

KannadaprabhaNewsNetwork | Published : Feb 24, 2024 2:38 AM

ಸಾರಾಂಶ

ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರು, ನಿಲಯ ಪಾಲಕರಿಗೆ ಪುನಶ್ಚೇತನ ಕಾರ್ಯಾಗಾರ ಶುಕ್ರವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿದ್ಯಾರ್ಥಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಕಾರ್ಯ ವೈಖರಿ, ತನ್ನದೇಯಾದ ಗೌರವ, ಹಿರಿಮೆಯನ್ನು ಹೊಂದಿದೆ. ಕಾಳಜಿ ಕಾರ್ಯಕ್ರಮದಡಿ ಹಾಸ್ಟೆಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯ ರೀತಿ ನಡೆಯುತ್ತಿರುವುದು ಗಮನಕ್ಕೆ ಬಂದಿತು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ. ಗೋಪಾಲ ಕೃಷ್ಣ ಅವರು ಹೇಳಿದರು.ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರು, ನಿಲಯ ಪಾಲಕರಿಗೆ ಶುಕ್ರವಾರ ಏರ್ಪಡಿಸಲಾಗಿದ್ದ ಪುನಶ್ಚೇತನ ಕಾರ್ಯಗಾರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಪುನಶ್ಚೇತನ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿದ್ದು, ಅದೇ ರೀತಿ ಮುಂದಿನ ದಿನಗಳಲ್ಲಿ ಇತರೆ ಇಲಾಖೆಗಳ ಸಿಬ್ಬಂದಿಗೂ ತರಬೇತಿ ಕಾರ್ಯಾಗಾರ ನಡೆಸಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಸಣ್ಣ ಪುಟ್ಟ ಲೋಪದೋಷಗಳು ಇದ್ದು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರ ಸಹಕಾರಿಯಾಗಿದೆ ಎಂದ ಅವರು, ವಿದ್ಯಾರ್ಥಿಗಳು ಒಳ್ಳೆಯ ಸೌಲಭ್ಯ ಪಡೆದು ಕಷ್ಟದ ಬದುಕಿನಿಂದ ಹೊರಗೆ ಬಂದು ತನ್ನ ಕಾಲ ಮೇಲೆ ನಿಲ್ಲಲು ಬೇಕಾದ ಎಲ್ಲಾ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಇಲಾಖೆ ಉಪ ನಿರ್ದೇಶಕ ಸೋಮಶೇಖರ್ ಮಾತನಾಡಿ, ಜಿಲ್ಲೆಯ ವಸತಿ ನಿಲಯಗಳಲ್ಲಿ ಅಡುಗೆ ಮಾಡುವಾಗ ಸುರಕ್ಷತೆ - ಗುಣಮಟ್ಟದ ಅಡುಗೆ ಹಾಗೂ ಪೌಷ್ಠಿಕಾಂಶದ ವಿವರ ನೀಡಲು ಮತ್ತು ಬೆಂಕಿ ಅವಘಡಗಳ ಬಗ್ಗೆ ಸಿಬ್ಬಂದಿಗೆ ಮುಂಜಾಗ್ರತೆ ವಹಿಸಿ ತಕ್ಷಣ ಕ್ರಮ ಕೈಗೊಳ್ಳುವ ಕುರಿತು ತರಬೇತಿ ನೀಡಲು ಕಾರ್ಯಾ ಗಾರವನ್ನು ಆಯೋಜಿಸಲಾಗಿದೆ ಎಂದರು. ವಸತಿ ನಿಲಯಗಳಲ್ಲಿ ಅಡುಗೆ ಮಾಡುವಾಗ ಸುರಕ್ಷತೆ, ಗುಣಮಟ್ಟ ಪೌಷ್ಠಿಕಾಂಶದ ವಿವರಗಳ ಜೊತೆಗೆ ಗ್ಯಾಸ್, ಬೆಂಕಿ, ಎಣ್ಣೆಯಲ್ಲಿ ಬೆಂಕಿಯಾಗಿ ಪರಿವರ್ತಿತವಾಗುವ ಮುಂತಾದ ಅವಘಡಗಳ ಕುರಿತು ಮುಂಜಾಗ್ರತಾ ಕ್ರಮಗಳನ್ನು ಈ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಗುವುದೆಂದು ತಿಳಿಸಿದರು. ಸಿಬ್ಬಂದಿಯವರಲ್ಲಿ ಇರುವ ಮಾನಸಿಕ ಒತ್ತಡ ಮತ್ತು ಪ್ರೇರಣೆ ನೀಡುವ ನಿಟ್ಟಿನಲ್ಲಿ ವಸತಿ ನಿಲಯವನ್ನು ಸ್ವಚ್ಚವಾಗಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಬೇಕಾದಂತಹ ಪೂರಕ ವ್ಯವಸ್ಥೆ ಮಾಡಿಕೊಳ್ಳಲು ಈ ಕಾರ್ಯಾಗಾರ ನಡೆಸುತ್ತಿರುವ ಉದ್ದೇಶ ಎಂದರು. ಇಲಾಖೆ ಸಿಬ್ಬಂದಿಗಳಲ್ಲಿ ಇರುವ ಕುಂದು ಕೊರತೆಗಳ ಬಗ್ಗೆ ಈ ಕಾರ್ಯಾಗಾರದಲ್ಲಿ ಪರಿಹಾರ ಒದಗಿಸಲಾಗುವುದು. ಆರೋಗ್ಯ ಇಲಾಖೆಯಿಂದ ಇಲ್ಲಿ ಭಾಗವಹಿಸಿರುವ ಎಲ್ಲರಿಗೂ ಬಿಪಿ, ಶುಗರ್ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಇಲಾಖೆಯಡಿ ಜಿಲ್ಲೆಯಲ್ಲಿ 100 ವಿದ್ಯಾರ್ಥಿನಿಲಯ, 7 ವಸತಿ ಶಾಲೆ ಹಾಗೂ ಒಂದು ಆಶ್ರಮ ಶಾಲೆ ಕಾರ್ಯನಿರ್ವಹಿಸುತ್ತಿದ್ದು ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಅವರಿಗೆ ಶೈಕ್ಷಣಿಕ ಗುರಿ ಸಾಧಿಸಲು ಅಗತ್ಯವಾಗಿ ಬೇಕಾದ ಪೂರಕ ವ್ಯವಸ್ಥೆಯನ್ನು ಮಾಡಲು ಸೂಚನೆ ನೀಡಲಾಗಿದೆ ಎಂದರು. ಈ ಕಾರ್ಯಾಗಾರದಲ್ಲಿ ಆರ್‌ಸಿಹೆಚ್ ಅಧಿಕಾರಿ ಡಾ. ಮಂಜುನಾಥ್, ಮಾನಸಿಕ ತಜ್ಞ ವೈದ್ಯ ಡಾ.ವಿನಯ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಪ್ರವೀಣ್, ಬಿಸಿಎಂ ಇಲಾಖೆ ತಾಲ್ಲೂಕು ಅಧಿಕಾರಿ ಬಡಿಗೇರ ಉಪಸ್ಥಿತರಿದ್ದರು.

Share this article