ಕಾಂಗ್ರೆಸ್‌ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಮನೆ ಹಂಚಿಕೆ

KannadaprabhaNewsNetwork |  
Published : Jan 25, 2026, 02:15 AM IST
ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಜನಸ್ತೋಮ | Kannada Prabha

ಸಾರಾಂಶ

42,345 ಮನೆಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ದೊಡ್ಡ ಸವಾಲೇ ಎಂಬಂತೆ ಇತ್ತು. ಪ್ರತಿ ಮನೆಗೂ ₹ 7.50 ಲಕ್ಷ ವೆಚ್ಚ ಅಂದರೆ ₹ 3000 ಸಾವಿರ ಕೋಟಿ ವೆಚ್ಚದಲ್ಲಿ ಮನೆಗಳ ನಿರ್ಮಾಣವಾಗಿದೆ. ಅದರಲ್ಲಿ ₹ 636 ಕೋಟಿ ಕೇಂದ್ರ ಸರ್ಕಾರ ವಿನಿಯೋಗಿಸಿದೆ.

ಹುಬ್ಬಳ್ಳಿ:

ರಾಜ್ಯಾದ್ಯಂತ 42,345 ಮನೆಗಳ ಲೋಕಾರ್ಪಣೆ ಕಾರ್ಯಕ್ರಮವು ಅಕ್ಷರಶಃ ಕಾಂಗ್ರೆಸ್‌ ಶಕ್ತಿ ಪ್ರದರ್ಶನದ ವೇದಿಕೆಯಾಯಿತು. ಅಲ್ಲದೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊಸ್ತಿಲಲ್ಲಿರುವ ಈ ಹೊತ್ತಿನಲ್ಲಿ ನಡೆದ ಕಾರ್ಯಕ್ರಮವೂ ಕಾರ್ಯಕರ್ತರು, ಮುಖಂಡರಲ್ಲಿ ಹೊಸ ಭರವಸೆ, ಹುಮ್ಮಸ್ಸು ತುಂಬುವಲ್ಲಿ ಯಶಸ್ವಿಯಾಯಿತು.

ಜತೆಗೆ ಗ್ಯಾರಂಟಿ ಯೋಜನೆಯಿಂದ ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗುತ್ತಿದೆ ಎಂಬ ಪ್ರತಿಪಕ್ಷದ ಆರೋಪಕ್ಕೆ ಕಾಂಗ್ರೆಸ್‌ ಉತ್ತರ ನೀಡಿತು. ಇದೇ ವೇಳೆ ಮನರೇಗಾ ಯೋಜನೆ ಹೆಸರು ಬದಲಿಸಿ ಕಾಯ್ದೆ ರೂಪಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಅಣಿ ಮಾಡಲು ಜನರಲ್ಲಿ ಹುರುಪು ತುಂಬಲು ನಾಂದಿ ಹಾಡಿತು.

42,345 ಮನೆಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ದೊಡ್ಡ ಸವಾಲೇ ಎಂಬಂತೆ ಇತ್ತು. ಪ್ರತಿ ಮನೆಗೂ ₹ 7.50 ಲಕ್ಷ ವೆಚ್ಚ ಅಂದರೆ ₹ 3000 ಸಾವಿರ ಕೋಟಿ ವೆಚ್ಚದಲ್ಲಿ ಮನೆಗಳ ನಿರ್ಮಾಣವಾಗಿದೆ. ಅದರಲ್ಲಿ ₹ 636 ಕೋಟಿ ಕೇಂದ್ರ ಸರ್ಕಾರ ವಿನಿಯೋಗಿಸಿದೆ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಒತ್ತಡಗಳ ಮಧ್ಯೆಯೇ ಇಷ್ಟೊಂದು ದೊಡ್ಡ ಹಾಗೂ ಅದ್ಧೂರಿ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಿರುವುದು ವಿಶೇಷ. ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಾರ್ಯಕ್ರಮ ನಡೆಸುವ ಮೂಲಕ ತನ್ನ ಸಾಧನೆ ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಯಿತು.

ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯತ್ತ ಸಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಉತ್ತರವಾಯಿತು. ಗ್ಯಾರಂಟಿಯಿಂದಾಗಿ ಆರ್ಥಿಕ ದಿವಾಳಿಯಾಗಿಲ್ಲ. ಬದಲಿಗೆ ತಲಾ ಆದಾಯದಲ್ಲಿ ಎತ್ತರಕ್ಕೇರಿದ್ದೇವೆ. ದೇಶದಲ್ಲೇ ನಂಬರ್‌ ಒನ್‌ ಸ್ಥಾನದಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ವೇದಿಕೆ ಮೂಲಕವೇ ತಿರುಗೇಟು ನೀಡಿದರು.

