ಕಟ್ಟಡ ಕಾರ್ಮಿಕರಿಂದ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ

KannadaprabhaNewsNetwork |  
Published : Jan 25, 2024, 02:07 AM IST
24ಎಚ್‌ವಿಆರ್‌1-  | Kannada Prabha

ಸಾರಾಂಶ

ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಗಳ ಜಂಟಿ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಕಟ್ಟಡ ಕಾರ್ಮಿಕರು ಅಹೋರಾತ್ರಿ ಧರಣಿ ಆರಂಭಿಸಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನೂತನ ತಂತ್ರಾಂಶದ ಪ್ರಕ್ರಿಯೆಯನ್ನು ಹಾವೇರಿ ಜಿಲ್ಲೆಗೆ ಮಾತ್ರ ಸ್ಥಗಿತಗೊಳಿಸಲಾಗಿದ್ದು, ಎಲ್ಲ ಜಿಲ್ಲೆಗಳಂತೆ ನಮ್ಮ ಜಿಲ್ಲೆಯಲ್ಲೂ ಪುನರಾರಂಭಿಸಬೇಕು ಹಾಗೂ ಎಲ್ಲ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಗಳ ಜಂಟಿ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಕಟ್ಟಡ ಕಾರ್ಮಿಕರು ಅಹೋರಾತ್ರಿ ಧರಣಿ ಆರಂಭಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಜಂಟಿ ಸಮಿತಿ ಅಧ್ಯಕ್ಷ ಅಜಯಕುಮಾರ ಹಡಪದ ಮಾತನಾಡಿ, ಜಿಲ್ಲೆಯ ಎಲ್ಲ ಕಟ್ಟಡ ಕಾರ್ಮಿಕರ ಹಿತದೃಷ್ಟಿಯಿಂದ ಕಾರ್ಮಿಕ ಮಂಡಳಿಯಿಂದ ಈಗಾಗಲೇ ಜಾರಿಯಲ್ಲಿರುವ ಎಲ್ಲ ಸೌಲಭ್ಯಗಳನ್ನು ಮೊಟಕುಗೊಳಿಸದೇ ಕಾರ್ಯರೂಪಕ್ಕೆ ತರಬೇಕು. ಕಟ್ಟಡ ಕಾರ್ಮಿಕರ ಫಲಾನುಭವಿಗಳು ವಿವಿಧ ಸಹಾಯಧನಗಳಿಗಾಗಿ ಸಲ್ಲಿಸಿರುವ ಅರ್ಜಿಗಳು ವಿಳಂಬವಾಗಿದ್ದು, ಕೂಡಲೇ ಮುಂದಿನ ಕ್ರಮಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು.

ಕಟ್ಟಡ ಕಾರ್ಮಿಕರ ಫಲಾನುಭವಿಗಳ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಮೊತ್ತವನ್ನು ಕಡಿತಗೊಳಿಸಿದ್ದನ್ನು ಕೈಬಿಟ್ಟು, ಹಿಂದಿನಂತೆಯೇ ಸಹಾಯಧನ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿರುವ ಕಟ್ಟಡ ಕಾರ್ಮಿಕರನ್ನು ಮಾತ್ರ ತನಿಖೆಗೆ ಒಳಪಡಿಸದೆ, ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನಕಲಿ ಕಾರ್ಮಿಕರ ಕಾರ್ಡ್‌ಗಳ ಪತ್ತೆ ಕಾರ್ಯ ಕೈಗೊಳ್ಳಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲೆಯ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಹೊರತುಪಡಿಸಿ ಬೇರೆ ಇಲಾಖೆ ಅಧಿಕಾರಿಗಳಿಂದ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಕಾರ್ಮಿಕ ಮುಖಂಡರಾದ ಡಿ.ಎಸ್‌. ಓಲೇಕಾರ, ನಿಂಗಪ್ಪ ಕಮ್ಮಾರ, ಸುರೇಶ ಹರಿಜನ, ಮಾಲತೇಶ ಕಮ್ಮಾರ, ಪ್ರಕಾಶ ದಾನಪ್ಪನವರ, ಗಂಗಾಧರ ಚರಂತಿಮಠ, ಮಾನಪ್ಪ ಕಮ್ಮಾರ, ಮಂಜುನಾಥ ದುಗ್ಗತ್ತಿ, ಮಹೇಶ ಕಮ್ಮಾರ, ಮಲ್ಲಪ್ಪ ನಾಗರಹೊಳ್ಳಿ, ನಂದಾ ಕಳಸದ, ರಾಜು ಆಲದಹಳ್ಳಿ, ರೇಣುಕಾ ಲಮಾಣಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