ಕನ್ನಡಪ್ರಭ ವಾರ್ತೆ ನಾಲತವಾಡ
ಮನೆಯವರು ಮಲಗಿದ್ದ ವೇಳೆ ಮನೆ ಕುಸಿದಿದ್ದು, ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸುಲ್ತಾನಪೂರ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.ಸುಲ್ತಾನಪೂರ ಗ್ರಾಮದ ಮಹಾದೇವಪ್ಪ ಗಂಗಪ್ಪ ಅರಮನಿ ಎಂಬುವರ ಮನೆಯೇ ಏಕಾಏಕಿ ಕುಸಿದಿದೆ. ಈ ವೇಳೆ ಮನೆಯ ಕೋಣೆಯಲ್ಲಿ ಮಲಗಿದ್ದ ಪತ್ನಿ ನೀಲಮ್ಮ, ಮಗಳು ಮುತ್ತಮ್ಮ ಸಿಲುಕಿದ್ದರು. ಈ ವೇಳೆ ಮನೆಯ ಪಡಸಾಲೆಯಲ್ಲಿ ಮಲಗಿದ್ದ ಮಹಾದೇವಪ್ಪ ಮನೆ ಕುಸಿಯುವ ಶಬ್ದಕ್ಕೆ ಎಚ್ಚರಗೊಂಡು ಹೊರಬಂದಿದ್ದಾನೆ. ಆದರೆ, ಕೋಣೆಯಲ್ಲಿದ್ದ ತಾಯಿ, ಮಗಳು ಮಣ್ಣಿನಡಿ ಸಿಲುಕಿಕೊಂಡಿದ್ದರು. ಬಳಿಕ, ಅಕ್ಕಪಕ್ಕದ ಮನೆಯವರು ಆಗಮಿಸಿ ಹರಸಾಹಸಪಟ್ಟು ಮಣ್ಣಿನಡಿ ಸಿಲುಕಿದ್ದ ತಾಯಿ,ಮಗಳನ್ನು ಸುರಕ್ಷಿತವಾಗಿ ಹೊರತೆಗೆದು ನಾಲತವಾಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಮಾಹಿತಿ ತಿಳಿರು ತಾಪಂ ಇಒ ವೆಂಕಟೇಶ ವಂದಾಲ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಮತ್ತು ಮಗಳ ಆರೋಗ್ಯ ವಿಚಾರಿಸಿದರು. ಅಲ್ಲದೇ, ಅವರಿಗೆ ಧೈರ್ಯ ಹೇಳಿ ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸುವ ಭರವಸೆ ನೀಡಿದರು. ನಂತರ ಮನೆ ಕುಸಿದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದರು.ತಡರಾತ್ರಿ 3ರ ಸುಮಾರಿನಲ್ಲಿ ಘಟನೆ ಸಂಭವಿಸಿದೆ. ನಾನು ಪಡಸಾಲಿಯಲ್ಲಿ ಮಲಗಿದ್ದೆ, ಪತ್ನಿ ಹಾಗೂ ಮಗಳು ಒಳಗೆ ಮಲಗಿದ್ದರು. ಕುಸಿಯುವ ಶಬ್ದಕ್ಕೆ ಹೊರಬಂದೆ. ಪತ್ನಿ ಮತ್ತು ಮಗಳ ಮೇಲೆ ಛಾವಣಿ ಬಿದ್ದಿತ್ತು. ಅಕ್ಕಪಕ್ಕದ ಜನರು ಬಂದು ಅವರನ್ನು ಹೊರತೆಗೆದರು. ದೇವರ ದಯೆಯಿಂದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಹಾದೇವಪ್ಪ ಅರಮನಿ ಹೇಳಿದರು.
ಈ ವೇಳೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಂಗನಾಥ, ಬಿಜ್ಜೂರ ಗ್ರಾಪಂ ಪಿಡಿಒ ಕೆ.ಎಚ್.ಕುಂಬಾರ, ಕಂದಾಯ ನಿರೀಕ್ಷಕ ವಿ.ವಿ.ಅಂಬಿಗೇರ ಸೇರಿ ಹಲವರು ಹಾಜರಿದ್ದರು.