ಮನರೇಗಾ:

ಮನರೇಗಾ ಯೋಜನೆಯಿಂದ ಗಾಂಧೀಜಿ ಹೆಸರು ಕೈಬಿಟ್ಟು ವಿಬಿ ಜಿ ರಾಮ್‌ ಜಿ ಎಂಬ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಈ ಯೋಜನೆ ಜಾರಿಗೊಳಿಸಲು ಕಾಂಗ್ರೆಸ್‌ ಅವಕಾಶ ನೀಡಲ್ಲ. ಈ ಹೋರಾಟಕ್ಕೆ ಜನರು ಸಾಥ್‌ ನೀಡಬೇಕೆಂದು ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು. ಈ ಮೂಲಕ ಕಾಂಗ್ರೆಸ್‌ ಹೋರಾಟವನ್ನು ಜನಾಂದೋಲನವನ್ನಾಗಿಸುವ ಪರಿವರ್ತಿಸುವುದಾಗಿ ಸಂದೇಶ ಪರೋಕ್ಷವಾಗಿ ರವಾನಿಸಿದರು.

ಇನ್ನು ಮುಂಬೈ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್‌, ಕರ್ನಾಟಕದಲ್ಲೂ ಸ್ಥಳೀಯ ಸಂಸ್ಥೆ ಚುನಾವಣೆ ಹೊಸ್ತಿಲಲ್ಲೇ ಇದೆ. ಯಾವುದೇ ಕಾರಣಕ್ಕೂ ಎಡವಬಾರದು. ಸ್ಥಳೀಯ ಸಂಸ್ಥೆಗಳಲ್ಲಿ ತನ್ನ ಹಿಡಿತ ಸಾಧಿಸಬೇಕು. ಅದಕ್ಕಾಗಿ ಬರುವ ಪ್ರತಿ ಚುನಾವಣೆಯಲ್ಲೂ ಬಿಜೆಪಿ ವಿರುದ್ಧ ಮತ ಚಲಾಯಿಸುವ ಮೂಲಕ ಪಾಠ ಕಲಿಸಬೇಕು ಎಂದು ಕರೆ ನೀಡುವ ಮೂಲಕ ಖರ್ಗೆ ಅವರು, ಚುನಾವಣಾ ಪ್ರಚಾರಕ್ಕೆ ರಣಕಹಳೆ ಊದಿದಂತಾಯಿತು. ಈ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಸಾಗರದಂತೆ ಜನಸ್ತೋಮ:

ಸರ್ಕಾರದ ಸಾಧನೆ ಪ್ರತಿಬಿಂಬಿಸುವ ಅತಿ ದೊಡ್ಡ ಕಾರ್ಯಕ್ರಮವಾಗಿದ್ದ ಮನೆಗಳ ಹಂಚಿಕೆ ಕಾರ್ಯಕ್ರಮಕ್ಕೆ ಜನರು ಸಾಗರದಂತೆ ಹರಿದು ಬರುತ್ತಿತ್ತು. 1000ಕ್ಕೂ ಅಧಿಕ ಬಸ್‌, 1500ಕ್ಕೂ ಅಧಿಕ ಟೆಂಪೊ, 8 ಸಾವಿರಕ್ಕೂ ಅಧಿಕ ಕಾರು ಸೇರಿದಂತೆ ವಿವಿಧ ವಾಹನಗಳ ಮೂಲಕ ಫಲಾನುಭವಿಗಳು, ಪಕ್ಷದ ಕಾರ್ಯಕರ್ತರು ಆಗಮಿಸಿದ್ದರು. 1.20 ಲಕ್ಷ ಆಸನ ಹಾಕಲಾಗಿತ್ತು. ಅದೆಲ್ಲವೂ ತುಂಬಿ ಹೊರಗೆ ಜನರು ನಿಂತು ವೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂತು.

ಡಿಕೆ ಅನುಪಸ್ಥಿತಿ..!

ಈ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಮೊದಲೇ ಅಧಿಕಾರ ಹಸ್ತಾಂತರ ಕುರಿತಂತೆ ಸಾಕಷ್ಟು ಚರ್ಚೆಯಾಗುತ್ತಿದೆ. ಅಂಥದ್ದರಲ್ಲಿ ಡಿ.ಕೆ. ಶಿವಕುಮಾರ ಗೈರಾಗಿರುವುದೂ ಚರ್ಚೆಗೆ ಈಡು ಮಾಡಿಕೊಟ್ಟಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!